Tamil Nadu: ತಮಿಳುನಾಡು; ಡಿಎಂಕೆ ಕೌನ್ಸಿಲರ್ ನೇತೃತ್ವದ ಗುಂಪಿನಿಂದ ಹಲ್ಲೆ, ಯೋಧ ಸಾವು
ಘಟನೆಗೆ ಸಂಬಂಧಿಸಿ ಡಿಎಂಕೆ ಕೌನ್ಸಿಲರ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಡಿಎಂಕೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಚೆನ್ನೈ: ಡಿಎಂಕೆ (DMK) ಕೌನ್ಸಿಲರ್ ನೇತೃತ್ವದ ಗುಂಪೊಂದು ಹಲ್ಲೆ ಮಾಡಿದ್ದರಿಂದ 29 ವರ್ಷ ವಯಸ್ಸಿನ ಯೋಧರೊಬ್ಬರು ಮೃತಪಟ್ಟ ಘಟನೆ ತಮಿಳುನಾಡಿನ (Tamil Nadu) ಕೃಷ್ಣಗಿರಿ (Krishnagiri) ಜಿಲ್ಲೆಯಲ್ಲಿ ನಡೆದಿದೆ. ಮೃತ ಯೋಧ ಪ್ರಭು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಎನ್ನಲಾಗಿದೆ. ಸಾರ್ವಜನಿಕ ಟ್ಯಾಂಕೊಂದರ ಬಳಿ ಬಟ್ಟೆ ತೊಳೆಯುತ್ತಿದ್ದ ವಿಚಾರವಾಗಿ ಯೋಧ ಮತ್ತು ಕೌನ್ಸಿಲರ್ ಚಿನ್ನಸ್ವಾಮಿ ನಡುವೆ ಜಗಳವಾಗಿ, ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಯೋಧ ಪ್ರಭು ಅವರ ಸಹೋದರ ಪ್ರಭಾಕರನ್ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 8ರಂದು ಘಟನೆ ನಡೆದಿತ್ತು. ಮಾತಿಗೆ ಮಾತು ಬೆಳೆದಾಗ ಡಿಎಂಕೆ ಕೌನ್ಸಿಲರ್ ಮತ್ತು ಅವರ ಜತೆಗಿದ್ದ ಗುಂಪು ಯೋಧ ಹಾಗೂ ಅವರ ಸಹೋದರನ ಮೇಲೆ ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡ ಪ್ರಭು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಡಿಎಂಕೆ ಕೌನ್ಸಿಲರ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಡಿಎಂಕೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ತಮಿಳುನಾಡು: ಕ್ರೀಡಾಕೂಟ ಮುಗಿಸಿ ಮನೆಗೆ ಬರುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರು ಕಾವೇರಿ ನದಿಯಲ್ಲಿ ಮುಳುಗಿ ಸಾವು
ರಾಜಕೀಯ ಸ್ವರೂಪ ಪಡೆದ ಪ್ರಕರಣ
ಇದೀಗ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಯೋಧನ ಹತ್ಯೆ ಬಗ್ಗೆ ಆಡಳಿತಾರೂಢ ಡಿಎಂಕೆ ವಿರುದ್ಧ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ. ಯೋಧರೊಬ್ಬರಿಗೆ ಅವರ ತವರಿನಲ್ಲೇ ಭದ್ರತೆ ಇಲ್ಲದಂತಾಗಿದೆ. ಗೃಹ ಇಲಾಖೆಯನ್ನೂ ಹೊಂದಿರುವ ಭಿನ್ನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಜನ ಗಮನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ