Beef Smuggling: ಬೆಂಕಿ ಹಚ್ಚಿ ಕೌರ್ಯ ಮೆರೆದಿದ್ದ ವಿಡಿಯೋ ಪೋಸ್ಟ್, 6 ಸೋಶಿಯಲ್ ಮೀಡಿಯಾ ಗ್ರೂಪ್ ವಿರುದ್ಧ ಕೇಸ್ ಬುಕ್
ದೊಡ್ಡಬಳ್ಳಾಪುರದಲ್ಲಿ ಭಾನುವಾರ ಗೋಮಾಂಸ ಸಾಗಣೆದಾರರ ಮೇಲೆ ನಡೆದ ದಾಳಿಯ ವಿಡಿಯೋಗಳನ್ನು ಶೇರ್ ಮಾಡಿದ ಆರೋಪದ ಮೇಲೆ ಫೇಸ್‌ಬುಕ್ ಮತ್ತು ಟೆಲಿಗ್ರಾಂನ ಗುಂಪುಗಳ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 23 ಜನರನ್ನು ಬಂಧಿಸಲಾಗಿದೆ.
ಬೆಂಗಳೂರು, ಸೆ.27: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಭಾನುವಾರ ಗೋಮಾಂಸ ಸಾಗಣೆದಾರರ (Beef Smuggling) ಮೇಲೆ ನಡೆದ ದಾಳಿಯ ವಿಡಿಯೋಗಳನ್ನು ಶೇರ್ ಮಾಡಿದ ಆರೋಪದ ಮೇಲೆ ಫೇಸ್‌ಬುಕ್ (Face Book) ಮತ್ತು ಟೆಲಿಗ್ರಾಂನ (Telegram) ಗುಂಪುಗಳ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 23 ಜನರನ್ನು ಬಂಧಿಸಲಾಗಿದೆ.
ಘಟನೆ ವೇಳೆ ಹಲ್ಲೆ ಮತ್ತು ಕಾರಿಗೆ ಬೆಂಕಿ ಹಚ್ಚಿದ್ದಾರೆಂದು ಭಾನುವಾರ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು 19 ಜನರನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ ನಾಲ್ವರನ್ನು ಬಂಧಿಸಲಾಗಿದೆ. ಇನ್ನು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಹರಡುತ್ತಿರುವ ಆರೋಪದ ಮೇಲೆ 6 ಸೋಶಿಯಲ್ ಮೀಡಿಯಾ ಗ್ರೂಪ್ಗಳ ವಿರುದ್ಧ ಸೈಬರ್ ಕ್ರೈಮ್ ಪ್ರಕರಣವನ್ನು ಸಿಇಎನ್ ಕ್ರೈಮ್ ಪೊಲೀಸರು ದಾಖಲಿಸಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮಾನಿಟರಿಂಗ್ ಸೆಲ್ ಸಿಬ್ಬಂದಿ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೊಡ್ಡಬಳ್ಳಾಪುರ ಟುಡೇ ನ್ಯೂಸ್, ಕೇಸರಿ ರಾಷ್ಟ್ರ, ವಾರ್ತಾಗುರು ಮತ್ತು ಸಾರ್ವಜನಿಕ ಸಮಸ್ಯೆ ಎಂಬ ನಾಲ್ಕು ಫೇಸ್‌ಬುಕ್ ಗುಂಪುಗಳು ಆನ್‌ಲೈನ್‌ನಲ್ಲಿ ಘಟನೆಯ ವಿಡಿಯೋಗಳನ್ನು ಹಂಚಿಕೊಂಡಿವೆ. ಹಾಗೂ ಎರಡು ಟೆಲಿಗ್ರಾಮ್ ಗ್ರೂಪ್ಗಳಾದ (ಥಗ್ಸ್_ಆಫ್_ದೊಡ್ಡಬಳ್ಳಾಪುರ ಮತ್ತು ಸಿವು_ಹಿಂದು_ಹುಲಿ_2.0) ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಹಂಚಿಕೊಂಡಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಹೇಳಿದರು.
ಶ್ರೀರಾಮ ಸೇನೆ ಕಾರ್ಯಕರ್ತರು ಬೇರೆ ಸಮುದಾಯದವರ ಮೇಲೆ ಹಲ್ಲೆ ನಡೆಸಿ ರಸ್ತೆಯಲ್ಲೇ ಅವರನ್ನು ಕೂರಿಸಿ ಕಾಲಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಶಂಕಿತ ಆರೋಪಿಗಳು ದನಗಳ ತುಂಡರಿಸಿದ ರುಂಡವನ್ನು ನೀಡಿ ಅವುಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ನಡೆಯುವಂತೆ ಹಿಂಸೆ ನೀಡಿದ್ದಾರೆ. ಇದು ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕುವ ಕೆಲಸ ನಡೆದಿದೆ ಎಂದು ಮಲ್ಲಿಕಾರ್ಜುನ್ ತಿಳಿಸಿದರು.
ಇದನ್ನೂ ಓದಿ: ದೇವನಹಳ್ಳಿ: ಗೋಮಾಂಸ ಸಾಗಾಟ ತಡೆದು ಕಾರಿಗೆ ಬೆಂಕಿ ಹಚ್ಚಿದ್ದ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಘಟನೆ ಹಿನ್ನೆಲೆ
ದೊಡ್ಡಬಳ್ಳಾಪುರ ಮೂಲಕ ಹಾದು ಹೋಗಿರುವ ಹಿಂದೂಪುರ ಯಲಹಂಕ ರಾಜ್ಯ ಹೆದ್ದಾರಿಯಲ್ಲಿ ಐದು ಗೂಡ್ಸ್ ವಾಹನಗಳು ಬಂದಿದ್ದು ಮೊದಲಿಗೆ ಅದನ್ನ ರಸ್ತೆ ಮಧ್ಯೆ ತಡೆದು ಪರಿಶೀಲನೆ ಮಾಡಲು ಶ್ರೀರಾಮಸೇನೆ ಕಾರ್ಯಕರ್ತರು ಮುಂದಾಗಿದ್ರು. ಈ ವೇಳೆ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಅವಾಜ್ ಹಾಕಿ ಗೂಡ್ಸ್ ವಾಹನ ಚಾಲಕರು ಬಂದಿದ್ದು ದೊಡ್ಡಬಳ್ಳಾಪುರದ ಐಬಿ ವೃತ್ತದಲ್ಲಿ ನೂರಾರು ಜನ ಶ್ರೀರಾಮಸೇನೆ ಕಾರ್ಯಕರ್ತರು ಗೂಡ್ಸ್ ವಾಹನಗಳನ್ನ ತಡೆದಿದ್ದಾರೆ. ಆಗ ಪರಿಶೀಲನೆ ನಡೆಸಿದಾಗ ಗೋಮಾಂಸ ಗೂಡ್ಸ್ ವಾಹನಗಳಲ್ಲಿ ಪತ್ತೆಯಾಗಿದ್ದು ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ಆಕ್ರೋಶಗೊಂಡ ಕೆಲವರು ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡಿಸುತ್ತಿದ್ದವರ ಕಾರಿಗೆ ಬೆಂಕಿ ಹಚ್ಚಿದ್ದರು.
ಗೂಡ್ಸ್ ವಾಹನದಲ್ಲಿದ್ದ ಮಾಂಸದ ತುಂಡುಗಳನ್ನ ಹೊರಗಡೆ ತೆಗೆದು ಆಕ್ರೋಶ ಹೊರ ಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ಕೆಲ ಯುವಕರು ನಂತರ ಅದೇ ಮಾಂಸದ ತುಂಡು ಹಾಗೂ ಹಸುಗಳ ತಲೆಗಳನ್ನ ಸಾಗಾಟ ಮಾಡ್ತಿದ್ದವರ ತಲೆ ಮೇಲೆ ಹೊರಿಸಿ ವೃತ್ತದಲ್ಲಿ ಮೆರವಣಿಗೆ ಮಾಡಿಸಿದ್ದರು. ಜೊತೆಗೆ ತಲೆ ಮೇಲೆ ಹಸುವಿನ ರುಂಡವನ್ನಿಟ್ಟುಕೊಳ್ಳಲ್ಲ ಎಂದವರ ಮೇಲೆ ಹಲ್ಲೆ ಸಹ ಮಾಡಿದ್ದರು. ಇನ್ನು ಕಾರು ಹೊತ್ತಿ ಉರಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ನಂತರ ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಜನರನ್ನ ಚದುರಿಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ