ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಸೈಟ್ ದೋಖಾ ಆರೋಪ, ಬಿಜೆಪಿ ಸದಸ್ಯನಿಂದ ಲಕ್ಷಾಂತರ ರೂ ವಂಚನೆ, ಟೆಕ್ಕಿಗಳೇ ಈತನ ಟಾರ್ಗೆಟ್

| Updated By: ಸಾಧು ಶ್ರೀನಾಥ್​

Updated on: Feb 06, 2023 | 4:27 PM

ಸೈಟು ಸಿಗದ ಕಾರಣ ಗ್ರಾಹಕರು ತಮ್ಮ ಹಣ ವಾಪಾಸ್ ಕೇಳಲು ಹೋದರೆ ತಾನೊಬ್ಬ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ಕೇಂದ್ರ ಸಚಿವರೊಂದಿಗೆ ಒಡನಾಟ ಇದೆ ಅಂತ‌ ಅವಾಜ್ ಕೂಡ ಹಾಕ್ತಾನೆ.

ಬೆಂಗಳೂರಿನಲ್ಲಿ ಮನೆ ಮಾಡಲು ಜಾಗ ಖರೀದಿ ಮಾಡಬೇಕು ಅನ್ಕೊಂಡಿದ್ದೀರಾ.. ಹಾಗಾದ್ರೆ ಹುಷಾರ್…! ನಿಮ್ಮ ಬಳಿ ಇರುವ ಭೂಮಿ ದಾಖಲೆ‌ ಸುಳ್ಳಾಗಿರಬಹುದು (Land fraud). ಅಂತಹುದೆ ಒಂದು ಪ್ರಕರಣದಲ್ಲಿ ಒಂದೇ‌ ಸೈಟನ್ನು (Site) ಹಲವರಿಗೆ ಮಾರಿ ಪಂಗನಾಮ ಹಾಕುವ ಮಾಸ್ಟರ್ ಮೈಂಡ್ ಜೆ ಆರ್ ಪ್ರಾಪರ್ಟಿ ವಿರುದ್ಧ ಸಾರ್ವಜನಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ (Anekal, Electronic City).

ಹೌದು ಒಂದೇ ಭೂಮಿಯ ಕ್ರಯ ಪತ್ರವನ್ನು ಎಲ್ಲರಿಗೂ ತೋರಿಸಿ ಕೋಟ್ಯಾಂತರ ಹಣ ಮಾಡುವ ಟ್ರಿಕ್ ತನ್ನದಾಗಿರಿಸಿಕೊಂಡಿರುವ ಬಿಜೆಪಿ ಮುಖಂಡ (BJP) ಜೆ ಆರ್ ಪ್ರಾಪರ್ಟಿ ಹಾಗೂ ಮತ್ತಿತರ ಹೆಸರಲ್ಲಿ, ಮೂರನೇ ವ್ಯಕ್ತಿ ಜಿಎಸ್ ಟಿ ನಂಬರ್ ಬಳಸಿ ಹಣ ಪೀಕುತ್ತಾನೆ ಎಂಬ ಆರೋಪ ಕೇಳಿಬಂದಿದೆ.

ಪ್ರತಿಷ್ಟಿತ ಏರಿಯಾಗಳಲ್ಲಿ ಕಾರ್ನರ್ ಸೈಟುಗಳನ್ನು ಗ್ರಾಹಕರಿಗೆ ತೋರಿಸಿ, ಮಾರ್ಕೆಟ್ ವ್ಯಾಲ್ಯೂಗಿಂತ 30 ರಿಂದ‌ 40 % ಕಡಿಮೆ‌ ಬೆಲೆಗೆ ಕೊಟ್ಟು ಗ್ರಾಹಕರ ತಲೆ ಮೇಲೆ‌ ಮಕ್ಮಲ್ ಟೋಪಿ ಹಾಕ್ತಾನೆ. ಸೈಟು ಸಿಗದ ಕಾರಣ ಗ್ರಾಹಕರು ತಮ್ಮ ಹಣ ವಾಪಾಸ್ ಕೇಳಲು ಹೋದರೆ ತಾನೊಬ್ಬ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ಕೇಂದ್ರ ಸಚಿವರೊಂದಿಗೆ ಒಡನಾಟ ಇದೆ ಅಂತ‌ ಅವಾಜ್ ಕೂಡ ಹಾಕ್ತಾನೆ ಎಂದು ಗ್ರಾಹಕರು ದೂರಿದ್ದಾರೆ (Allegation).

2007 ರ ರೌಡಿಶೀಟರ್ -ಬಿಜೆಪಿ ಕಾರ್ಯಕಾರಿಣಿ ಸದಸ್ಯ!

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಶಾಂತಿಪುರ ಗ್ರಾಮದ ಪಂಚಾಯಿತಿ ಸದಸ್ಯ ಜಯಕುಮಾರ್, ಸ್ಥಳೀಯ ಬಿಜೆಪಿ ಮುಖಂಡ, 2007 ರಲ್ಲಿ ಪರಪ್ಪನ ಅಗ್ರಹಾರ ರೌಡಿಶೀಟ್ ಈತನ ಮೇಲೆ ಓಪನ್ ಇದೆ. ಹತ್ತಾರು ವರ್ಷಗಳಿಂದ ಮೋಸ ಮಾಡುವ ಕೆಲಸವನ್ನೇ ಚಾಳಿಯಾಗಿಸಿಕೊಂಡಿರುವ ಈತ ವಾಸಿಸೋದು ಮಾತ್ರ ಎಲೆಕ್ಟ್ರಾನಿಕ್ ಸಿಟಿ ಐಷಾರಾಮಿ ವಿಲ್ಲಾದಲ್ಲಿ.

ಸೈಟ್ ಗಾಗಿ ಹುಡುಕಾಟ ನಡೆಸುವವ ಖಾಸಗೀ ಡೇಟಾ ಕಳ್ಳದಾರಿಯ ಮೂಲಕ ಪಡೆದುಕೊಳ್ಳುವ ಜಯಕುಮಾರ್, ತಮ್ಮ ಎಜೆಂಟ್ ಗಳ ಮುಖಾಂತರ ಕರೆ ಮಾಡಿಸಿ, ಕೂಡಲೇ ಅಡ್ವಾನ್ಸ್​​ ಕೊಟ್ಟು ಸೈಟ್ ಬುಕ್ ಮಾಡಿಕೊಳ್ಳಿ, ಇಲ್ಲದಿದ್ರೆ ನಮಗೆ ಬಹಳಷ್ಟು ಬೇಡಿಕೆ ಬರ್ತಿದೆ ಅಂತಾ ಒತ್ತಡ ಹಾಕಿಸುತ್ತಾನೆ.

ಪೇಪರ್ ವೆರಿಫಿಕೇಶನ್ ಗೂ ಹೆಚ್ಚು ಸಮಯ ಕೊಡದ ಇವರ ತಂಡ ಐಟಿ ಬಿಟಿ ಮಂದಿಗೆ ಸರಳವಾಗಿ ತಮ್ಮ ಖೆಡ್ಡಾಗೆ ಬೀಳಿಸಿಬಿಡುತ್ತೆ. ‌25-30 ಲಕ್ಷ ಬೆಲೆಯುಳ್ಳ ಸೈಟನ್ನು, 10 ರಿಂದ 12 ಲಕ್ಷಕ್ಕೆ ಕೊಡೊದಾಗಿ ಹೇಳಿ 5 ಲಕ್ಷ ಅಡ್ವಾನ್ಸ್​​ ಪಡೆದುಕೊಳ್ಳುತ್ತಾರೆ. ಇದೇ ಥರಾ ಒಂದೇ ಸೈಟಿನ ಕ್ರಯ ಪತ್ರವನ್ನು 10-15 ಜನರಿಗೆ ಮಾರಾಟ ಮಾಡಿ ನಂತರ ಹಣ ವಾಪಾಸ್ ನೀಡದೇ ರಾಜಕೀಯ ಪ್ರಭಾವ ಬಳಸಿ ಹೆದರಿಸುತ್ತಾರೆ ಅಂತ ಗ್ರಾಹಕರು ಆರೋಪ ಮಾಡಿದ್ದಾರೆ.

ಒಟ್ಟಿನಲ್ಲಿ ಆನೇಕಲ್ ಸುತ್ತಾಮುತ್ತಾ ಹಲವು ಬಡಾವಣೆಗಳಲ್ಲಿ ಮೋಸದಾಟ ಮಾಡಿರುವ ಜಯಕುಮಾರ್ ಅಂಡ್ ಟೀಂ, ಸುಮಾರು ಹತ್ತಾರು ಕೋಟಿಯಷ್ಟು ಪಂಗನಾಮ ಹಾಕಿದೆ ಅನ್ನೋದು ಬೆಳಕಿಗೆ ಬಂದ ವಿಷಯ, ಅಲ್ಲದೆ ಕೇಂದ್ರ ಸಚಿಯ ನಾರಾಯಣ ಸ್ವಾಮಿ ಜಯಕುಮಾರ್ ಜತೆ ವೇದಿಕೆ ಹಂಚಿಕೊಂಡಿದ್ದು, ಅವರ ಹೆಸರಿನಲ್ಲೇ ಜನರಿಗೆ ಮೋಸ ಮಾಡಲಾಗುತ್ತಿದೆ ಅಂತ ಕೆಲವರು ಆರೋಪ ಮಾಡಿದ್ದಾರೆ. ಹೀಗಾಗಿ ಈ ಕುರಿತು ಕೇಂದ್ರ ಸಚಿವ ನಾರಾಯಣ ಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಏನು ಪ್ರತಿಕ್ರಿಯೆ ಕೊಡ್ತಾರೆ ಕಾದು ನೋಡಬೇಕು.

ವರದಿ: ಸೈಯ್ಯದ್ ನಿಜಾಮುದ್ದೀನ್, ಟಿವಿ 9, ಆನೇಕಲ್