
ಬೆಂಗಳೂರು ಗ್ರಾಮಾಂತರ: ಮನದಾಳದ ನೋವನ್ನ ಮಹಿಳೆ ಆಕ್ರೋಶದ ಮೂಲಕ ಹೊರ ಹಾಕುತ್ತಿದ್ದರೆ, ಕುಟುಂಬಸ್ಥರು ಮೌನಕ್ಕೆ ಜಾರಿದ್ದಾರೆ. ಮನೆಯ ಒಳಗಡೆ ಕೂತು ಮಾತನಾಡಿದರು ಸಮಸ್ಯೆ ಬಗೆ ಹರಿಯುತ್ತಿಲ್ಲ ಎಂದು ಸ್ವತಃ ಹೆಣ್ಣೆತ್ತಿದ ಪೋಷಕರೇ ಬೀದಿಗೆ ಬಂದಿದ್ದು, ಮಗಳ ಜೀವನಕ್ಕಾಗಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಇತ್ತ ಹುಡುಗ ನನಗೆ ಆ ಹುಡುಗಿ ಬೇಡವೆ ಬೇಡ ಎಂದು ಪಟ್ಟು ಹಿಡಿದಿದ್ದಾನೆ. ಹೌದು ಅಂದಹಾಗೆ ಇಲ್ಲಿ ಈ ರೀತಿ ಮನೆ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿರುವ ಈಕೆಯ ಹೆಸರು ಪನ್ನಾಗ, ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆ ನಿವಾಸಿಯಾದ ಕಾರ್ತಿಕ್ ಎಂಬುವವನ ಜೊತೆ ಹಿರಿಯರೆ ಮದುವೆ ನಿಶ್ವಯ ಮಾಡಿ, ಇಬ್ಬರ ಒಪ್ಪಿಗೆಯ ಮೆರೆಗೆ ಮದುವೆ ಮಾಡಿದರು. ಆದರೀಗ ಗಂಡ ಹೆಂಡತಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಕಲಹ ಶುರುವಾಗಿದ್ದು, ಪತ್ನಿಯನ್ನ ತವರು ಮನೆಗೆ ಕಳಿಸಿದ್ದಾನೆ. ಇದೀಗ ಪತ್ನಿಯನ್ನ ಮನೆಗೆ ಕರೆಸಿಕೊಳ್ಳಲು ನಿರಾಕರಿಸಿದ್ದಾನೆ.
ಹಲವು ಬಾರಿ ಪತ್ನಿ ಮನೆಗೆ ಬರಲು ಯತ್ನಿಸಿದ್ರು ಗಂಡನ ಮನೆಯವರು ಬಿಡುತ್ತಿಲ್ಲ ಎಂದು ರೊಚಿಗೆದ್ದ ಕುಟುಂಬಸ್ಥರು ಇಂದು(ಏ.4) ಪತಿಯ ಮನೆ ಮುಂದೆ ಬಂದು ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ನನಗೆ ಗಂಡ ಬೇಕೆ ಬೇಕು ಮನೆಯಲ್ಲಿರಲು ಅವಕಾಶ ನೀಡಬೇಕು ಎಂದು ಗಂಡನ ಮನೆಯವರ ವಿರುದ್ದ ಪತ್ನಿ ಪನ್ನಾಗ ಆಕ್ರೋಶ ಹೊರ ಹಾಕಿದ್ದಳು. ಇನ್ನು ಗಂಡನ ಮನೆ ಮುಂದೆ ರಂಪಾಟ ಶುರುವಾಗುತ್ತಿದ್ದಂತೆ ಮಹಿಳಾ ಪೊಲೀಸ್ ಠಾಣೆಗೆ ಇಬ್ಬರನ್ನ ಕರೆಸಿಕೊಂಡ ದೊಡ್ಡಬಳ್ಳಾಪುರ ಮಹಿಳಾ ಠಾಣೆ ಪೊಲೀಸರು, ಇಬ್ಬರ ಮನವೊಲಿಸಲು ಸಮಯಾವಕಾಶ ನೀಡಿ ಕಳಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಗಂಡ ಹೆಂಡತಿ ಜಗಳ ಬಿಡಿಸಲು ಬಂದವಳ ಜೊತೆಯೇ ಗಂಡ ಪರಾರಿ; ಸಂತ್ರಸ್ಥ ಮಹಿಳೆಯಿಂದ ನ್ಯಾಯಕ್ಕಾಗಿ ಮನವಿ
ಈ ಬಗ್ಗೆ ಗಂಡ ಕಾರ್ತಿಕ್ನನ್ನ ಕೇಳಿದ್ರೆ ಪತ್ನಿಗೆ ನನ್ನ ಜೊತೆ ಮದುವೆಯಾಗುವ ಮುನ್ನ ಬೇರೋಬ್ಬನ ಜೊತೆ ಎಂಗೇಜ್ಮೇಂಟ್ ಮಾಡಿಕೊಂಡು ಅವನಿಗೆ ಕಿರುಕುಳ ನೀಡಿ ಕಳಿಸಿದ್ದಾರೆ. ಈ ವಿಚಾರ ನನಗೆ ತಿಳಿಸದೆ ಮದುವೆ ಮಾಡಿದ್ದು ನಾನು ಎಲ್ಲವನ್ನು ಸಹಿಸಿಕೊಂಡು ಸಂಸಾರ ಮಾಡಿದ್ದೆ. ಆದ್ರೆ ಈ ನಡುವೆ ನನಗೂ ಮಾನಸಿಕವಾಗಿ ಹಿಂಸೆ ನೀಡ್ತಿದ್ದು ನನ್ನ ಮಾನ ಮರ್ಯಾದೆ ತೆಗೆಯುತ್ತಿದ್ದಾರೆ ನನಗೆ ಈಕೆ ಬೇಡ ಅಂತಿದ್ದಾನೆ. ಒಟ್ಟಾರೆ ಏಳೇಳು ಜನ್ಮ ಜೊತೆಯಾಗಿರೋಣ ಎಂದು ಸಪ್ತಪದಿ ತುಳಿದಿದ್ದ ಜೋಡಿ ಒಂದು ವರ್ಷ ಕಳೆಯುವ ಮುನ್ನವೆ ಬೀದಿಗೆ ಬಂದಿರುವುದು ಎರಡು ಕುಟುಂಬಸ್ಥರ ಕಣ್ಣೀರಿಗೆ ಕಾರಣವಾಗಿದೆ. ಸದ್ಯ ಇಬ್ಬರ ಜಗಳ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:29 pm, Thu, 6 April 23