
ದೇವನಹಳ್ಳಿ, ನವೆಂಬರ್ 15: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವ ಅಂಬೇಡ್ಕರ್ ಭವನ ಇದೀಗ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕಿದ್ದ ಭವನದಲ್ಲಿ ವಿದ್ಯುತ್ ಇಲ್ಲದೆ ಕತ್ತಲು ಆವರಿಸಿದೆ. ಲಕ್ಷಾಂತರ ರೂ ಕರೆಂಟ್ ಬಿಲ್ ಬಾಕಿ ಉಳಿದುಕೊಂಡಿದೆ. ನಿರ್ವಹಣೆಯ ಕೊರತೆಯಿಂದ ಕಟ್ಟಡದ ಆವರಣ ಕಸದ ರಾಶಿಯಿಂದ ತುಂಬಿದ್ದು, ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ 2014ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ 8 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನವನ್ನ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಹಲವು ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳನ್ನ ಮಾಡಿಕೊಂಡು ಬಂದ ಅಧಿಕಾರಿಗಳು ಅದರ ವಿದ್ಯುತ್ ಬಿಲ್ ಮಾತ್ರ ಕಟ್ಟಿರಲಿಲ್ಲ. ಜೊತೆಗೆ ಕಳೆದ 10 – 12 ವರ್ಷಗಳಿಂದ ವಿದ್ಯುತ್ ಬಿಲ್ 14 ಲಕ್ಷಕ್ಕೂ ಅಧಿಕ ಪೆಂಡಿಂಗ್ ಬಿದ್ದಿದ್ದು ಹಲವು ಭಾರಿ ನೋಟಿಸ್ ನೀಡಿದರು ಅಧಿಕಾರಿಗಳು ಪಾವತಿ ಮಾಡಿಲ್ಲ. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ಅಂಬೇಡ್ಕರ್ ಭವನದ ಕರೆಂಟ್ ಕಟ್ ಮಾಡಿದ್ದು, ಕಳೆದ ಒಂದು ವರ್ಷದಿಂದ ಕೋಟಿ ಕೋಟಿ ಹಣ ಹಾಕಿ ನಿರ್ಮಾಣ ಮಾಡಿದ್ದ ಅಂಬೇಡ್ಕರ್ ಭವನ ಕರೆಂಟ್ಯಿಲ್ಲದೆ ಕತ್ತಲಲ್ಲಿ ಮುಳುಗಿದೆ.
ಅಂಬೇಡ್ಕರ್ ಭವನದಲ್ಲಿ ಕರೆಂಟ್ ಜೊತೆಗೆ ಕಾರ್ಯಕ್ರಮಗಳು ಮಾಡಲು ಎಲ್ಇಡಿ ಪರದೇ ಅಳವಡಿಸಿ ವೇದಿಕೆ ಸಹ ನಿರ್ಮಾಣ ಮಾಡದೇ ಹಾಗೆ ಬಿಟ್ಟಿದ್ದಾರೆ. ಜೊತೆಗೆ ಕಾರ್ಯಕ್ರಮಗಳು ನಡೆದಾಗ ಜನ ತಿಂದು ಹಾಕಿದ ಪ್ಲೇಟ್ಗಳು ಕಸ ಕಡ್ಡಿಯನ್ನೆಲ್ಲಾ ಭವನದ ಆವರಣದಲ್ಲೇ ಬಿಟ್ಟಿದ್ದು, ಗಬ್ಬೆದ್ದು ನಾರುತ್ತಿದೆ.
ಜೊತೆಗೆ ಕಳೆದ ಒಂದೂವರೆ ವರ್ಷದಿಂದ ಕರೆಂಟ್ ಇಲ್ಲದ ಕಾರಣ ಭವನ ಬಸ್ ನಿಲ್ಥಾಣದ ಬಳಿಯೆ ಇದ್ದು ರಾತ್ರಿಯಾದರೆ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗ್ತಿದೆ. ಈಗಾಗಲೇ ಭವನದ ಗಾಜುಗಳು ಹೊಡೆದು ಪಾರ್ಕಿಂಗ್ ಸಹ ನಿರ್ವಹಣೆಯಿಲ್ಲದೆ ಹಾಳಾಗ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವರ ಕ್ಷೇತ್ರದಲ್ಲೇ ಈ ರೀತಿ ಆದರೆ ಹೇಗೆ ಅಂತ ಸ್ಥಳಿಯರು ಆಕ್ರೊಶ ಹೊರಹಾಕಿದ್ದಾರೆ.
ಇದನ್ನೂ ಓದಿ: ನೆಲಮಂಗಲದ ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ನಟ ವಿನೋದ್ ರಾಜ್ ಬೇಸರ
ಒಟ್ಟಾರೆ ಕೋಟ್ಯಂತರ ರೂ ಸಾರ್ವಜನಿಕರ ತೆರಿಗೆ ಹಣ ಹಾಕಿ ಕಟ್ಟಿದ ಅಂಬೇಡ್ಕರ್ ಭವನ ದೀನ ದಲಿತರು ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ಬಳಕೆಯಾಗದೆ ಮೂಲೆ ಗುಂಪಾಗಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದರೂ ಸಚಿವರು ಮತ್ತು ಜಿಲ್ಲಾಡಳಿತ ಎಚ್ಚೆತ್ತು ಭವನಕ್ಕೆ ಕರೆಂಟ್ ಭಾಗ್ಯ ಕಲ್ಪಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.