AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಸ್‌ಪೋರ್ಟ್ ಬೇಡ, ಮುಖ ಸ್ಕ್ಯಾನ್ ಮಾಡಿದ್ರೆ ಸಾಕು: ಬೆಂಗಳೂರು ವಿಮಾನ ನಿಲ್ದಾದಲ್ಲಿ ಹೊಸ ಮೈಲಿಗಲ್ಲು

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ (ಕೆಐಎ) ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಡಿಜಿ ಯಾತ್ರಾ ಮಾದರಿಯ ಸ್ಪರ್ಶರಹಿತ, ಮುಖಚಹರೆ ಆಧಾರಿತ ಪ್ರಯಾಣದ ಅನುಭವ ನೀಡಲು ಸಜ್ಜಾಗಿದೆ. ಇದು ಭಾರತದಲ್ಲಿಯೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನ್ವಯವಾಗಿದ್ದು, ಟಿಕೆಟ್ ಬುಕ್ಕಿಂಗ್‌ನಿಂದ ಬೋರ್ಡಿಂಗ್‌ವರೆಗೆ ತಡೆರಹಿತ ವ್ಯವಸ್ಥೆ ಒದಗಿಸುತ್ತದೆ. ಭದ್ರತೆ ಹೆಚ್ಚಿಸಿ, ಸಮಯ ಉಳಿಸುವ ಈ ತಂತ್ರಜ್ಞಾನದಲ್ಲಿ ಪಾಲ್ಗೊಂಡ ಏಕೈಕ ಭಾರತೀಯ ವಿಮಾನ ನಿಲ್ದಾಣ ಕೆಐಎ ಆಗಿದೆ.

ಪಾಸ್‌ಪೋರ್ಟ್ ಬೇಡ, ಮುಖ ಸ್ಕ್ಯಾನ್ ಮಾಡಿದ್ರೆ ಸಾಕು: ಬೆಂಗಳೂರು ವಿಮಾನ ನಿಲ್ದಾದಲ್ಲಿ ಹೊಸ ಮೈಲಿಗಲ್ಲು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಪ್ರಸನ್ನ ಹೆಗಡೆ
|

Updated on: Apr 09, 2026 | 5:35 PM

Share

ಬೆಂಗಳೂರು, ಏಪ್ರಿಲ್​​ 09: ದೇಶೀಯ ವಿಮಾನ ಪ್ರಯಾಣಿಕರಿಗೆ ಈಗಾಗಲೇ ಅತ್ಯಾಧುನಿಕ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಒದಗಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA), ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಮುಖಚಹರೆ (Biometric) ಆಧಾರಿತ ಸ್ಪರ್ಶರಹಿತ ಪ್ರಯಾಣದ ಅನುಭವ ನೀಡಲು ಸಜ್ಜಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL), ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ (IATA) ಜಂಟಿಯಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಟಿಕೆಟ್ ಬುಕಿಂಗ್‌ನಿಂದ ಹಿಡಿದು ಬೋರ್ಡಿಂಗ್‌ವರೆಗಿನ ಸಂಪೂರ್ಣ ಸಂಪರ್ಕರಹಿತ ಪ್ರಯಾಣದ ತಾಂತ್ರಿಕ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿವೆ.

ಭಾರತದಲ್ಲಿ ಇದೇ ಮೊದಲು!

ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ವಿನೂತನ ಪ್ರಯೋಗ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ತಡೆರಹಿತ ವಿಮಾನ ಪ್ರಯಾಣ ವ್ಯವಸ್ಥೆಯ ಅನುಷ್ಠಾನದತ್ತ ಇದು ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಇಂಡಿಗೋ ಹಾಗೂ ಡಿಜಿ ಯಾತ್ರಾ ಫೌಂಡೇಶನ್ ಸಂಸ್ಥೆಗಳು, ಪ್ರಯಾಣಿಕರ ದತ್ತಾಂಶ ಸುರಕ್ಷತೆಗಾಗಿ ‘ಸೆಲ್ಫ್-ಸೋವರಿನ್ ಐಡೆಂಟಿಟಿ’ (ಎಸ್‌ಎಸ್‌ಐ) ಎಂಬ ಸ್ವಯಂ-ಗುರುತು ವ್ಯವಸ್ಥೆ ಹಾಗೂ ಬೋರ್ಡಿಂಗ್ ಪಾಸ್‌ಗಳನ್ನು ಸುಲಭವಾಗಿ ವರ್ಗಾಯಿಸಲು ‘ಆ್ಯಪ್-ಟು-ಆ್ಯಪ್’ ತಂತ್ರಜ್ಞಾನವನ್ನು ಪರಿಚಯಿಸಿದ್ದವು. ಇದೇ ಯಶಸ್ವಿ ಮಾದರಿಯನ್ನು ಇದೀಗ ಬಿಐಎಎಲ್ ನೆರವಿನೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ವಿಸ್ತರಿಸಿ, ಅದರ ಕಾರ್ಯಸಾಧ್ಯತೆಯನ್ನು ಯಶಸ್ವಿಯಾಗಿ ಸಾಬೀತುಪಡಿಸಲಾಗಿದೆ.

ಇದನ್ನೂ ಓದಿ: ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ..!

ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಈ ತಂತ್ರಜ್ಞಾನದ ಅಳವಡಿಕೆಯು ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ, ಭದ್ರತೆಯನ್ನೂ ಹೆಚ್ಚಿಸಲಿದೆ. ವಿಶೇಷವೆಂದರೆ, ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಜಾರಿಗೆ ತರುವ ಈ ಪ್ರತಿಷ್ಠಿತ ಯೋಜನೆಯಲ್ಲಿ ಪಾಲ್ಗೊಂಡಿರುವ ಭಾರತದ ಏಕೈಕ ಏರ್​​ಪೋರ್ಟ್​​ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.

ಕಾರ್ಯನಿರ್ವಹಣೆ ಹೇಗೆ?

ಪ್ರಯಾಣಿಕರ ಗುರುತನ್ನು ಮುಂಚಿತವಾಗಿಯೇ ಸುರಕ್ಷಿತವಾಗಿ ದೃಢೀಕರಿಸಿ, ವಿಮಾನ ನಿಲ್ದಾಣದ ಎಲ್ಲಾ ಹಂತಗಳಲ್ಲಿ ಮುಖ ಗುರುತಿನ (ಫೇಸ್ ರೆಕಗ್ನಿಷನ್) ಮೂಲಕ ಪರಿಶೀಲಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆ ಟಿಕೆಟ್ ಬುಕ್ಕಿಂಗ್‌ನಿಂದ ಹಿಡಿದು ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುವವರೆಗಿನ ಸಂಪೂರ್ಣ ಪ್ರಯಾಣವನ್ನು ಒಳಗೊಂಡಿದೆ. ಎಲ್ಲಾ ಭದ್ರತಾ ತಪಾಸಣೆಗಳಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನ ಬಳಸಲಾಗಿದೆ. ಆ ಮೂಲಕ ಇನ್ನು ಮುಂದೆ ಪಾಸ್‌ಪೋರ್ಟ್ ಅಥವಾ ಬೋರ್ಡಿಂಗ್ ಪಾಸ್ ತೋರಿಸುವ ಬದಲು, ಪ್ರಯಾಣಿಕರು ತಮ್ಮ ಮುಖವನ್ನು ಸ್ಕ್ಯಾನ್ ಮಾಡಿಸುವ ಮೂಲಕ ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ.

ಈ ತಂತ್ರಜ್ಞಾನ ‘ಸೆಲ್ಫ್-ಸೋವೆರಿನ್ ಐಡೆಂಟಿಟಿ’ (SSI) ಮಾದರಿಯನ್ವಯ ಕೆಲಸ ಮಾಡಲಿದೆ. ಇದರಿಂದ ವ್ಯಕ್ತಿಯ ಗುರುತು ಸುರಕ್ಷಿತವಾಗಿ ಸಂಗ್ರಹವಾಗಿದ್ದು, ತಕ್ಷಣವೇ ವಿವಿಧ ವ್ಯವಸ್ಥೆಗಳ ಮೂಲಕ ಪರಿಶೀಲನೆಗೊಳಗಾಗುತ್ತದೆ. ಇದಲ್ಲದೆ, ಏರ್‌ಲೈನ್ ಆ್ಯಪ್‌ಗಳು ಮತ್ತು ವಿಮಾನ ನಿಲ್ದಾಣ ವ್ಯವಸ್ಥೆಗಳು ಪರಸ್ಪರ ಸಂಪರ್ಕ ಹೊಂದಿದ್ದು, ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಮತ್ತು ಪ್ರಯಾಣ ವಿವರಗಳು ಸ್ವಯಂಚಾಲಿತವಾಗಿ ಲಭ್ಯವಾಗುತ್ತವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us