ಬೆಂಗಳೂರು: ನಗರದ ಬನ್ನೇರುಘಟ್ಟ ಚಿಟ್ಟೆ ಉದ್ಯಾನವನಕ್ಕೆ ವಿಶೇಷವಾದ ಅತಿಥಿ ಒಬ್ಬರು ಆಗಮಿಸಿದ್ದಾರೆ. ಈ ಅತಿಥಿ ಚಿಟ್ಟೆಯಂತೆಯೇ ಇರುವ ಜೀವಿ ಆದರೆ ಚಿಟ್ಟೆಯಲ್ಲ. ಬದಲಿಗೆ ಇದೊಂದು ಪ್ರಭೇದಕ್ಕೆ ಸೇರಿದ ಪತಂಗ. ಕಂದು, ಕೆಂಪು, ನೆರಳೆ ಹಳದಿ ವರ್ಣಗಳ ರೆಕ್ಕೆಗಳ ಬೃಹತ್ ಪತಂಗ ಇದಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇದನ್ನು ಅಟ್ಲಾಸ್ ಪತಂಗ (Atlas moth) ಎಂದು ಕರೆಯುತ್ತಾರೆ. ಏಷ್ಯಾದಲ್ಲಿಯೇ ಅತಿ ದೊಡ್ಡ ಅಟ್ಲಾಸ್ ಪತಂಗ ಇದಾಗಿದ್ದು, ಸುಮಾರು 12 ಸೆ.ಮಿ ಉದ್ದವಿದೆ. ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುವ ಈ ಪತಂಗ ನಿಶಾಚರಿಯಾಗಿದ್ದು, ರಾತ್ರಿ ವೇಳೆ ಹೆಚ್ಚು ಹಾರಾಟ ನಡೆಸುತ್ತವೆ.
ದೈತ್ಯಾಕಾರದ ಪತಂಗ ಅಂದರೆ ಅಟ್ಲಾಸ್ ಮಾಥ್ ಈಗಾಗಲೇ ಕರಾವಳಿ ಜಿಲ್ಲೆಯ ಹಲವು ಭಾಗಗಳಲ್ಲಿ ಪತ್ತೆಯಾಗಿತ್ತು. ಇದೀಗ ಇದೇ ಮೊದಲ ಬಾರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅತಿಥಿಯಾಗಿ ವಲಸೆ ಬಂದಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಕೇರಳದ ವೈನಾಡು ಅರಣ್ಯ ತಮಿಳುನಾಡಿನ ಸತ್ಯಮಂಗಲಂ ಅರಣ್ಯ ಮತ್ತು ರಾಜ್ಯದ ಕಾವೇರಿ, ಮಹದೇಶ್ವರ ಬೆಟ್ಟ, ಪಶ್ಚಿಮ ಘಟ್ಟಗಳಿಗೆ ಕೊಂಡಿಯಾಗಿದ್ದು, ಅಪಾರ ಜೀವವೈವಿಧ್ಯತೆಯನ್ನು ಹೊಂದಿದೆ. ಹಾಗಾಗಿ ಪತಂಗಗಳು ಸಂತಾನೋತ್ಪತ್ತಿಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುತ್ತವೆ. ಈ ವೇಳೆ ಚಿಟ್ಟೆ ಪಾರ್ಕ್ ಸಿಬ್ಬಂದಿಗಳು ಗುರುತಿಸಿ ಅಟ್ಲಾಸ್ ಪತಂಗವನ್ನು ರಕ್ಷಣೆ ಮಾಡಿದ್ದಾರೆ.
ಅಟ್ಲಾಸ್ ಕೇವಲ ಹತ್ತರಿಂದ ಹದಿನೈದು ದಿನ ಬದುಕುವ ಅಲ್ಪಾವಧಿಯ ಕೀಟ. ಅಟ್ಲಾಸ್ ಪತಂಗಗಳು ಪಶ್ಚಿಮ ಘಟ್ಟದಂತಹ ಮಳೆ ಕಾಡುಗಳಲ್ಲಿ ಕಂಡು ಬರುತ್ತವೆ. ಅಟ್ಲಾಸ್ ಪತಂಗ ಪ್ರಪಂಚದ ಅತಿ ದೊಡ್ಡ ಗಾತ್ರದ ಕೀಟಗಳ ಜಾತಿಗೆ ಸೇರಿದ್ದು, ರೆಕ್ಕೆಗಳಿಗೆ ಹೋಲಿಸಿದರೆ ದೇಹವು ಬಹಳಷ್ಟು ಚಿಕ್ಕದಾಗಿವೆ. ರೆಕ್ಕೆಗಳನ್ನು ಬಿಡಿಸಿದಾಗ ಸಾಮಾನ್ಯವಾಗಿ 10 ರಿಂದ 12 ಇಂಚುಗಳಷ್ಟು ಗಾತ್ರ ಕಂಡುಬರುತ್ತವೆ. ಗಂಡು ಪತಂಗಗಳು ಆ್ಯಂಟೆನಾಗಳನ್ನು ಹೊಂದಿದ್ದು, ಹೆಣ್ಣಿಗಿಂತಲೂ ಗಾತ್ರ ಹಾಗೂ ಭಾರದಲ್ಲಿ ಚಿಕ್ಕದಾಗಿರುತ್ತವೆ. ಬೆಳಕಿಗೆ ಆಕರ್ಷಿಸಲ್ಪಡುವ ಈ ಪತಂಗಗಳಿಗೆ ವಿರೋಧಿಗಳು ಹೆಚ್ಚು ಹಾಗಾಗಿ ರೆಕ್ಕೆಗಳ ಸುಳಿಗಳು ನಾಗರ ಹಾವಿನ ತಲೆಗೆ ಹೋಲುತ್ತಿದ್ದು, ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಬೇಟೆಯಾಡಲು ಬಂದಾಗ, ರೆಕ್ಕೆಗಳನ್ನು ಮೇಲಕ್ಕೆತ್ತಿ ಹಾವು ಅಥವಾ ಜಂತುಗಳ ರೀತಿಯಲ್ಲಿ ಕಾಣುವಂತೆ ಮಾಡಿ ಶತ್ರುಗಳಿಂದ ತಪ್ಪಿಸಿಕೊಳ್ಳುತ್ತದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕೀಟ ತಜ್ಞ ಲೋಕನಾಥ್ ತಿಳಿಸಿದ್ದಾರೆ.
ಮರಿ ಹುಳುಗಳು ಹಕ್ಕಿಗಳಿಗೆ ಆಹಾರವಾದರೆ ಪ್ರೌಢ ಪತಂಗಗಳನ್ನು ಬಾವಲಿ, ಗೂಬೆ, ಹಲ್ಲಿ, ಬೆಕ್ಕು, ಕರಡಿ ಇನ್ನಿತರ ಪ್ರಾಣಿಗಳು ಭಕ್ಷಿಸುತ್ತವೆ. ಮರಿ ಹಂತದಲ್ಲಿರುವಾಗ ಮಾತ್ರ ಎಲೆ, ಸಸ್ಯ, ಕಾಂಡಗಳನ್ನು ಕೊರೆದು ಬೇರುಗಳನ್ನು ಭಕ್ಷಿಸುತ್ತಾ ತಾನೇ ನೇಯುವ ಗೂಡಿನಲ್ಲಿ ಬಂಧಿಯಾಗುತ್ತವೆ. ಅಲ್ಲೇ ಪ್ರೌಢ ಹಂತ ತಲುಪಿ ಗೂಡನ್ನು ಸೀಳಿ ಹೊರಬಂದು ಪತಂಗಗಳಾಗಿ ರೂಪಾಂತರ ಹೊಂದುತ್ತವೆ. ದೇಹದಲ್ಲಿರುವ ದೈಹಿಕ ಒಳ ಶಕ್ತಿಯಿಂದ ಜೀವಿಸುವ ಇವುಗಳಿಗೆ ಪ್ರೌಢಾವಸ್ಥೆಯ ಬಳಿಕ ಕೇವಲ 10 ರಿಂದ 15 ದಿನ ಮಾತ್ರ ಆಯಸ್ಸು. ಹಾಗಾಗಿ ಅಪರೂಪದ ಅಟ್ಲಾಸ್ ಪತಂಗಗಳ ವಂಶಾಭಿವೃದ್ಧಿ ಮಾಡುವ ಸಲುವಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಂಶಾಭಿವೃದ್ಧಿ ಬಳಿಕ ಉದ್ಯಾನವನದ ಚಿಟ್ಟೆಪಾರ್ಕ್ನಲ್ಲಿ ಪತಂಗಗಳನ್ನು ಬಿಟ್ಟು ಪ್ರವಾಸಿಗರಿಗೆ ಇವುಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬೃಹದಾಕಾರ ಪತಂಗಗಳನ್ನು ಬಹುತೇಕ ಮಂದಿ ಚಿಟ್ಟೆ ಅಥವಾ ಪಾತರಗಿತ್ತಿ ಎಂದೇ ಭಾವಿಸಿ ಕೊಂಡಿದ್ದಾರೆ. ಆದರೆ ಇದು ಪತಂಗವೇ ಹೊರತು ಚಿಟ್ಟೆ(ಪಾತರಗಿತ್ತಿ) ಅಲ್ಲ. ಪತಂಗವನ್ನು ಆಂಗ್ಲ ಭಾಷೆಯಲ್ಲಿ ಮಾಥ್ ಎಂದು ಕರೆಯಲಾಗುತ್ತದೆ. ಚಿಟ್ಟೆಗೂ ಪತಂಗಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಅದರಲ್ಲೂ ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ಪತಂಗವಾಗಿದ್ದು, ನಿಜಕ್ಕೂ ಪರಸರ ಪ್ರೇಮಿಗಳಿಗೆ ಗುಡ್ ನ್ಯೂಸ್ ಆಗಿದೆ. ಮುಂದಿನ ದಿನಗಳಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿಟ್ಟೆಗಳ ಜೊತೆ ಅಪರೂಪದ ಅಟ್ಲಾಸ್ ಪತಂಗಗಳನ್ನು ಕಾಣಬಹುದಾಗಿದ್ದು, ಪ್ರವಾಸಿಗರು ಸಂತಸಗೊಂಡಿದ್ದಾರೆ.
ವರದಿ: ಸೈಯ್ಯದ್ ನಿಜಾಮುದ್ದೀನ್
ಇದನ್ನೂ ಓದಿ:
ಬನ್ನೇರುಘಟ್ಟ ಉದ್ಯಾನವನದ ಮೃಗಗಳಿಗೆ ಬೀಫ್ ಭಾಗ್ಯ; ಮಾಂಸಾಹಾರಿ ಪ್ರಾಣಿಗಳ ಚಲನವಲನದಲ್ಲಿ ಬದಲಾವಣೆ