ಬೆಳಗಾವಿ: ಗಂಡ ಹೆಂಡತಿ ಜಗಳ ಬಿಡಿಸಲು ಬಂದವಳ ಜೊತೆಯೇ ಗಂಡ ಪರಾರಿ; ಸಂತ್ರಸ್ಥ ಮಹಿಳೆಯಿಂದ ನ್ಯಾಯಕ್ಕಾಗಿ ಮನವಿ

ಆತ ಸರ್ಕಾರಿ ನೌಕರಿಯಲ್ಲಿದ್ದ, ಕೆಲವೇ ವರ್ಷಗಳಲ್ಲಿ ನಿವೃತ್ತಿ ಹಂತಕ್ಕೂ ಬಂದಿದ್ದ. 23ವರ್ಷಗಳ ಹಿಂದೆ ಮದುವೆಯಾಗಿರುವ ಆತನಿಗೆ ಮದುವೆಗೆ ಬಂದ ಮೂರು ಮಕ್ಕಳಿದ್ದಾರೆ. ಮದುವೆಯಾದ ದಿನದಿಂದಲೂ ಗಂಡನ ಕಿರುಕುಳ ಸಹಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾಕೆಗೆ ಇತ್ತಿಚೀನ ದಿನಗಳಲ್ಲಿ ಗಂಡನ ಕಾಟ ಸಾಕಾಗಿ ಮಹಿಳಾ ಸಂಘಟನೆಗೆ ಹೋಗಿ ನ್ಯಾಯ ಕೇಳಿದ್ದಳು. ಆದರೆ ನ್ಯಾಯ ಬಗೆಹರಿಸುವುದಾಗಿ ಹೇಳಿದ್ದ ಮಹಿಳೆಯೇ ಇದೀಗ ಶಾಕ್ ನೀಡಿ ದೋಖಾ ಮಾಡಿದ್ದಾಳೆ.

ಬೆಳಗಾವಿ: ಗಂಡ ಹೆಂಡತಿ ಜಗಳ ಬಿಡಿಸಲು ಬಂದವಳ ಜೊತೆಯೇ ಗಂಡ ಪರಾರಿ; ಸಂತ್ರಸ್ಥ ಮಹಿಳೆಯಿಂದ ನ್ಯಾಯಕ್ಕಾಗಿ ಮನವಿ
ಬೆಳಗಾವಿ ನ್ಯಾಯ ಕೊಡಿಸುವುದಾಗಿ ಹೇಳಿ ಬಂದ ಮಹಿಳೆಯೊಂದಿಗೆ ಗಂಡ ಪರಾರಿ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 17, 2023 | 7:08 AM

ಬೆಳಗಾವಿ: ಇಲ್ಲಿ ಆಸ್ಪತ್ರೆಯ ವೀಲ್ಹ್ ಚೇರ್ ಮೇಲೆ ಕುಳಿತು ಕಣ್ಣೀರಿಡ್ತಿರುವ ಮಹಿಳೆ ಸ್ಥಿತಿ ನಿಜಕ್ಕೂ ಯಾರಿಗೂ ಬಾರದಿರಲಿ. ಅನ್ಯಾಯ ಆಗಿದೆ ಅಂತಾ ನ್ಯಾಯ ಕೇಳಲು ಹೋದ ಈ ಮಹಿಳೆಗೆ ನ್ಯಾಯ ಕೊಡಿಸುತ್ತೇನೆ ಅಂದವರೇ ಇದೀಗ ದೋಖಾ ಮಾಡಿದ್ದಾರೆ. ಹೌದು ಈ ಮಹಿಳೆಯ ಹೆಸರು ತಬ್ಸುಮ್ ಅಂತಾ ಬೆಳಗಾವಿಯ ಹನುಮಾನ್ ನಗರದ ನಿವಾಸಿ. ಕಳೆದ 23ವರ್ಷದ ಹಿಂದೆ ಬೆಳಗಾವಿಯ ಮೊಹಮ್ಮದ್ ಆಶೀಪ್ ಇನಾಮದಾರ ಎಂಬಾತನನ್ನ ಮದುವೆಯಾಗಿದ್ದಾರೆ. ಕೇಂದ್ರಿಯ ಅಬಕಾರಿ ಮತ್ತು ಕಸ್ಟಮ್ಸ್ ಆಯುಕ್ತರ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಆಗಿ ಈತ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಇನ್ನು ಈ ದಂಪತಿಗೆ ಇದೀಗ 21 ವರ್ಷದ, 19, 17ವರ್ಷದ ಮೂರು ಜನ ಗಂಡು ಮಕ್ಕಳು ಕೂಡ ಇದ್ದು ಇನ್ನೇನೂ ಕೆಲವೇ ವರ್ಷಗಳಲ್ಲಿ ಈ ಆಶೀಫ್ ಮಕ್ಕಳಿಗೆ ಮದುವೆ ಮಾಡಬೇಕಿತ್ತು. ಆದರೆ ಇದೀಗ ಆತನೇ ಇನ್ನೊಬ್ಬಳನ್ನ ಮದುವೆ ಮಾಡಿಕೊಂಡ ಹೋಗಿದ್ದಾನೆ.

ಇನ್ನು ಮೊಹಮ್ಮದ್ ಆಶೀಪ್ ಇನಾಮದಾರನ ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದರೂ ಹೆಂಡತಿ ಜೊತೆಗೆ ಜಗಳ ಮಾಡುವುದು, ಕಿರುಕುಳ ಕೊಡುವುದನ್ನ ಮಾತ್ರ ನಿಲ್ಲಿಸಿರಲಿಲ್ಲವಂತೆ. ಈ ಕಾರಣಕ್ಕೆ ಪತ್ನಿ ಮಹಿಳಾ ಸಂಘಟನೆಗಳ ಕಡೆಯಿಂದ ಆತನಿಗೆ ಬುದ್ದಿ ಕಲಿಸುವುದಕ್ಕೆ ಮಹಿಳಾ ಸಂಘಟನೆಯ ಮುಖಂಡ ಸೀಮಾ ಇನಾಮದಾರ್ ಎಂಬುವವರ ಬಳಿ ಹೋಗಿ ತನ್ನ ಕಷ್ಟ ಹೇಳಿದ್ದಾರೆ .ಇದಕ್ಕೆ ಆಶೀಫ್ ನಂಬರ್ ಪಡೆದ ಸೀಮಾ ಮೊದಲು ಆತನಿಗೆ ಹೆದರಿಕೆ ಹಾಕಿದ್ದಾರೆ. ಇದಾದ ಬಳಿಕ ಆತನೊಂದಿಗೆ ಸಲುಗೆಯಿಂದ ಮಾತಾಡಿ ಕೆಲವೇ ದಿನಗಳಲ್ಲಿ ಆತನನ್ನ ತನ್ನ ಬುಟ್ಟಿಗೆ ಬೀಳಿಸಿಕೊಂಡು ಒಂದು ವಾರದ ಹಿಂದೆ ಹೆಂಡತಿ ತಬ್ಸುಮ್​ಗೆ ಗೊತ್ತಿಲ್ಲದಂತೆ ಮದುವೆಯಾಗುವ ಮೂಲಕ ಅತೀ ದೊಡ್ಡ ದೋಖಾ ಮಾಡಿದ್ದಾಳೆ. ಅಷ್ಟಕ್ಕೂ ಇಲ್ಲಿ ತಬ್ಸುಮ್​ಗೆ ಗಂಡ ಆಶೀಪ್ ಕಿರುಕುಳ ಕೊಡುವುದನ್ನ ಸಹಿಸಿಕೊಳ್ಳಲು ಆಗಿಲ್ಲ. ಆತನಿಗೆ ಬುದ್ದಿ ಕಲಿಸಬೇಕು, ಈ ರೀತಿ ಕಿರುಕುಳ ನೀಡುವುದನ್ನ ನಿಲ್ಲಿಸಬೇಕು ಅಂತಾ ಯೋಚಿಸಿ ಈ ಸೀಮಾ ಇನಾಮದಾರಗೆ ಭೇಟಿಯಾಗಿದ್ದಾರೆ. ಈ ವೇಳೆ ನಿನ್ನೆ ಸಂಕಷ್ಟ ದೂರ ಮಾಡ್ತೇನಿ, ನಿನ್ನ ಗಂಡನ ಸರಿ ದಾರಿಗೆ ತರ್ತೇನಿ ಅಂತಾ ಆಕೆಯ ಮುಂದೆಯೇ ಆತನ ನಂಬರ್​ಗೆ ಸೀಮಾ ತನ್ನ ನಂಬರ್​ನಿಂದ ಕರೆ ಮಾಡಿ ಅವಾಜ್ ಹಾಕಿದ್ದಾಳೆ. ಇದಾದ ಬಳಿಕ ಸೀಮಾ ಮತ್ತು ಆಶೀಪ್ ನಡುವೆ ಪೋನ್ ಸಂಭಾಷಣೆ ಆಗ್ತಾ ಇಬ್ಬರ ನಡುವೆ ಸಲುಗೆ ಬೆಳೆದು ಇದೀಗ ಕಳೆದ ಸೋಮವಾರ ಹೇಳದೇ ಕೇಳದೇ ಸೀಮಾ ತನ್ನ ಮನೆಯಲ್ಲಿ ಆಶೀಪ್ ಜತೆಗೆ ನಿಖಾ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ:ಬೆಳಗಾವಿ: ಸಾಲ ವಾಪಸ್ ಕೇಳಿದ್ದಕ್ಕೆ ವೈದ್ಯನಿಂದ ಉದ್ಯಮಿಯ ಹತ್ಯೆ: ಕೊಲೆಯ ಪ್ಲಾನ್​ ಹೇಗಿತ್ತು ಗೊತ್ತಾ?

ಇದಾದ ನಾಲ್ಕು ದಿನದ ನಂತರ ಆಶೀಫ್ ತನ್ನ ಮಗನಿಗೆ ನಾನು ಮದುವೆಯಾಗಿದ್ದೇನೆ ಅಂತಾ ಪೋಟೊ ಕಳ್ಸಿದ್ದಾನೆ. ಈ ವಿಚಾರ ತಬ್ಸುಮ್​ಗೆ ಗೊತ್ತಾಗಿ ಗಂಡನಿಗೆ ಪೋನ್ ಮಾಡಿ ಬೈಯ್ದಿದ್ದಾಳೆ. ಇದಾದ ಬಳಿಕ ಮನೆಗೆ ಬಂದ ಆಶೀಫ್ ಹೆಂಡತಿ ತಬ್ಸುಮ್ ಮೇಲೆ ಹಲ್ಲೆ ಮಾಡಿ ಬ್ಲೇಡ್​ನಿಂದ ಕೊರೆದು ಗಾಯ ಮಾಡಿ ಹೋಗಿದ್ದಾನೆ. ಇದೀಗ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಬ್ಸುಮ್ ತನ್ನ ಪರಿಸ್ಥಿತಿ ನೆನೆದು ಕಣ್ಣೀರಿಡ್ತಿದ್ದಾಳೆ. ಸೀಮಾ ವಿರುದ್ದ ಆಕ್ರೋಶ ಹೊರ ಹಾಕ್ತಾ ಇಬ್ಬರಿಗೂ ತಕ್ಕ ಶಾಸ್ತಿ ಆಗಬೇಕು ಅಂತಾ ಒತ್ತಾಯ ಮಾಡ್ತಿದ್ದಾಳೆ. ಇತ್ತ ಕೆಲವು ಮಹಿಳೆಯರು ತಬ್ಸುಮ್ ಬೆಂಬಲಕ್ಕೆ ನಿಂತಿದ್ದು ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಒತ್ತಾಯ ಮಾಡ್ತಿದ್ದಾರೆ. ಇತ್ತ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ಇಂದು ಆಶೀಫ್ ಹಾಗೂ ಸೀಮಾ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆಯನ್ನ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಗಂಡನ ಸರಿ ದಾರಿ ತರಲು ಮಹಿಳಾ ಸಂಘಟನೆ ಬಳಿ ಹೋದ ಮಹಿಳೆಗೆ ಇದೀಗ ದಾರಿಯನ್ನೇ ತಪ್ಪಿಸಿ ದಿಕ್ಕೇ ತೋಚದ ಸ್ಥಿತಿಗೆ ತಂದು ನಿಲ್ಲಿಸಿರುವುದು ದುರಂತ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಸರ್ಕಾರಿ ನೌಕರ ಅನ್ನೋದನ್ನ ಮರೆತು ನಿಷ್ಪಕ್ಷಪಾತ ತನಿಖೆಯನ್ನ ನಡೆಸಿ ನೊಂದ ಮಹಿಳೆಗೆ ನ್ಯಾಯ ಕೊಡಿಸಬೇಕು ಇತ್ತ ನ್ಯಾಯ ಕೊಡಿಸುತ್ತೇನೆ ಅಂತಾ ದೋಖಾ ಮಾಡಿದ ಮಹಿಳೆಗೂ ತಕ್ಕ ಶಾಸ್ತಿ ಮಾಡಬೇಕು ಅನ್ನೋದು ಸಾರ್ವಜನಿಕರ ಒತ್ತಾಯ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ