ಯಮಲೋಕಕ್ಕೆ ದಾರಿಯಾದಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್! ಬೈಕ್ ಸಂಚಾರ ಬ್ಯಾನ್ ಆಗುತ್ತಾ? ಚರ್ಚೆ ಮತ್ತೆ ಶುರು

| Updated By: ಸಾಧು ಶ್ರೀನಾಥ್​

Updated on: Nov 28, 2022 | 6:44 PM

ಫ್ಲೈಓವರ್ ಮೇಲಿನ ಅಪಘಾತ ತಪ್ಪಿಸಲು BETPL ಸಂಸ್ಥೆ ಎಷ್ಟೇ ಮುತವರ್ಜಿ ವಹಿಸಿದ್ರೂ ಸಾವಿನ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಹೀಗಾಗಿ ಬೈಕ್ ಸವಾರರ ಪ್ರಾಣ ಉಳಿಸಲು ಫ್ಲೈ ಓವರ್ ಮೇಲೆ ಬೈಕ್ ಬ್ಯಾನ್ ಮಾಡಿ ಅಂತ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮನವಿ ಮಾಡಿದ್ದಾರೆ.

ಯಮಲೋಕಕ್ಕೆ ದಾರಿಯಾದಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್! ಬೈಕ್ ಸಂಚಾರ ಬ್ಯಾನ್ ಆಗುತ್ತಾ? ಚರ್ಚೆ ಮತ್ತೆ ಶುರು
ಬೈಕ್ ಸವಾರರಿಗೆ ಯಮಲೋಕದ ದಾರಿಯಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್! ಬೈಕ್ ಸಂಚಾರ ಬ್ಯಾನ್ ಮಾಡಲು ಮನವಿ
Follow us on

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ (Electronic city Flyover) ಮೇಲಿನ ಅಪಘಾತ ತಪ್ಪಿಸಲು BETPL ಸಂಸ್ಥೆ ಎಷ್ಟೇ ಮುತವರ್ಜಿ ವಹಿಸಿದ್ರೂ ಸಾವಿನ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಹೀಗಾಗಿ ಬೈಕ್ ಸವಾರರ ಪ್ರಾಣ ಉಳಿಸಲು ಫ್ಲೈ ಓವರ್ ಮೇಲೆ ಬೈಕ್ ಬ್ಯಾನ್ (Bike Ban) ಮಾಡಿ ಅಂತ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮನವಿ ಮಾಡಿದ್ದಾರೆ. ಇದೇ ವರ್ಷ 30 ಕ್ಕೂ ಹೆಚ್ಚು ಪ್ರಾಣ ಬಲಿ ಪಡೆದ ಎಲೆವೇಟೆಡ್ ರಸ್ತೆ ಸರ್ವೀಸ್ ಬೇಕಾ ಅನ್ನೋ ಚರ್ಚೆ ಶುರುವಾಗಿದೆ.

ಫ್ಲೈಓವರ್ ಮೇಲೆ ಬೈಕ್ ಸಂಚಾರ ಬ್ಯಾನ್ ಮಾಡಿ -ಪೊಲೀಸರ ಮನವಿ

ಬೆಂಗಳೂರು-ಹೊಸೂರು ಹೆದ್ದಾರಿಗೆ ಮುಂಚೆ ಬರುವ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಎಂಬುದು ಬೈಕ್ ಸವಾರರಿಗೆ ಅಕ್ಷರಶಃ ಯಮಲೋಕಕ್ಕೆ ದಾರಿಯಾದಂತಿದೆ. ಎಷ್ಟೇ ಪ್ರಯತ್ನ ಪಟ್ಟು ಹಲವು ರೂಲ್ಸ್ ಮಾಡಿದ್ರೂ ಬೈಕ್ ಸವಾರರ ಪ್ರಾಣ ಉಳಿಸೋಕೆ ಆಗ್ತಿಲ್ಲ. ದಿನೇ ದಿನೇ ಫ್ಲೋಓವರ್ ಮೇಲೆ ದ್ಚಿಚಕ್ರ ವಾಹನ ಸವಾರರ ಸಾವು ಸಂಭವಿಸುತ್ತಲೇ ಇದ್ದು, ಕೂಡಲೇ ಬೈಕ್ ಬ್ಯಾನ್ ಮಾಡಿ ಅಂತ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಬೆಂಗಳೂರು ಎಲಿವೇಟೆಡ್ ಟೋಲ್ ಪ್ರೈವೇಟ್ ಲಿಮಿಟೆಡ್ (BETPL) ನವರಿಗೆ ಮನವಿ ಮಾಡಿದ್ದಾರೆ. ಇಡೀ ಬೆಂಗಳೂರಿನ ಸುತ್ತಮುತ್ತಲಿನ ಫ್ಲೈಓವರ್ ಗಳಿಗಿಂತ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆಯೇ ಅತಿ ಹೆಚ್ಚು ಬೈಕ್ ಸಾವರರು ಮೃತಪಟ್ಟಿದ್ದು, ಈ ಫ್ಲೈಓವರ್ ಬೈಕ್ ಸವಾರರಿಗೆ ಸೇಫ್ ಅಲ್ಲ ಅನ್ನೋ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಬೈಕ್ ಬ್ಯಾನ್ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ಮಡಿವಾಳ ಫ್ಲೈಓವರ್ ಇಳಿತಾ ಇದ್ದಂಗೆ ಶುರುವಾಗುವ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಹುಸ್ಕೂರು ಗೇಟ್ ವರೆಗೂ ಇದೆ. ಫ್ಲೈಓವರ್ ಇಳಿದ ಮಾತ್ರಕ್ಕೆ ಬೈಕ್ ಸವಾರರು ಸೇಫ್ ಆದ್ರು ಅನ್ನೋ ಹಾಗಿಲ್ಲ, ‌ಟೋಲ್ ದಾಟಿ ಸರ್ವೀಸ್ ರಸ್ತೆ ಸೇರೋದ್ರೊಳಗೆ ಅತಿ ಹೆಚ್ಚು ಬೈಕ್ ಸವಾರರು ಪ್ರಾಣ ಬಿಟ್ಟಿದ್ದಾರೆ.

BETPL ಡೇಟಾ ಪ್ರಕಾರವೇ ನೋಡೊದಾದರೆ 2018-19 ಸಾಲಿನಲ್ಲಿ ಅಪಘಾತ ಸಂಖ್ಯೆ 256, ಸಾವು 47 , ಗಂಭೀರ ಗಾಯ 63 ಆಗಿತ್ತು.
ವರ್ಷ 2021-21 ಅಪಘಾತ 260 , ಸಾವು 48, ಗಂಭೀರ ಗಾಯ 79
ವರ್ಷ 2022 ಇಲ್ಲಿವರೆಗೂ ಅಪಘಾತ 120, ಸಾವು 38, ಗಂಭಿರ ಗಾಯ 72

ಇನ್ನೂ ಈ ವರ್ಷ ಮುಗಿದಿಲ್ಲ, ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ, ಹಾಗಾದ್ರೆ ಎಲೆಕ್ಟ್ರಾನಿಕ್ ಫ್ಲೈಓವರ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಬೈಕ್ ಸವಾರರು ಜೀವ ಹಿಡಿದುಕೊಂಡೇ‌ ಹೋಗಬೇಕು. ಅಪಘಾತವಾಗಿ ಸತ್ತಿರುವ ಶೇ 90 ರಷ್ಟು ಜನ ಬೈಕ್ ಸವಾರರೇ ಅನ್ನೋದು ಇಲ್ಲಿರುವ ಸತ್ಯ! ಹೀಗಾಗಿ ಬೈಕ್ ಸವಾರರ ಜೀವದ ಜತೆ ಚೆಲ್ಲಾಟವಾಡದೇ ಕೂಡಲೇ ಬೈಕ್ ಸವಾರರಿಗೆ ಫ್ಲೈಓವರ್ ಸರ್ವೀಸ್ ನಿಲ್ಲಿಸಿ ಅನ್ನೋದು ಪೊಲೀಸರ ಕಳಕಳಿ. ಆದರೆ ಈ ಬಗ್ಗೆ BETPL ಮ್ಯಾನೇಜರ್ ಬಲದೇವ್ ಸಿಂಗ್ ಹೇಳೋದೇ ಬೇರೆ.. ಬೆಂಗಳೂರಿನ ಇತರ ಹೈವೇಗೆ ಹೋಲಿಸಿದ್ರೆ ನಮ್ಮ ಹೈವೇ ಹಾಗೂ ಫ್ಲೈಓವರ್ ಅಪಘಾತರಹಿತ ವಾಗಿದೆ, ಒಳ್ಳೆಯ ಸೇವೆಯನ್ನು ನಾವು ಕೊಡ್ತೇವೆ. ಅಲ್ಲದೆ, 24×7 ಸೇವೆ ನಮ್ಮಲ್ಲಿದೆ. ‌ಏನೇ ಸಮಸ್ಯೆ ಆದರೂ ಟೋಲ್ ನಂಬರಿಗೆ ಕರೆ ಮಾಡಬಹುದು ಅಂತಾರೆ.

ಫ್ಲೈಓವರ್ ಮೇಲೆ ಬೈಕ್ ಬ್ಯಾನ್ ಸಂಬಂಧಿಸಿದಂತೆ ಖಡಾಖಂಡಿತವಾಗಿ ಅಲ್ಲಗಳೆದಿರುವ BETPL ಸಂಸ್ಥೆ 2026 ರವರೆಗೂ ಟೋಲ್ ಅಗ್ರಿಮೆಂಟ್ ಇದ್ದು, ಅಲ್ಲಿಯವರೆಗೂ ಯಾವುದೇ ಬ್ಯಾನ್ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದೆ. ಅಷ್ಟೇ ಅಲ್ಲ ಫ್ಲೈಓವರ್ ಆಕ್ಸಿಡೆಂಟ್ ಗಳ ಕುರಿತು BETPL ಹೇಳೋದೇ ಬೇರೆ, ಆಗಿರುವ ಬಹುತೇಕ ಅಪಘಾತಗಳಲ್ಲಿ ಡ್ರಿಂಕ್ ಅಂಡ್ ಡ್ರೈವ್ ಇದೆ. ಕೆಲವರು ರೇಸ್ ಥ್ರಿಲ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

ಹೀಗಾಗಿ ಇದ್ರಲ್ಲಿ ಫ್ಲೈಓವರ್ ದೇನು ತಪ್ಪಿದೆ ಅಂತ ಮರು ಪ್ರಶ್ನೆ ಮಾಡಿದ್ದಾರೆ. ಆದರೆ ಸಮಯ ಉಳಿತಾಯಕ್ಕಾಗಿಯೇ ಟೋಲ್ ಕಟ್ಟಿದ್ದು, ವೇಗವಾಗಿ ಹೋಗದೇ ನಿಧಾನವಾಗಿ ಹೋಗಬೇಕು ಅಂತಂದ್ರೆ ಫ್ಲೈಓವರ್ ನ ಅರ್ಥವೇನು? ಅನ್ನೋದು ಇನ್ನೊಂದು ಸರಳ ವಿಚಾರ. ಹೀಗೆ ವೇಗವಾಗಿ ಹೋದಾಗಲೇ ಅನೇಕ ಅಪಘಾತಗಳು ಆಗಿವೆ. ಅದಕ್ಕೆ ಬ್ಯಾನ್ ಮಾಡಿ ಅಂತ ಪೊಲೀಸರು ಪತ್ರದಲ್ಲಿ ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಫ್ಲೈಓರ್ ಮೇಲೆ ಬೈಕ್ ಬ್ಯಾನ್ ಆಗುತ್ತಾ ಇಲ್ಲವಾ ಅನ್ನೋದು ಕಾದು ನೋಡಬೇಕು. (ವರದಿ: ಸೈಯ್ಯದ್ ನಿಜಾಮುದ್ದೀನ್, ಟಿವಿ 9, ಆನೇಕಲ್)