ಕುಡಿದ ಅಮಲಲ್ಲಿ ಹೊಡೆದಾಡಿಕೊಂಡ ಕಾರ್ಮಿಕರು, 8 ಆರೋಪಿಗಳ ಬಂಧನ: ಉತ್ತರಹಳ್ಳಿಯಲ್ಲಿ ಪುಂಡಾಟ ಮೆರೆದಿದ್ದ 11 ಆರೋಪಿಗಳ ಸೆರೆ
ಬೆಂಗಳೂರಿನ ಬನಶಂಕರಿಯಲ್ಲಿ ಕುಡಿದ ಅಮಲಿನಲ್ಲಿ ಕಟ್ಟಡ ಕಾರ್ಮಿಕರ ನಡುವೆ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸುಬ್ರಮಣ್ಯಪುರದ ಉತ್ತರಹಳ್ಳಿಯಲ್ಲಿ ಗಣೇಶ ಹಬ್ಬದ ವೇಳೆ ಮಚ್ಚು ಬೀಸಿ ನಾಲ್ವರ ಮೇಲೆ ದಾಳಿ ಕೇಸ್ನಲ್ಲಿ 11 ಜನರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಮುಖ್ಯಾಂಶಗಳು
- ಬೆಂಗಳೂರಿನಲ್ಲಿ ನಡೆದ ಪ್ರತ್ಯೇಕ ಕ್ರೈಂ ಪ್ರಕರಣಗಳು
- ಕಟ್ಟಡ ಕಾರ್ಮಿಕರ ನಡುವೆ ಗಲಾಟೆ ಪ್ರಕರಣದಲ್ಲಿ 8 ಆರೋಪಿಗಳ ಬಂಧನ
- ಉತ್ತರಹಳ್ಳಿಯಲ್ಲಿ ಪುಂಡಾಟ ಮೆರೆದಿದ್ದ 11 ಆರೋಪಿಗಳ ಸೆರೆ
ಬೆಂಗಳೂರು, ಅಕ್ಟೋಬರ್ 02: ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಕಟ್ಟಡ ಕಾರ್ಮಿಕರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಠಾಣೆ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಮಿಕರ ನಡುವಿನ ಗಲಾಟೆಯ ದೃಶ್ಯ ಸ್ಥಳಿಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ನಡೆದಿದ್ದೇನು?
ನಿನ್ನೆ ರಾತ್ರಿ ಬನಶಂಕರಿಯ ಖಾಸಗಿ ಅಪಾರ್ಟ್ಮೆಂಟ್ ಬಳಿಯ ಕಾರ್ಮಿಕರ ಶೆಡ್ನಲ್ಲಿ ಕುಡಿದ ಅಮಲಿನಲ್ಲಿ ಕಾರ್ಮಿಕರ ಗುಂಪು ಹೊಡೆದಾಡಿಕೊಂಡಿದ್ದಾರೆ. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಕಾರ್ಮಿಕರ ನಡುವೆ ನಡೆದ ಈ ಹೊಡೆದಾಟದಲ್ಲಿ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಇನ್ನು ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಬನಶಂಕರಿ ಪೊಲೀಸರು, ಪರಿಶೀಲಿಸಿ 8 ಕಾರ್ಮಿಕರನ್ನು ಬಂಧಿಸಿದ್ದಾರೆ.
ಉತ್ತರಹಳ್ಳಿಯಲ್ಲಿ ಹವಾ ಸೃಷ್ಟಿಸಲು ಮಚ್ಚು ಬೀಸಿದ್ದ ಗ್ಯಾಂಗ್: ಮಹಿಳೆ ಸೇರಿ 11 ಮಂದಿ ಸೆರೆ
ಮತ್ತೊಂದು ಪ್ರಕರಣದಲ್ಲಿ ಇತ್ತೀಚೆಗೆ ಗಣೇಶ ಹಬ್ಬದ ವೇಳೆ ಏರಿಯಾದಲ್ಲಿ ಹವಾ ಸೃಷ್ಟಿಸಲು ಸಿಕ್ಕ ಸಿಕ್ಕವರ ಮೇಲೆ ಮಚ್ಚು, ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ್ದ ಪುಂಡರ ಗ್ಯಾಂಗ್ ಅನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಪ್ರಕರಣದಲ್ಲಿ ಮಹಿಳೆ ಸೇರಿ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು
ಪ್ರೇಮ್ ಅಲಿಯಾಸ್ ಚಿನ್ನು (19), ಮಣಿಕಂಠ (27), ಮನೋಜ್ (20), ಕೃಷ್ಣಗುಪ್ತ ಅಲಿಯಾಸ್ ಕುಳ್ಳ (19), ಆಕಾಶ್ ಅಲಿಯಾಸ್ ಮಂಡ್ಯ (23), ಮುನ್ನಾ (29), ಮಧುಸೂದನ್ ಅಲಿಯಾಸ್ ಒಪ್ಪೋ ಮಧು (24), ದರ್ಶನ್ (23), ಸುದೀಪ (25) ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ್ದ ಓರ್ವ ಮಹಿಳೆ ಸೇರಿದಂತೆ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ
ಸೆಪ್ಟೆಂಬರ್ 20ರಂದು ಆರೋಪಿಗಳು ಹಳೆ ದ್ವೇಷದ ಹಿನ್ನೆಲೆ ಸ್ಯಾಂಡಿ ಎಂಬಾತನನ್ನು ಹುಡುಕಿಕೊಂಡು ಉತ್ತರಹಳ್ಳಿ ಆರ್ಚ್ ಬಳಿಯ ಖಾಲಿ ಸೈಟ್‌ಗೆ ಬಂದಿದ್ದರು. ಸ್ಯಾಂಡಿ ಸಿಗದಿದ್ದಾಗ, ಅಲ್ಲಿದ್ದ ಇಬ್ಬರ ಮೇಲೆ ಡ್ರ್ಯಾಗರ್ ಮತ್ತು ಚಾಕುವಿನಿಂದ ಹಲ್ಲೆ ಮಾಡಿದ್ದರು. ಬಳಿಕ ಆರೇಳು ಜನರ ಗುಂಪು ಕಿರಣ್ ಎಂಬಾತನ ಮೇಲೆಯೂ ಮಾರಣಾಂತಿಕ ದಾಳಿ ನಡೆಸಿತ್ತು. ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಮೀನಿನ ಅಂಗಡಿಗೆ ತೆರಳಿದ ಗ್ಯಾಂಗ್, ಅಲ್ಲಿ ಮೀನು ತಿನ್ನಲು ಕುಳಿತಿದ್ದ ರವಿಚಂದ್ರನ್ ಎಂಬಾತನ ಮೇಲೂ ಹಲ್ಲೆ ನಡೆಸಿತ್ತು.
ರೌಡಿಶೀಟರ್ ಪಟ್ಟಿಗೆ ಪ್ರಮುಖ ಆರೋಪಿ
ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸುಬ್ರಹ್ಮಣ್ಯಪುರ ಪೊಲೀಸರು ಕೊಲೆ ಯತ್ನ ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಪ್ರೇಮ್ ಅಲಿಯಾಸ್ ಚಿನ್ನು ವಿರುದ್ಧ ಈಗಾಗಲೇ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಗ್ಯಾಂಗ್ ಕಟ್ಟಿಕೊಂಡು ಪುಂಡಾಟಿಕೆ ನಡೆಸುತ್ತಿದ್ದ ಹಿನ್ನೆಲೆ ಆತನ ವಿರುದ್ಧ ರೌಡಿಶೀಟ್ ತೆರೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸದ್ಯ ಬಂಧಿತರನ್ನ ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.




