ದೇವನಹಳ್ಳಿ, ಜುಲೈ.08: 4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು (Street Dogs) ದಾಳಿ ನಡೆಸಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ 4 ವರ್ಷದ ಅವಾಜ್ ಬಾಷಾ ಎಂಬ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದು ಬಾಲಕನ ಮುಖಕ್ಕೆ ಗಾಯಗಳಾಗಿವೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಿನ್ನೆ ಸಂಜೆ ಮಕ್ಕಳ ಜೊತೆ ಅಂಗಡಿಗೆ ಹೋಗುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಬೀದಿನಾಯಿಗಳು ಮಗುವನ್ನು ಕಚ್ಚಿ ಘಾಸಿಗೊಳಿಸಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಮಗು ಪಾರಾಗಿದೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯ ಹೆಡಗರಹಳ್ಳಿ ಗ್ರಾಮದಲ್ಲಿ ಮುದ್ದಾದ ಮೂರು ತಿಂಗಳ ಹೆಣ್ಣು ಮಗುವನ್ನ ನಿರ್ದಯಿ ತಾಯಿ ಅನಾಥವಾಗಿ ಬಿಟ್ಟುಹೋಗಿದ್ದಾಳೆ. ಆಶಾ ಕಾರ್ಯಕರ್ತೆಯೊಬ್ಬರು ವಾಕಿಂಗ್ ಮಾಡುವ ವೇಳೆ ಮಗುವಿನ ಅಳುವಿನ ಶಬ್ಧ ಕೇಳಿಸಿದ್ದು ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಪತ್ತೆಯಾಗಿದೆ. ಆಶಾ ಕಾರ್ಯಕರ್ತೆ ಕಲಾವತಿಯವರು ತಕ್ಷಣ ನೊಣವಿನಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಆಂಬುಲೆನ್ಸ್ ಮೂಲಕ ಮಗುವನ್ನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ. ಮಗು 4.5ಕೆ.ಜಿ ತೂಕವಿದ್ದು ಮಕ್ಕಳ ತಜ್ಞೆ ಡಾ.ಶಿರಿಷ ಅವರಿಂದ ಮಗುವಿನ ಆರೋಗ್ಯ ತಪಾಸಣೆ ನಡೆಸಲಾಗಿದೆ. ಮಗುವಿನ ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಗಂಡು ಮಗುವಿಗೆ ಜನ್ಮ ನೀಡಿದ ರೀಟಾ, ವಿಡಿಯೋ ನೋಡಿ
ಗೋಮಾಂಸ ಮಾರಾಟ ಮಾಡುತ್ತಿದ್ದವರನ್ನ ಹಿಂದೂ ಕಾರ್ಯಕರ್ತರು ತಡೆದು, ದೂರು ದಾಖಲಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕಮತಗಿಯಲ್ಲಿ ಘಟನೆ ನಡೆದಿದ್ದು, ಮನೆ ಮನೆಗೂ ತೆರಳಿ ಗೋಮಾಂಸ ಮಾರಾಟ ಮಾಡುತ್ತಿದ್ದ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಶಬ್ಬೀರ್ ಬೇಪಾರಿ, ಕಮಲಸಾಬ್ ಬೇಪಾರಿ, ಮಹಿಬೂಬಸಾಬ ಬೇಪಾರಿ, ಮೌಲಾಲಿ ವಿರುದ್ಧ ಅಮೀನಗಢ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ