ಬೆಂಗಳೂರು ಗ್ರಾಮಾಂತರ, ಮಾ.15: ಆನೇಕಲ್(Anekal) ತಾಲ್ಲೂಕಿನ ಮಹಾಂತಲಿಂಗಾಪುರದಲ್ಲಿ ಸರ್ವೆ ನಂ. 48 ರ ಸರ್ಕಾರಿ ಗೋಮಾಳ ಜಾಗವಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಇದೇ ಸರ್ಕಾರಿ ಗೋಮಾಳ ಜಾಗವನ್ನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮೈಲಸಂದ್ರ ವಾಸಿ ನಾರಾಯಣಸ್ವಾಮಿ ಮತ್ತು ಕಾಂತಮ್ಮ ಎಂಬುವವರ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿಸಿ ಮಾರಾಟ, ವಂಚನೆ ಮತ್ತು ಕ್ರಿಮಿನಲ್ ಅಫೆನ್ಸ್ ಸೇರಿದಂತೆ ಆರೋಪಿಗಳ ವಿರುದ್ಧ IPC 1869 U/S 36, 406, 420, 447, 468,470,471,472,473,474 ಮತ್ತು 464 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಯಕ ಗ್ರಾಹಕರಿಗೆ ವಂಚನೆ ಮಾಡುವ ಸಲುವಾಗಿ ಕಲ್ಲುಬಾಳು ಗ್ರಾಮ ಪಂಚಾಯತಿ ಅಧಿಕಾರಿಗಳು ದೃಢೀಕರಿಸಿದಂತೆ ನಕಲಿ ಸಹಿ ಮತ್ತು ಸೀಲು ಹಾಕಿ ಪಾರಂ 9 ಮತ್ತು 10 ಪತ್ರ ತಯಾರಿಸಿದ್ದಾರೆ. ಬಳಿಕ ಕಡಿಮೆ ಬೆಲೆಗೆ ನಿವೇಶನ ಮಾರಾಟ ಮಾಡುವುದಾಗಿ ನಂಬಿಸಿದ ಅಸಾಮಿಗಳು ಫೋಡಿ, ಕನ್ವರ್ಷನ್, ಪ್ಲಾನ್ ಅಪ್ರೂವಲ್ ಮತ್ತು ಪಂಚಾಯತಿ ಇ-ಖಾತಾ ಇಲ್ಲದಿದ್ದರೂ ಸುಮಾರು 2 ಎಕರೆ ಪ್ರದೇಶದಲ್ಲಿ 60 ಕ್ಕೂ ಅಧಿಕ ಮಂದಿಗೆ ನಿವೇಶನ ಮಾರಾಟ ಮಾಡಿ ವಂಚಿಸಿದ್ದಾರೆ.
ಇದನ್ನೂ ಓದಿ:ನಕಲಿ ದಾಖಲೆ ನೀಡಿ ಸಾಲ ಪಡೆಯುವ ಖದೀಮರು: ಲೋನ್ ನೀಡಿದ 3 ಬ್ಯಾಂಕ್ ಮ್ಯಾನೇಜರ್ಗಳ ಬಂಧನ
ಇನ್ನು ಆರೋಪಿಗಳಾದ ನಾರಾಯಣಸ್ವಾಮಿ ಮತ್ತು ಕಾಂತಮ್ಮ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳ ಸಹಿ ಪೋರ್ಜರಿ ಮಾಡಿ ದಾಖಲೆ ಕ್ರಿಯೇಟ್ ಮತ್ತು ಸಬ್ ರಿಜಿಸ್ಟರ್ ಕಛೇರಿಯಲ್ಲಿ ನಿವೇಶನ ಮಾರಾಟ ಮಾಡುವ ಪ್ರತಿ ಹಂತದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಜಿಲ್ಲಾ ಉಪನೊಂದಣಾಧಿಕಾರಿಗಳಿಗೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಆರೋಪಿಗಳ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಪ್ರಕರಣ ದಾಖಲಾಗಿ ಎರಡು ತಿಂಗಳು ಕಳೆದರು ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮೀನಾಮೇಷ ಎಣಿಸುತ್ತಿದ್ದು, ದಾಖಲೆಗಳ ಪರಿಶೀಲನೆ ನೆಪ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ನಗರದ ಜಂಜಾಟದಿಂದ ಮುಕ್ತಿಗಾಗಿ ನಗರದ ಹೊರವಲಯದಲ್ಲಿ ಸ್ವಂತ ಸೂರು ಕಟ್ಟಿಕೊಳ್ಳಲು ಬಯಸುವ ಗ್ರಾಹಕರೇ ಎಚ್ಚರ ಎಚ್ಚರ… ಕಡಿಮೆ ಬೆಲೆಗೆ ನಿವೇಶನ ನೀಡುವುದಾಗಿ ವಂಚಿಸುವ ಖತರ್ನಾಕ್ ಜಾಲ ಹೊರವಲಯದಲ್ಲಿ ಸಕ್ರಿಯವಾಗಿದ್ದು, ಕೊಂಚ ಯಮಾರಿದ್ರು ನಿಮ್ಮನ್ನು ವಂಚಿಸುವುದು ಗ್ಯಾಂರಟಿ. ಸದ್ಯ ಅಂತಹ ವಂಚಕ ಜಾಲದ ವಿರುದ್ಧ ಇದೀಗ FIR ದಾಖಲಾಗಿದ್ದು, ಜಿಗಣಿ ಪೊಲೀಸರು ಆರೋಪಿಗಳ ಮೇಲೆ ಕ್ರಮ ಜರುಗಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 pm, Fri, 15 March 24