Tripura Assembly Election: ತ್ರಿಪುರಾ ವಿಧಾನಸಭೆ ಚುನಾವಣೆ; ಇಂದು ಮತಯಂತ್ರ ಸೇರಲಿದೆ 259 ಅಭ್ಯರ್ಥಿಗಳ ಭವಿಷ್ಯ

ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, 259 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಲಿದೆ. 3,337 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

Tripura Assembly Election: ತ್ರಿಪುರಾ ವಿಧಾನಸಭೆ ಚುನಾವಣೆ; ಇಂದು ಮತಯಂತ್ರ ಸೇರಲಿದೆ 259 ಅಭ್ಯರ್ಥಿಗಳ ಭವಿಷ್ಯ
ಮತ ಚಲಾವಣೆ ಮಾಡಲು ಬಂದಿದ್ದವರು ಭದ್ರತಾ ಸಿಬ್ಬಂದಿ ಜತೆ ವೋಟರ್ ಐಡಿ ಪ್ರದರ್ಶಿಸಿದರು (ಪಿಟಿಐ ಚಿತ್ರ)Image Credit source: PTI
Follow us
Ganapathi Sharma
|

Updated on:Feb 16, 2023 | 7:50 AM

ಅಗರ್ತಲ: ತ್ರಿಪುರಾದ (Tripura) 60 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ (Assembly Election) ನಡೆಯುತ್ತಿದ್ದು, ಗುರುವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, 259 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಲಿದೆ. 3,337 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬಿಜೆಪಿ, ಐಪಿಎಫ್​ಟಿ ಮೈತ್ರಿ ಹಾಗೂ ಕಾಂಗ್ರೆಸ್, ಸಿಪಿಐಎಂ ಮೈತ್ರಿ ಮಧ್ಯೆ ನೇರ ಹಣಾಹಣಿ ಇದೆ. ಮತಗಟ್ಟೆಗಳ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ. 1,100 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದ್ದು, 28 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಗಿಟ್ಟೆ ಕಿರಣ್​ಕುಮಾರ್ ದಿನಕರ್ರೊ ತಿಳಿಸಿದ್ದಾರೆ. ಮುಕ್ತ ಮತ್ತು ಶಾಂತಿಯುತ ಚುನಾವಣೆಗಾಗಿ 31,000 ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ರಾಜ್ಯ ಸಶಸ್ತ್ರ ಪಡೆ ಮತ್ತು ಪೊಲೀಸ್ ವಿಭಾಗದ 31,000 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

25 ವರ್ಷಗಳಿಂದ ಎಡಪಕ್ಷದ ಆಡಳಿತವಿದ್ದ ತ್ರಿಪುರಾದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ಮತ್ತು ಅಭೂತಪೂರ್ವ ಗೆಲುವು ದಾಖಲಿಸಿ ಆಡಳಿತದ ಗದ್ದುಗೆಗೆ ಏರಿತ್ತು. ಬಳಿಕ ವಿಪ್ಲವ್ ಕುಮಾರ್ ದೇವ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಕಳೆದ ವರ್ಷ ಮೇ ತಿಂಗಳಲ್ಲಿ ಅವರನ್ನು ಬದಲಾಯಿಸಿ ಮಾಣಿಕ್ ಶಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಡಪಕ್ಷ ಕೇವಲ 16 ಸ್ಥಾನಗಳನ್ನು ಗಳಿಸಲಷ್ಟೆ ಶಕ್ಯವಾಗಿತ್ತು. ಸಿಪಿಎಂ ಶೇ 42.22 ಮತಹಂಚಿಕೆ ಪಡೆದಿದ್ದರೆ ಬಿಜೆಪಿ ಶೇ 43.59ರ ಮತಹಂಚಿಕೆ ಪಡೆದಿತ್ತು.

ಇದ್ದಾರೆ 28.13 ಲಕ್ಷ ಮತದಾರರು

ಒಟ್ಟು 28.13 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಈ ಪೈಕಿ 13.53 ಲಕ್ಷ ಮಹಿಳಾ ಮತದಾರರಿದ್ದಾರೆ. ಒಟ್ಟು 259 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ 20.

ಬಿಜೆಪಿ 55 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಿಪಿಎಂನ 47 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ತಿಪ್ರಾ ಮೋಥಾ 42 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ತೃಣಮೂಲ ಕಾಂಗ್ರೆಸ್ 28 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 58 ಸ್ವತಂತ್ರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

ಇದನ್ನೂ ಓದಿ: ನಾವು ಯಾರ ಬಿ ಟೀಮ್ ಅಲ್ಲ, ನಾವು ಯಾರ ಮುಂದೆಯೂ ತಲೆಬಾಗಲ್ಲ: ಅಮಿತ್ ಶಾಗೆ ತಿಪ್ರಾ ಮೋಥಾ ಮುಖ್ಯಸ್ಥರ ಪ್ರತಿಕ್ರಿಯೆ

2018ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ, ಆದರೆ ಈ ಬಾರಿ ಈಶಾನ್ಯ ರಾಜ್ಯದಿಂದ ಪಕ್ಷವು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದು, ಹಿಂದಿನ ಚುನಾವಣೆಯಲ್ಲಿ ಸೋತ 5 ಕ್ಷೇತ್ರಗಳೂ ಸೇರಿ ತ್ರಿಪುರಾದ 13 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಈ ಮಧ್ಯೆ, ಬಿಜೆಪಿಯು 5 ರೂ.ಗೆ ಎಲ್ಲರಿಗೂ ಊಟ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ. ಇದರಲ್ಲಿ ಬುಡಕಟ್ಟು ಜನರ ಕಲ್ಯಾಣ, ರೈತರಿಗೆ ಹೆಚ್ಚಿನ ಹಣಕಾಸು ನೆರವು ಕೂಡ ಸೇರಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 am, Thu, 16 February 23