ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ: ಹೊಸಹಳ್ಳಿ ಕೆರೆ ವೀಕ್ಷಣೆ ಮಾಡಿದ ಸಚಿವ ಆರ್.ಅಶೋಕ್

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ: ಹೊಸಹಳ್ಳಿ ಕೆರೆ ವೀಕ್ಷಣೆ ಮಾಡಿದ ಸಚಿವ ಆರ್.ಅಶೋಕ್
ಹೊಸಹಳ್ಳಿ ಕೆರೆ ವೀಕ್ಷಣೆ ಮಾಡಿದ ಸಚಿವ ಆರ್.ಅಶೋಕ್

ಕಂದಾಯ ಸಚಿವ ಆರ್.ಅಶೋಕ್ ಗ್ರಾಮವಾಸ್ತವ್ಯ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಅವರು ಬೆಳ್ಳಂ ಬೆಳಗ್ಗೆ ವಾಯು ವಿಹಾರ ಮಾಡುತ್ತಾ ಹೊಸಹಳ್ಳಿ ಕೆರೆ ವೀಕ್ಷಣೆ ಮಾಡಿದ್ದಾರೆ. ಸಚಿವ ಅಶೋಕ್‌ಗೆ ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ, ಅಧಿಕಾರಿಗಳು ಸಾಥ್ ನೀಡಿದ್ದಾರೆ.

Ayesha Banu

|

Feb 21, 2021 | 9:45 AM

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ಹೊಸಹಳ್ಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಗ್ರಾಮವಾಸ್ತವ್ಯ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಅವರು ಬೆಳ್ಳಂ ಬೆಳಗ್ಗೆ ವಾಯು ವಿಹಾರ ಮಾಡುತ್ತಾ ಹೊಸಹಳ್ಳಿ ಕೆರೆ ವೀಕ್ಷಣೆ ಮಾಡಿದ್ದಾರೆ. ಸಚಿವ ಅಶೋಕ್‌ಗೆ ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ, ಅಧಿಕಾರಿಗಳು ಸಾಥ್ ನೀಡಿದ್ದಾರೆ. ಇನ್ನು 9 ಗಂಟೆಗೆ ದಲಿತರ ಮನೆಯಲ್ಲಿ ಸಚಿವರು ತಿಂಡಿ ಸೇವಿಸಿ ತಿಂಡಿ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ ಆರ್.ಅಶೋಕ್ ಏರಿ ಮೇಲೆ ಎಳನೀರು ಕುಡಿದು ದಿನಚರಿ ಆರಂಭಿಸಿದ ಸಚಿವ ಆರ್.ಅಶೋಕ್ ಗ್ರಾಮದ ದಲಿತರ ಮನೆಯಲ್ಲಿ ತಿಂಡಿ ಸೇವಿಸಿದ್ದಾರೆ. ಹೊಸಹಳ್ಳಿ ತಾಂಡದ ದಲಿತ ಕುಟುಂಬ ವೆಂಕಟಲಕ್ಷ್ಮಮ್ಮ ಎಂಬುವವರ ಮನೆಯಲ್ಲಿ ರಾಗಿರೊಟ್ಟಿ, ಉಚ್ಚೆಳ್ಳು ಚಟ್ನಿ ಮತ್ತು ಉಪ್ಪಿಟ್ಟು ಸೇವಿಸಿದ್ದಾರೆ.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಜನರ ಸಮಸ್ಯೆಗಳನ್ನ ಆಲಿಸಿ ಸ್ಥಳದಲ್ಲೇ ಜನರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಚಿವ ಆರ್.ಅಶೋಕ್ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎನ್ನುವ ವಿನೂತನ ಕಾರ್ಯಕ್ರಮವನ್ನ ಜಾರಿಗೆ ತಂದಿದ್ದಾರೆ. ಶನಿವಾರ(ಫೆ.20) ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಯಾ ಡಿಸಿ ಮತ್ತು ಅಧಿಕಾರಿ ವರ್ಗ 24 ಗಂಟೆಗಳ ಕಾಲ ಗ್ರಾಮದಲ್ಲೇ ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸಲಿದ್ದಾರೆ.

ಪ್ರತಿ ತಿಂಗಳ ಮೂರನೇ ವಾರದಲ್ಲೊಂದು ದಿನ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಒಂದು ಗ್ರಾಮದಲ್ಲಿ ವಾಸ್ತವ್ಯ ಹೂಡಿದರೇ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಒಂದು ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜೊತೆಗೆ ಈ ವೇಳೆ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಜೊತೆಯಲ್ಲೆ ವಾಸ್ತವ್ಯ ಹೂಡುವಂತೆ ಅಧಿಕಾರಿಗಳಿಗೆ ಸಚಿವ ಅಶೋಕ್ ಆದೇಶಿಸಿದ್ದು ಫೆ.20ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು.

ಅಲ್ಲದೆ ವಾಸ್ತವ್ಯದ ವೇಳೆ ಗ್ರಾಮದಲ್ಲಿನ ಸಮಸ್ಯೆಗಳ ಪರಿಶೀಲನೆ ಜನರ ಅಹವಾಲು ಸ್ವೀಕಾರ ಮಾಡಿ ಪಿಂಚಣಿ, ಆಧಾರ ಕಾರ್ಡ್, ಎಪಿಕ್ ಕಾರ್ಡ್, ಪಹಣಿ ತಿದ್ದುಪಡಿ, ಪೌತಿ ಖಾತೆ, ಸೇರಿದಂತೆ ಹಲವು ಸಮಸ್ಯೆಗಳಿಗೆ ಜನರಿಗೆ ಸ್ಥಳದಲ್ಲೆ ಪರಿಹಾರ ನೀಡುವಂತೆಯು ರಾಜ್ಯದ ಎಲ್ಲಾ ಡಿಸಿಗಳಿಗೆ ಸಚಿವ ಆರ್.ಅಶೋಕ್ ಸೂಚನೆ ನೀಡಿದ್ದಾರೆ.

24 ಗಂಟೆಗಳ ಕಾಲ ಆರ್.ಅಶೋಕ್ ಗ್ರಾಮ ವಾಸ್ತವ್ಯ ಶನಿವಾರ ಆರಂಭವಾದ ವಿನೂತನ ಕಾರ್ಯಕ್ರಮಕ್ಕೆ ಸಚಿವ ಆರ್.ಅಶೋಕ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ 24 ಗಂಟೆಗಳ ಕಾಲ ವಾಸ್ತವ್ಯ ಹೂಡುವ ಮೂಲಕ ಚಾಲನೆ ನೀಡಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಗ್ರಾಮಕ್ಕೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಜೊತೆ ಆಗಮಿ ಸಚಿವರು ಗ್ರಾಮದ ವೀಕ್ಷಣೆ ನಡೆಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ್ದಾರೆ. ಜೊತೆಗೆ ವಿವಿಧ ಯೋಜನೆಗಳಲ್ಲಿ ಗ್ರಾಮದ ವಿಶೇಷ ಚೇತನರ ಮನೆ ಬಾಗಿಲಿಗೆ ಸಲಕರಣೆಗಳನ್ನ ನೀಡಿ, ಗ್ರಾಮದಲ್ಲಿ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇನ್ನೂ ಸಂಜೆ ಗ್ರಾಮದ ಹಾಸ್ಟೇಲ್​ನಲ್ಲೆ ವಾಸ್ತವ್ಯ ಹೂಡಿ ಸಚಿವ ಅಶೋಕ್ ಭಾನುವಾರ ಬೆಳಗ್ಗೆ ದಲಿತರ ಮನೆಯಲ್ಲಿ ತಿಂಡಿ ಸೇವಿಸಿ ರಸ್ತೆ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಈಗಾಗಲೇ ಸಚಿವರ ವಿನೂತನ ಕಾರ್ಯಕ್ರಮಕ್ಕಾಗಿ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ಸೇರಿದಂತೆ ಜಿಲ್ಲಾಡಳಿತದ ವತಿಯಿಂದ ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ’ ಯೋಜನೆಗೆ ಶನಿವಾರ ಆರ್.ಅಶೋಕ್ ಚಾಲನೆ

Follow us on

Related Stories

Most Read Stories

Click on your DTH Provider to Add TV9 Kannada