ಬೆಂಗಳೂರು, ಏಪ್ರಿಲ್ 05: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ (Bengaluru Rameshwaram cafe blast Case) ತನಿಖೆ ಮತ್ತಷ್ಟು ಚುರುಕು ಪಡೆದುಕೊಂಡಿದೆ. ದೇಶದ 18 ಕಡೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ. ಈಗಾಗಲೇ ಇಬ್ಬರು ಆರೋಪಿಗಳ ಸುಳಿವಿಗೆ ತಲಾ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಎನ್‌ಐಎ ಎಲ್ಲಾ ಆಯಾಮದಲ್ಲೂ ಪ್ರಕರಣದ ತನಿಖೆ ಮಾಡುತ್ತಿದೆ. ಆದರೂ ಸಹ ಆರೋಪಿಗಳು ಪತ್ತಯಾಗಿಲ್ಲ. ಹೀಗಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಸಹಕರಿಸುವಂತೆ ಸಾರ್ವಜನಿಕರಿಗೆ ಎನ್‌ಐಎ ಮನವಿ ಮಾಡಿದೆ.
ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಎನ್‌ಐಎ, ಬಾಂಬ್ ಇಟ್ಟ ಮುಸಾವೀರ್ ಹಾಗೂ ಇದಕ್ಕೆ ರೂಪುರೇಷೆ ಸಿದ್ದಪಡಿಸಿದ ಅಬ್ದುಲ್ ಮತೀನ್ ತಾಹ ಇಬ್ಬರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಇವರಿಗೆ ಸಹಾಯ ಮಾಡಿದ ಮುಜಾಮಿಲ್ ಷರೀಫ್ ಎಂಬಾತನನ್ನು ಬಂಧನ ಮಾಡಲಾಗಿದೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್: ಮತ್ತಿಬ್ಬರ ಫೋಟೋ ಬಿಡುಗಡೆ ಮಾಡಿದ NIA, ಸುಳಿವು ಕೊಟ್ಟವರಿಗೆ ಬಂಪರ್ ಬಹುಮಾನ
ತನಿಖೆಯ ಭಾಗವಾಗಿ ಆರೋಪಿಗಳ ಸಂಬಂಧಿಕರು, ಸ್ನೇಹಿತರು, ಬಂಧಿತ ಆರೋಪಿಗಳು ಎಲ್ಲರ ವಿಚಾರಣೆ ನಡೆಯುತ್ತಿದೆ. ಇದು ಭಯೋತ್ಪಾದಕ ಕೃತ್ಯ ಆಗಿರುವುದರಿಂದ ವಿಚಾರಣೆ ಮಾಡುವವರ ವಿವರಗಳನ್ನ ಬಹಿರಂಗಪಡಿಸುವುದು ತನಿಖೆಗೆ ಹಿನ್ನಡೆ ಆಗುತ್ತೆ. ಹೀಗಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಸಹಕರಿಸಲು ಮನವಿ ಮಾಡಲಾಗಿದೆ.
ಇನ್ನು, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳಾದ ಅಬ್ದುಲ್ ಮತೀನ್ ತಾಹ, ಮುಸಾವೀರ್ ಪತ್ತೆಗೆ ಎನ್‌ಐಎ ತಲೆ ಕೆಡಿಸಿಕೊಂಡಿದೆ. ಈಗಾಗಲೇ ಆರೋಪಿಗಳ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ರೂ. ಬಹುಮಾನ ನೀಡೋದಾಗಿ ಎನ್‌ಐಎ ಘೋಷಿಸಿದೆ.
ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಪ್ರಕರಣದ ತನಿಖೆಗೆ ಇಳಿದ ಎನ್‌ಐಎ ನೇರಾ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಗೆ ಎಂಟ್ರಿಯಾಗಿತ್ತು. ತೀರ್ಥಹಳ್ಳಿಯ ಮುಜಾಮಿಲ್ ಬಾಂಬರ್ ಅನ್ನೋದನ್ನ ಪತ್ತೆ ಹಚ್ಚಿದೆ. ವಿಷ್ಯ ಅಂದ್ರೆ ಈ ಕೇಸ್‌ನಲ್ಲಿ ಬಿಜೆಪಿ ಮುಖಂಡನನ್ನೇ ಎನ್‌ಐಎ ವಶಕ್ಕೆ ಪಡೆದಿದೆ. ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ತೀರ್ಥಹಳ್ಳಿಯಿಂದ ಬೆಂಗಳೂರಿಗೆ ವಿಚಾರಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಉಗ್ರರು ಮಾಡಿದ ಖರ್ಚು 4,500 – 5 ಸಾವಿರ!
ಅಂದಹಾಗೆ, ಕಳೆದ ವಾರ ತೀರ್ಥಹಳ್ಳಿಯಲ್ಲಿ ಇಬ್ಬರು ಮುಸ್ಲಿಂ ಯುವಕರ ಮನೆ ಹಾಗೂ ಮೊಬೈಲ್ ಶಾಪ್‌ಗಳ ಮೇಲೆ NIA ದಾಳಿ ನಡೆಸಿತ್ತು. ತನಿಖೆ ವೇಳೆ ಮೊಬೈಲ್ ಅಂಗಡಿ ಮಾಲೀಕನ ಜೊತೆ ಸಾಯಿ ಪ್ರಸಾದ್ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ದೊರೆತಿದೆ. ಈ ಕಾರಣಕ್ಕೆ ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.