
ದೇವನಹಳ್ಳಿ, ಅಕ್ಟೋಬರ್ 05: ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಪುಂಡರಿಬ್ಬರು ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗಹಳ್ಳಿಯಲ್ಲಿ ನಡೆದಿದೆ. ಹರಹಾನ್ ಸಾರಿಹಾನ್, ಬಸೀರ್ ಅಲಿಯಾಸ್ ಗಿಡ್ಡನಿಂದ ಮಣಿಕಂಠ ಮತ್ತು ರಾಯಪ್ಪ ಪೂಜಾರಿ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳು ಪೊಲೀಸರಿಗೆ ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಾದ ಹರಹಾನ್ ಸಾರಿಹಾನ್ ಮತ್ತು ಬಸೀರ್ ಅಲಿಯಾಸ್ ಗಿಡ್ಡ ಇಬ್ಬರು ಕುಡಿದ ಮತ್ತಿನಲ್ಲಿ ಜಗಳವಾಡುತ್ತಿದ್ದರು. ಈ ವೇಳೆ ಸ್ಥಳೀಯರು 112ಗೆ ಕರೆ ಮಾಡಿದ್ದಾರೆ. ಈ ವೇಳೆ ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಮಣಿಕಂಠ ಮತ್ತು ರಾಯಪ್ಪ ಪೂಜಾರಿ ಸ್ಥಳಕ್ಕೆ ಬಂದು ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆಯೇ ಆರೋಪಿಗಳು ಎರಗಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯ ಎದೆ, ಕೈಕಾಲುಗಳಿಗೆ ಗಾಯಗಳಾಗಿವೆ.
ಅಪ್ರಾಪ್ತ ಬಾಲಕನ ಮೇಲೆ ಯುವಕರ ಗ್ಯಾಂಗ್‌ನಿಂದ ಹಲ್ಲೆ ಮಾಡಿ ವಿಡಿಯೋ ಚಿತ್ರೀಕರಿಸಿ ವಿಕೃತಿ ಮೆರೆದಿರುವ ಘಟನೆ ವಿಜಯಪುರ ನಗರದ ಹೊರಭಾಗದಲ್ಲಿ ಘಟನೆ ನಡೆದಿದೆ. ವಿಡಿಯೋ ವೈರಲ್ ಬಳಿಕ ಘಟನೆ ಬೆಳಕಿಗೆ ಬಂದಿದೆ. ಶಾಲೆಗೆ ಪರೀಕ್ಷೆ ಬರೆಯಲು ತೆರಳಿದ್ದ ಬಾಲಕನನ್ನು ಕರೆದೊಯ್ದು, ಪ್ರಜ್ವಲ ಭಜಂತ್ರಿ, ಅಭಿಷೇಕ, ಪುಟ್ಟು ಸೇರಿ ಏಳೆಂಟು ಜನರಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ನೀರಿನ ವಿಚಾರದಲ್ಲಿ ಬಾಡಿಗೆ ಮನೆಗಳಲ್ಲಿರುವ ಬಾಲಕನ ತಂದೆ ಹಾಗೂ ಪ್ರಜ್ವಲ್ ಭಜಂತ್ರಿ ನಡುವೆ ಜಗಳವಾಗಿದೆ. ಆರು ತಿಂಗಳ ಹಿಂದೆ ಎರಡು ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಜಗಳ ಮಾಡಿಕೊಳ್ಳದಂತೆ ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದರು. ಅದೇ ಹಳೆಯ ಜಗಳದ ಸಿಟ್ಟಿನಲ್ಲಿ ಬಾಲಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮಿತಿಮೀರಿದ ಗಾಂಜಾ ಹಾವಳಿ: ಕೇವಲ 500 ರೂ.ಗಾಗಿ ಕಾರ್ಮಿಕನ ಕೊಲೆ
ಇನ್ನು ವೈರಲ್ ವಿಡಿಯೋದಲ್ಲಿ ಯುವಕರ ಗ್ಯಾಂಗ್ ಕಾಲಿನಿಂದ ಒದ್ದು, ಮನಸೋಯಿಚ್ಛೆ ಥಳಿಸಿದ್ದಾರೆ. ಮನೆಯಲ್ಲಿ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಹೀಗಾಗಿ ಬಾಲಕ ಭಯದಿಂದ ಪೋಷಕರಿಗೆ ವಿಷಯ ತಿಳಿಸಿರಲಿಲ್ಲ. ಹಲ್ಲೆ ಬಳಿಕ ಜ್ವರದಿಂದ ಬಳಲಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆದಿದ್ದ. ಆದರೆ ಹಲ್ಲೆಯ ವಿಡಿಯೋ ವೈರಲ್ ಬಳಿಕ ಪೋಷಕರಿಗೆ ವಿಚಾರ ಗೊತ್ತಾಗಿದೆ. ಇದೀಗ ಆದರ್ಶ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಪೋಷಕರು ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.