Bengaluru Airport: ಬೆಂಗಳೂರಿನಿಂದ ವಿಮಾನ ಹತ್ತಬೇಕಾದವಳು ಬಾಂಬ್ ಸ್ಫೋಟದ ಬೆದರಿಕೆ ಹಾಕಿ ಜೈಲುಪಾಲಾದಳು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ವಿಳಂಬವಾಗುತ್ತಿದೆ ಎಂದು ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿದ್ದ ಮಹಿಳೆ ನಂತರ ಬಾಂಬ್ ಸ್ಫೋಟದ ಬೆದರಿಕೆ ಹಾಕಿದ್ದಾಳೆ. ಸದ್ಯ ಮಹಿಳೆ ಜೈಲುಪಾಲಾಗಿದ್ದಾಳೆ.
ದೇವನಹಳ್ಳಿ: ವಿಮಾನ ಹತ್ತಲು ವಿಳಂಬವಾಗುತ್ತಿದೆ ಎಂದು ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿ ವಿಮಾನ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ್ದ ಮಹಿಳೆಯನ್ನು ಜೈಲಿಗಟ್ಟಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀ ವಿಮಾನ ನಿಲ್ದಾಣದಲ್ಲಿ (Kempe Gowda International Airport) ನಡೆದಿದೆ. ಬೆಂಗಳೂರಿನಿಂದ ಕೋಲ್ಕತ್ತಾಗೆ ತೆರಳಬೇಕಿದ್ದ ಕೇರಳದ ಮಹಿಳೆ ಗೇಟ್ ನಂಬರ್ 6ರಲ್ಲಿ ಕುಳಿತಿದ್ದ ವೇಳೆ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿದ್ದು, ಬಳಿಕ ಹಲ್ಲೆ ನಡೆಸಿ ಬಾಂಬ್ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ಮಹಿಳೆಯನ್ನು ಬಂಧಿಸಿದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೇರಳ ಮೂಲದ ಮಹಿಳೆಯೊಬ್ಬಳು ಬೆಂಗಳೂರಿನಿಂದ ವಿಮಾನದ ಮೂಲಕ ಕೋಲ್ಕತ್ತಾಗೆ ತೆರಳವ ನಿಟ್ಟಿನಲ್ಲಿ ಇಂಡಿಗೋ ವಿಮಾನ 6E-445ನಲ್ಲಿ ಟಿಕೆಟ್ ಬುಕ್ ಮಾಡಿದ್ದಳು. ಅದರಂತೆ ನಿನ್ನೆ (ಫೆಬ್ರವರಿ 4 ರಂದು) ಬೋರ್ಡಿಂಗ್ ಗೇಟ್ ನಂಬರ್ 6ರಲ್ಲಿ ವಿಮಾನಕ್ಕಾಗಿ ಕಾದುಕುಳಿತ್ತಿದ್ದಳು. ಅದಾಗ್ಯೂ, ವಿಮಾನ ಹತ್ತಲು ವಿಳಂಬವಾಗುತ್ತಿದೆ ನನ್ನನ್ನು ಒಳಗೆಬಿಡಿ ಎಂದು ಸಿಬ್ಬಂದಿಯೊಂದಿಗೆ ಕ್ಯಾತೆ ತೆಗೆಯಲು ಆರಂಭಿಸಿದ್ದಾಳೆ.
ಸಿಬ್ಬಂದಿಯೊಂದಿಗೆ ಕಿರಿಕ್ ಆರಂಭಿಸಿದ ಮಹಿಳೆ ಭದ್ರತಾ ಪಡೆ ಮೇಲೆ ಹಲ್ಲೆ ನಡೆಸಿದ್ದಾಳೆ. ಅಷ್ಟಾದರೂ ಭದ್ರತಾ ಸಿಬ್ಬಂದಿ ಆಕೆಯನ್ನು ಒಳಗೆಬಿಟ್ಟಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆ, ತನ್ನನ್ನು ಬಿಡಲಿಲ್ಲವೆಂದು ಬಾಂಬ್ ಬೆದರಿಕೆಯೊಡ್ಡಿದ್ದಾಳೆ. ವಿಮಾನದಲ್ಲಿ ಬಾಂಬ್ ಇಟ್ಟು ಸ್ಫೋಟಿಸುತ್ತೇನೆ. ಎಲ್ಲರೂ ಇಲ್ಲಿಂದ ಹೋಗಿ ಎಂದು ಗೇಟ್ ನಂ.6ರಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಬೆದರಿಸಿದ್ದಾಳೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಆಕೆಯನ್ನು ಜೈಲಿಗಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 pm, Sun, 5 February 23