30 ವರ್ಷ ಕಾಲ ಗಡಿ ಕಾದಿದ್ದ ಯೋಧನಿಗೆ ದೇವನಹಳ್ಳಿ ಅಧಿಕಾರಿಗಳಿಂದ ಅನ್ಯಾಯ ಆರೋಪ, ಬೆಳೆ ನಾಶಗೊಳಿಸಿ ಕುಕೃತ್ಯ

| Updated By: ಸಾಧು ಶ್ರೀನಾಥ್​

Updated on: Jan 10, 2023 | 7:37 PM

ಸರ್ಕಾರಿ ಗೋಮಾಳ ಜಮೀನಿನಲ್ಲಿ ಗ್ರಾಮದ 30ಕ್ಕೂ ಅಧಿಕ ಜನರು ವ್ಯವಸಾಯ ಮಾಡಿಕೊಂಡು ಬರ್ತಿದ್ದಾರಂತೆ. ಆದ್ರೆ ಅವರ ಬಳಿಯೆಲ್ಲ ಒತ್ತುವರಿ ತೆರವು ಮಾಡದ ಅಧಿಕಾರಿಗಳು ಕೇವಲ ನಿವೃತ್ತ ಯೋಧನ ಕುಟುಂಬಸ್ಥರಿಗೆ ಮಾತ್ರ ಕಿರುಕುಳ ನೀಡ್ತಿದ್ದಾರಂತೆ.

30 ವರ್ಷ ಕಾಲ ಗಡಿ ಕಾದಿದ್ದ ಯೋಧನಿಗೆ ದೇವನಹಳ್ಳಿ ಅಧಿಕಾರಿಗಳಿಂದ ಅನ್ಯಾಯ ಆರೋಪ, ಬೆಳೆ ನಾಶಗೊಳಿಸಿ ಕುಕೃತ್ಯ
ಯೋಧನಿಗೆ ಅಧಿಕಾರಿಗಳಿಂದ ಅನ್ಯಾಯ ಆರೋಪ
Follow us on

ಆತ ಸತತ 30 ವರ್ಷ ಕಾಲ ಗಡಿಯಲ್ಲಿ ದೇಶ ಸೇವೆ ಮಾಡಿ ನಿವೃತ್ತಿಯಾಗಿದ್ದು ನಿವೃತ್ತಿ ಜೀವನವನ್ನ ಕೃಷಿ ಮಾಡುವ ಮೂಲಕ ಕುಟುಂಬಸ್ಥರ ಜೊತೆ ಸಾಗಿಸುತ್ತಿದ್ದ. ಆದ್ರೆ ಏಕಾಏಕಿ ಯೋಧನ ಜಮೀನಿಗೆ ಬಂದ ಅಧಿಕಾರಿಗಳು ಯೋಧನ ಕುಟುಂಬಕ್ಕೆ ಆಧಾರವಾಗಿದ್ದ ಭೂಮಿಯನ್ನೆ ಕಿತ್ತುಕೊಳ್ಳಲು ಮುಂದಾಗಿದ್ದು ಯೋಧ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿದಿದ್ದಾರೆ.

ಕೃಷಿ ಭೂಮಿಯಲ್ಲಿ ತಿಂಗಳಾನುಗಟ್ಟಲೆ ಕಷ್ಟಪಟ್ಟು ಬೆಳೆದಿದ್ದ ಬೆಳೆಯೆಲ್ಲ ಒಮ್ಮೆಲೆ ನಾಶವಾಗಿದೆ. ಸಾಲಸೋಲ ಮಾಡಿ ಹಾಕಿದ್ದ ಬಂಡವಾಳ ಮಣ್ಣು ಪಾಲಾಗಿದ್ರೆ ಕೈಗೆ ಬಂದಿದ್ದ ತುತ್ತು ಬಾಯಿಗೆ ಬರಲಿಲ್ಲವಲ್ಲಾ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ. ನೊಡುತ್ತಲೇ ಫಸಲು ಕೊಡ್ತಿದ್ದ ಗಿಡಗಳು ಎಂದು ಹೇಳಬಹುದಿತ್ತಾದರೂ, ಎಲ್ಲವನ್ನೂ ಕ್ಷಣ ಮಾತ್ರದಲ್ಲೆ ನಾಶ ಮಾಡಿದ್ದು ಕುಟುಂಬಸ್ಥರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಹೌದು ಅಂದಹಾಗೆ ಇಷ್ಟೆಲ್ಲ ರಾದ್ಧಾಂತ ಮತ್ತು ಅವಾಂತರಗಳಿಗೆ ಕಾರಣವಾಗಿರುವುದು ಗ್ರಾಮದ ಪಾಲಿಟಿಕ್ಸ್.

ನಿವೃತ್ತ ಯೋಧ ಬೆಳೆದಿದ್ದ ಬೆಳೆ ನಾಶಪಡಿಸಿ ದರ್ಪ

ಅಂದಹಾಗೆ ಇವರ ಹೆಸರು ರಾಜಗೋಪಾಲ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಹಾರೋಹಳ್ಳಿ ಗ್ರಾಮದವರಾದ ಇವರು ಸತತ 30 ವರ್ಷಗಳ ಕಾಲ ಗಡಿ ಭದ್ರತಾ ಪಡೆಯಲ್ಲಿ ಯೋಧನಾಗಿ ಕೆಲಸ ಮಾಡಿದ್ದು ಕೆಲ ವರ್ಷದಿಂದಷ್ಟೆ ನಿವೃತ್ತಿಯಾಗಿ ಬಂದಿದ್ದಾರೆ. ಜತೆಗೆ ನಿವೃತ್ತಿಯ ನಂತರ ಕುಟುಂಬಸ್ಥರ ಜೊತೆ ನೆಮ್ಮದಿಯ ಜೀವನ ಸಾಗಿಸೋಣಾ ಅಂತ ಮೊದಲಿನಿಂದಲೂ ಹಿರಿಯರು ಮಾಡಿಕೊಂಡು ಬರ್ತಿದ್ದ ಸರ್ಕಾರಿ ಭೂಮಿಯಲ್ಲಿ ಎಲ್ಲರಂತೆ ಟೊಮಾಟೋ ಸೇರಿದಂತೆ ಹಲವು ಮಿಶ್ರ ಬೆಳೆಗಳನ್ನಿಟ್ಟು ಜೀವನ ಸಾಗಿಸುತ್ತಿದ್ರು.

ಆದ್ರೆ ಇತ್ತೀಚೆಗೆ ಸರ್ಕಾರಿ ಭೂಮಿ ಅಂತ ಕೆಲವರು ಗ್ರಾಮದಲ್ಲಿ ಖ್ಯಾತೆ ತೆಗೆದಿದ್ದು ಕಿರುಕುಳ ನೀಡಿದ್ರಂತೆ. ಆದರೂ ಮೊದಲಿನಿಂದಲೂ ಹಿರಿಯರು ಮಾಡಿಕೊಂಡು ಬರ್ತಿದ್ದ ಜಮೀನು ಅಂತ ಫಾರಂ 57 ಹಾಕಿಕೊಂಡಿದ್ದು ಅವರ ಕೆಲಸ ಅವರು ಮಾಡ್ತಿದ್ರಂತೆ. ಆದ್ರೆ ಗ್ರಾಮದ ಕೆಲ ರಾಜಕೀಯ ನಾಯಕರ ಪಿತೂರಿಗೆ ಒಳಗಾದ ಗ್ರಾಮ ಪಂಚಾಯ್ತಿ ಮತ್ತು ಕಂದಾಯ ಅಧಿಕಾರಿಗಳು ಏಕಾಏಕಿ ಜಮೀನು ಬಳಿಗೆ ಬಂದು ಬೆಳೆ ನಾಶ ಮಾಡಿದ್ದಾರಂತೆ. ತೋಟದಲ್ಲಿ ಫಸಲಿಗೆ ಬಂದಿದ್ದ ಟೊಮಾಟೋ ಸೇರಿದಂತೆ ಹಲವು ಬೆಳೆಗಳನ್ನ ಜೆಸಿಬಿ ಮೂಲಕ ನಾಶಪಡಿಸಿದ್ದು ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆಯನ್ನೆಲ್ಲ ಮಣ್ಣು ಪಾಲು ಮಾಡಿದ್ದಾರೆ ಅಂತ ನಿವೃತ್ತ ಯೋಧನ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ನಿವೃತ್ತ ಯೋಧ ರಾಜಗೋಪಾಲ್ ಕುಟುಂಬಸ್ಥರು ಇದೇ ಸರ್ಕಾರಿ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದು ಇದೇ ರೀತಿ ಸರ್ಕಾರಿ ಗೋಮಾಳ ಜಮೀನಿನಲ್ಲಿ ಗ್ರಾಮದ 30ಕ್ಕೂ ಅಧಿಕ ಜನರು ವ್ಯವಸಾಯ ಮಾಡಿಕೊಂಡು ಬರ್ತಿದ್ದಾರಂತೆ. ಆದ್ರೆ ಅವರ ಬಳಿಯೆಲ್ಲ ಒತ್ತುವರಿ ತೆರವು ಮಾಡದ ಅಧಿಕಾರಿಗಳು ಕೇವಲ ನಿವೃತ್ತ ಯೋಧನ ಕುಟುಂಬಸ್ಥರಿಗೆ ಮಾತ್ರ ಕಿರುಕುಳ ನೀಡ್ತಿದ್ದಾರಂತೆ.

ಜತೆಗೆ ಈ ಹಿಂದೆ ಯೋಧನ ಕುಟುಂಬಸ್ಥರು ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕಾರಣ ಅದೇ ರಾಜಕೀಯ ಜಿದ್ದನ್ನ ಇಟ್ಟುಕೊಂಡು ಇದೀಗ ಕಿರುಕುಳ ನೀಡ್ತಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಸಚಿವರ ಗಮನಕ್ಕೆ ತಂದರೂ ನಮಗೆ ನ್ಯಾಯ ಸಿಗ್ತಿಲ್ಲ, ನಮಗೆ ನ್ಯಾಯ ಕೊಡಿಸಿ ಅಂತಾ ನೊಂದ ಕುಟುಂಬಸ್ಥರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಒಟ್ಟಾರೆ ಹಲವು ವರ್ಷಗಳ ಕಾಲ ದೇಶ ಸೇವೆ ಮಾಡಿಕೊಂಡು ಬಂದ ಯೋಧನಿಗೆ ಕನಿಷ್ಟ ನೋಟಿಸ್ ಸಹ ನೀಡದೆ, ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ಏಕಾಏಕಿ ಹಾಳು ಮಾಡಿರುವುದು ವಿಪರ್ಯಾಸ. ಇನ್ನು ಈ ಕುರಿತು ನ್ಯಾಯಕ್ಕಾಗಿ ನೊಂದ ಕುಟುಂಬಸ್ಥರು ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದು ಅಧಿಕಾರಿಗಳು ನೊಂದ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.

ವರದಿ: ನವೀನ್, ಟಿ ವಿ 9, ದೇವನಹಳ್ಳಿ

Published On - 7:37 pm, Tue, 10 January 23