ಬೆಳಗಾವಿ: ಸಾಲ ವಾಪಸ್ ಕೇಳಿದ್ದಕ್ಕೆ ವೈದ್ಯನಿಂದ ಉದ್ಯಮಿಯ ಹತ್ಯೆ: ಕೊಲೆಯ ಪ್ಲಾನ್​ ಹೇಗಿತ್ತು ಗೊತ್ತಾ?

ಜೀವ ಉಳಿಸಬೇಕಿದ್ದ ವೈದ್ಯನೇ ಇಲ್ಲಿ ವಿಲನ್ ಆಗಿದ್ದ. ಆಪ್ತನಿಗೆ ಅನುಕೂಲ ಆಗಲಿ ಅಂತಾ ಹಣದ ಸಹಾಯ ಮಾಡುವುದರ ಜೊತೆಗೆ ಆಸ್ಪತ್ರೆ ಕಟ್ಟಲು ಅನುಕೂಲ ಮಾಡಿಕೊಟ್ಟಿದ್ದ. ಇಷ್ಟೆಲ್ಲಾ ಸಹಾಯ ಮಾಡಿದವನನ್ನೇ ವೈದ್ಯ ಕೊಲೆ ಮಾಡಿದ್ದಾನೆ.

ಬೆಳಗಾವಿ: ಸಾಲ ವಾಪಸ್ ಕೇಳಿದ್ದಕ್ಕೆ ವೈದ್ಯನಿಂದ ಉದ್ಯಮಿಯ ಹತ್ಯೆ: ಕೊಲೆಯ ಪ್ಲಾನ್​ ಹೇಗಿತ್ತು ಗೊತ್ತಾ?
ಬೆಳಗಾವಿ ವೈದ್ಯನಿಂದ ಕೊಲೆಯಾದ ಉದ್ಯಮಿ ರಾಜು ಝಂವರ್
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 15, 2023 | 7:43 PM

ಬೆಳಗಾವಿ: ಗೋಕಾಕ್ ನಗರದಲ್ಲಿ ಎಫ್​.ಎಮ್​.ಸಿ.ಜಿ ವೋಲ್ ಸೇಲ್ ಡಿಸ್ಟ್ರಿಬ್ಯುಟರ್ ಆಗಿ ಯಶಸ್ವಿ ಉದ್ಯಮ ನಡೆಸುತ್ತಿದ್ದ ರಾಜು ಝಂವರ್ ಎಂಬುವವರು ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡುತ್ತಾ ಲೇವಾದೇವಿ ವ್ಯವಹಾರ ಸಹ ಮಾಡುತ್ತಿದ್ದರು. ಕೊರೊನಾ ಕಷ್ಟ ಕಾಲದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡುವುದರ ಮೂಲಕ ಮಾನವೀಯತೆ ಕೂಡ ಮೆರೆದಿದ್ದರು. ಹೀಗಿದ್ದವರು ಮನೆಯಿಂದ ನಾಪತ್ತೆಯಾಗಿದ್ದಾರೆ. ಇಡೀ ಕುಟುಂಬವೇ ಹುಡುಕಾಟ ನಡೆಸಿದ್ರೂ ಸಿಗದಿದ್ದಾಗ ಪೊಲೀಸರಿಗೆ ನಾಪತ್ತೆ ಪ್ರಕರಣ ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದಾಗ ಉದ್ಯಮಿ ರಾಜು ಝಂವರ್​ನ ಶವ ಸಿಕ್ಕಿದೆ. ನಂತರ ಕೊಲೆಯ ಕುರಿತು ತನಿಖೆ ಶುರುಮಾಡಿದ ಪೊಲೀಸರಿಗೆ ರಾಜು ಝಂವರ್ ಡಾ.ಸಚಿನ್ ಎಂಬುವವರಿಗೆ ಹಣವನ್ನ ಕೊಟ್ಟಿದ್ದು, ಕೊಟ್ಟ ಹಣವನ್ನ ವಾಪಾಸು ಕೇಳಿದ್ದಾರೆ. ಈ ಸಂಬಂಧ ವೈದ್ಯ ಮೂರು ಜನ ಯುವಕರಿಗೆ ಸುಫಾರಿ ನೀಡಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ ಗೋಕಾಕ್ ನಗರದ ಹೊರ ವಲಯದಲ್ಲಿರುವ ಯೋಗಿ ಕೊಳ್ಳ ಅಂತಾನೇ ಫೇಮಸ್ ಇರುವ ಈ ಜಾಗದಲ್ಲಿ ನಾಪತ್ತೆಯಾದ ಉದ್ಯಮಿಯ ಶವಸಿಕ್ಕಿದ್ದು, ಈ ವಿಚಾರ ಗೋಕಾಕ್ ಜನರನ್ನ ಬೆಚ್ಚಿ ಬೀಳುವಂತೆ ಮಾಡಿತ್ತು. ಫೆಬ್ರವರಿ 10ರ ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಇರುವ ಸ್ನೇಹಿತ ವೈದ್ಯನ ಭೇಟಿಯಾಗಿ ಬರ್ತೀನಿ ಎಂದು ಮನೆಯಿಂದ ದ್ವಿಚಕ್ರವಾಹನದಲ್ಲಿ ಉದ್ಯಮಿ ರಾಜು ಝಂವರ್ ತೆರಳಿದ್ದ. ಆದ್ರೆ ಮಧ್ಯರಾತ್ರಿಯಾದರೂ ರಾಜು ಝಂವರ್ ವಾಪಸ್ ಬರದ ಹಿನ್ನೆಲೆ ಕುಟುಂಬಸ್ಥರು ಆತಂಕಗೊಂಡಿದ್ದರು. ನಾಪತ್ತೆಯಾಗಿದ್ದ ರಾಜು ಝಂವರ್​ರವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ರಾತ್ರಿಯೀಡಿ ಹುಡುಕಾಟ ನಡೆಸಿದ್ದ ಕುಟುಂಬಸ್ಥರು ಮಾರನೇ ದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ಗೋಕಾಕ್​ ಶಹರ ಠಾಣೆಯಲಿ ನಾಪತ್ತೆ ಪ್ರಕರಣ ದಾಖಲಿಸಿ, ಪ್ರಕರಣದ ಪತ್ತೆಗೆ ಗೋಕಾಕ್ ಡಿವೈಎಸ್​ಪಿ ನೇತೃತ್ವದಲ್ಲಿ ತಂಡವನ್ನು ರಚಿಸಿ, ಬಳಿಕ ಉದ್ಯಮಿ ರಾಜು ಝಂವರ್‌ಗೆ ಯಾರ್ಯಾರು ಕರೆ ಮಾಡಿದ್ದಾರೆ, ಯಾರು ಕೊನೆಯ ಬಾರಿ ಮಾತನಾಡಿದ್ದಾರೆ ಎಂದು ಪರಿಶೀಲನೆ ನಡೆಸಿದ್ದರು‌. ಹೀಗೆ ಕಾಲ್ ಡಿಟೈಲ್ ತೆಗೆಸಿ ನಂತರ ಎಲ್ಲರನ್ನು ಠಾಣೆಗೆ ಕರೆಯಿಸಿ ವಿಚಾರಣೆ ಸಹ ನಡೆಸಿದ್ದರು. ಈ ಸಂದರ್ಭದಲ್ಲಿ ವೈದ್ಯರನ್ನು ಸೇರಿ ಸಾಕಷ್ಟು ಜನ ತಮಗೆ ಗೊತ್ತೇ ಇಲ್ಲಾ ಅಂತಾ ಹೇಳಿ ವಾಪಾಸ್ ಆಗಿದ್ದರು.

ಇದನ್ನೂ ಓದಿ:ಕೌಟುಂಬಿಕ ಕಲಹ: ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿರುವ ಆರೋಪ

ಇದಾದ ಬಳಿಕ ಗೋಕಾಕ್ ನಗರದಲ್ಲಿರುವ ಸಿಟಿ ಆಸ್ಪತ್ರೆ ಬಳಿ ರಾಜು ಅವರ ಬೈಕ್ ಇದೆ ಅನ್ನೋದು ಗೊತ್ತಾಗಿದೆ. ಕೂಡಲೇ ಅದನ್ನ ಪರಿಶೀಲನೆ ಮಾಡಿಸಿ ಸಿಸಿಟಿವಿ ದೃಶ್ಯ ನೋಡಿದ್ದಾರೆ. ಈ ವೇಳೆ ಆಸ್ಪತ್ರೆಯ ವೈದ್ಯ ಡಾ.ಸಚಿನ್ ಶಿರಗಾವಿ ಮೇಲೆ ಬಲವಾದ ಅನುಮಾನ ಬಂದಿತ್ತು. ನಾಪತ್ತೆಯಾದ ಉದ್ಯಮಿ ರಾಜು ಝಂವರ ಹಾಗೂ ವೈದ್ಯ ಡಾ.ಸಚಿನ್ ಶಿರಗಾವಿ ಮಧ್ಯೆ ಹಣಕಾಸು ವ್ಯವಹಾರ ಇದ್ದಿದ್ದು ಗೊತ್ತಾಗಿದೆ. ಅದೇ ರೀತಿ ಡಾ.ಸಚಿನ್ ಶಿರಗಾವಿಗೂ ಸಹ ಹಣಕಾಸಿನ ನೆರವು ನೀಡಿದ್ದು ತಿಳಿದು. ಡಾ.ಸಚಿನ್ ಶಿರಗಾವಿ ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಆಗ ಸತ್ಯ ಬಾಯಿಬಿಟ್ಟಿದ್ದು, ಮೂವರು ಯುವಕರಿಗೆ 50 ಸಾವಿರ ರೂಪಾಯಿ ಹಣ ನೀಡಿ ಅವರ ಸಹಾಯದಿಂದ ರಾಜು ಝಂವರ್ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಉದ್ಯಮಿ ಹತ್ಯೆಗೆ ಡಾಕ್ಟರ್​ ಮಾಡಿದ್ದ ಖತರ್ನಾಕ್​ ಪ್ಲಾನ್​

ಡಾ.ಸಚಿನ್ ಶಿರಗಾವಿ ಉದ್ಯಮಿ ರಾಜು ಝಂವರ್ ಬಳಿ ಸಾಲ ಪಡೆದಿದ್ದನಂತೆ. ಸುಮಾರು ಐವತ್ತರಿಂದ ಅರವತ್ತು ಸಾವಿರ ರೂಪಾಯಿಯಷ್ಟು ಹಣ ನೀಡಬೇಕಿತ್ತಂತೆ‌. ಇದಕ್ಕಾಗಿ ಹಣ ನೀಡ್ತೀನಿ ಬಾ ಎಂದು ವೈದ್ಯ ಸಚಿನ್ ಸಿಟಿ ಆಸ್ಪತ್ರೆ ಬಳಿ ರಾಜುನನ್ನ ಕರೆಯಿಸಿಕೊಂಡಿದ್ದಾನೆ. ಆಗ ತನ್ನ ಸಿಟಿ ಆಸ್ಪತ್ರೆಗೆ ಉದ್ಯಮಿ ರಾಜು ಝಂವರ್‌ನ ಕರೆಸಿಕೊಂಡಿದ್ದ ಡಾ.ಸಚಿನ್ ಶಿರಗಾವಿ ಆಮ್ಲೆಟ್ ತಿಂದು ಬರೋಣ ಬಾ ಅಂತಾ ಹೇಳಿ, ಯೋಗಿಕೊಳ್ಳ ಮಾರ್ಗದ ಬಳಿ ಮಾರ್ಕಂಡೇಯ ನದಿ ದಡಕ್ಕೆ ಕರೆದುಕೊಂಡು ಹೋಗಿದ್ದಾನೆ. ಯೋಗಿಕೊಳ್ಳ ಹೋಗುವ ಮಾರ್ಗ ನಿರ್ಜನ ಪ್ರದೇಶವಾಗಿದ್ದು, ರಾತ್ರಿ ವೇಳೆ ಜನಸಂಚಾರ ಸಹ ಇರಲ್ಲ. ಇದನ್ನೇ ಲಾಭವಾಗಿಸಿಕೊಂಡ ಡಾ.ಸಚಿನ್ ಶಿರಗಾವಿ ಮೊದಲೇ ಪ್ಲ್ಯಾನ್ ಮಾಡಿದಂತೆ ಗೋಕಾಕ್ ನಿವಾಸಿಗಳಾದ ಶಫತ್ ಇರ್ಷಾದ್ ಅಹ್ಮದ್ ತಾಸ್ಗಾರ್, ಮೋಹಿನ್ ಪಟೇಲ್, ಅಬುತಾಲಾ ಮುಲ್ಲಾಗೆ ಐವತ್ತು ಸಾವಿರ ಹಣ ನೀಡಿ ಯೋಗಿಕೊಳ್ಳ ಮಾರ್ಗದ ಬಳಿ ಗುಡ್ಡದಲ್ಲಿ ಅಡಗಿ ಕುಳಿತುಕೊಳ್ಳುವಂತೆ ತಿಳಿಸಿದ್ದನಂತೆ.

ಈ ಮೂವರು ಯುವಕರು ಯೋಗಿಕೊಳ್ಳ ಮಾರ್ಗದಲ್ಲಿ ಇರುವ ಬೆಟ್ಟದಲ್ಲಿ ಅಡಗಿ ಕುಳಿತಿದ್ದರು. ಡಾ.ಸಚಿನ್ ಶಿರಗಾವಿ ಹಾಗೂ ಉದ್ಯಮಿ ರಾಜು ಝಂವರ್ ಬಂದ ಮೇಲೆ ಇಬ್ಬರು ಮಾತಿಗಿಳಿದಿದ್ದಾರೆ. ಹಣಕಾಸು ವಿಚಾರವಾಗಿ ಇಬ್ಬರ ಮಧ್ಯೆ ಮತ್ತೆ ಗಲಾಟೆ ಶುರುವಾಗಿದೆ. ಆಗ ಇನ್ನುಳಿದ ಮೂವರು ಯುವಕರು ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಹರಿತವಾದ ಆಯುಧದಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಇದಕ್ಕೂ ಮುನ್ನ ವೈದ್ಯ ತನ್ನ ಲೈಸೆನ್ಸ್ ರಿವಾಲ್ವರ್‌ನಿಂದ ಫೈರ್ ಮಾಡಲು ಯತ್ನಿಸಿದ್ದಾನೆ. ಆದ್ರೆ ಅದು ಫೈಯರ್ ಆಗಿಲ್ಲ. ಹೀಗೆ ಉದ್ಯಮಿ ರಾಜು ಝಂವರ್ ಹತ್ಯೆ ಮಾಡಿದ ಬಳಿಕ ಶವವನ್ನು ಡಾ.ಸಚಿನ್ ಶಿರಗಾವಿ ಆಸ್ಪತ್ರೆಯಿಂದ ತಂದಿದ್ದ ಡೆಡ್ ಬಾಡಿ ಬ್ಯಾಗ್‌ನಲ್ಲಿ ಕಟ್ಟಿಕೊಂಡು ಕಾರಿನಲ್ಲಿ ತಗೆದುಕೊಂಡು ಹೋಗಿದ್ದಾರೆ. ಬಳಿಕ ಮಧ್ಯರಾತ್ರಿ 2 ರಿಂದ 3 ಗಂಟೆಯ ಮಧ್ಯೆ ಕೊಳವಿ ಗ್ರಾಮದ ಬಳಿ ಘಟಪ್ರಭಾ ಎಡದಂಡೆ ಕಾಲುವೆಗೆ ಶವವನ್ನ ಎಸೆದು ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ಡಾ.ಸಚಿನ್ ಶಿರಗಾವಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ:ಬರ್ತ್​ಡೇ ಗಿಫ್ಟ್​ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ, ರಿಲೇಷನ್​ಶಿಪ್​ನಲ್ಲಿದ್ದ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್

ಉದ್ಯಮಿ ಶವಕ್ಕಾಗಿ ಹುಡುಕಾಟ

ಇನ್ನು ಉದ್ಯಮಿ ರಾಜು ಝಂವರ್ ಹತ್ಯೆಯಾಗಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರು, ಸ್ನೇಹಿತರು ಕಾಲುವೆ ಬಳಿ ಆಗಮಿಸಿ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳೀಯ ಈಜುಗಾರರ ಜೊತೆ ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಶೋಧಕಾರ್ಯ ಆರಂಭಿಸಿದ್ದಾರೆ. ಹಿಡಕಲ್ ಡ್ಯಾಂನಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡುವುದ‌ನ್ನು ನಿಲ್ಲಿಸಿ ಶೋಧಕಾರ್ಯ ನಡೆಸಿದ್ದಾರೆ. ಘಟಪ್ರಭಾ ಎಡದಂಡೆ ಕಾಲುವೆ ಅಕ್ಕಪಕ್ಕದ ಗ್ರಾಮಗಳಲ್ಲಿಯೂ ಯಾವುದಾದರೂ ಮೃತದೇಹ ಪತ್ತೆಯಾದ್ರೆ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಕಳೆದ ಮೂರು ದಿನಗಳಿಂದ ಶವಕ್ಕಾಗಿ ಶೋಧಕಾರ್ಯ ನಡೆಸಿದ್ದು ಈವರೆಗೂ ಶವ ಮಾತ್ರ ಪತ್ತೆಯಾಗಿಲ್ಲ.

ಇನ್ನು ಇಂದು(ಫೆ.14) ಆರೋಪಿ ಗೋಕಾಕ್​ನಲ್ಲಿ ಆರೋಪಿ ವೈದ್ಯ ಸಚಿನ್​ನನ್ನ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಇತ್ತ ಶವ ಸಿಗದ ಹಿನ್ನೆಲೆ ಇನ್ನೂ ಕೂಡ ಶೋಧ ಕಾರ್ಯ ಮುಂದುವರೆದಿದ್ದು ಈ ವರೆಗೂ ಸುಮಾರು 40 ಕಿಮೀ ವರೆಗೂ ಇಂಚಿಂಚೂ ಶೋಧ ನಡೆಸಿಕೊಂಡು ಹೋಗ್ತಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದವರನ್ನ ಕಳೆದುಕೊಂಡು ಇಡೀ ಕುಟುಂಬ ಇದೀಗ ಕಣ್ಣೀರಿಡ್ತಿದ್ದು ಜೀವ ಉಳಿಸಬೇಕಿದ್ದ ವೈದ್ಯ ಈ ರೀತಿ ಮಾಡಿದ್ದು ಆತನಿಗೆ ತಕ್ಕ ಶಿಕ್ಷೆ ಕೊಡಿಸಿ ನಮಗೆ ನ್ಯಾಯ ಕೊಡಿ ಅಂತಾ ಕೇಳಿಕೊಳ್ತಿದ್ದಾರೆ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Wed, 15 February 23