ದೊಡ್ಡಬಳ್ಳಾಪುರ: ಡ್ರ್ಯಾಗನ್ ನಾಡು ಚೀನಾದಲ್ಲಿ ಉಲ್ಭಣಿಸಿರುವ ಮಹಾಮಾರಿ ಕೊರೊನಾ ವೈರಸ್ಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಈಗಾಗಲೇ ಚೀನಾದಲ್ಲಿ 300ಕ್ಕೂ ಹೆಚ್ಚು ಮಂದಿಯನ್ನು ಈ ಡೆಡ್ಲಿ ವೈರಸ್ ಬಲಿಪಡೆದಿದೆ. ಚೀನಾದಿಂದ ದೊಡ್ಡಬಳ್ಳಾಪುರಕ್ಕೆ ಸುರಕ್ಷಿತವಾಗಿ ಯೋಗ ಶಿಕ್ಷಕ ಹರೀಶ್ ಆಗಮಿಸಿದ್ದು, ಕೊರೊನಾ ಭೀತಿ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮಹಾಮಾರಿ ಕೊರೊನಾ ವ್ಯಾಪಿಸಿದ್ದು, ವೈರಸ್ನಿಂದ ಚೀನಾದಲ್ಲಿ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕೋದು ಕಡ್ಡಾಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಿಸಿ ನೀರು ಸೇವನೆ ಮಾಡುವುದು ಮತ್ತು ಹ್ಯಾಂಡ್ ವಾಶ್ ಮಾಡಬೇಕೆಂದು ಚೀನಾ ಸರ್ಕಾರ ಕಟ್ಟಪ್ಪಣೆ ಮಾಡಿದೆ. ಅಲ್ಲದೆ, ಕೊರೊನಾ ಭೀತಿಯಿಂದ ಮನೆಗಳಿಂದ ಜನರು ಹೊರಬರಲು ಹೆದರುತ್ತಿದ್ದಾರೆ ಎಂದರು.
ವುಹಾನ್ ಪ್ರಾಂತ್ಯದಲ್ಲಿ ಅಂಗಡಿ, ಮುಂಗಟ್ಟುಗಳೆಲ್ಲಾ ಕ್ಲೋಸ್ ಮಾಡಲಾಗಿದೆ. ಚೀನಾ ವಿಮಾನ ನಿಲ್ದಾಣ ಸೇರಿದಂತೆ ಎಲ್ಲೆಡೆ ಹೈಅಲರ್ಟ್ ಘೋಷಿಸಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಚೀನಾ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಚೀನಾದಿಂದ ವಾಪಸ್ ಆದ ಯೋಗ ಶಿಕ್ಷಕ ಹರೀಶ್ ಅಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಕಾಸರಗೋಡಿನಲ್ಲಿ ಕೊರೋನಾ ವೈರಸ್ ಪತ್ತೆ: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗಡಿಭಾಗದ ಕಾಸರಗೋಡಿನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಚೀನಾದ ವುಹಾನ್ ವಿಶ್ವ ವಿದ್ಯಾಲಯದಿಂದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗೆ ಆಗಮಿಸಿರುವ ವಿದ್ಯಾರ್ಥಿಯಲ್ಲಿ ವೈರಸ್ ಕಂಡುಬಂದಿದೆ. ಕೆಲ ದಿನಗಳ ಹಿಂದಷ್ಟೇ ಚೀನಾದಿಂದ ಕಾಸರಗೋಡಿಗೆ ವಿದ್ಯಾರ್ಥಿ ಆಗಮಿಸಿದ್ದ. ಕಾಂಞಗಾಡ್ ಜಿಲ್ಲಾಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ವೇಳೆ ಸೋಂಕು ಇರುವುದು ದೃಢವಾಗಿದೆ. ಈವರೆಗೆ ಕೇರಳದಲ್ಲಿ ಮೂವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.
ಚೀನಾ ಷೇರುಪೇಟೆ ವಹಿವಾಟು ಕುಸಿತ: ಕೊರೊನಾ ವೈರಸ್ ಹರಡಿರುವ ಹಿನ್ನೆಲೆಯಲ್ಲಿ ಚೀನಾ ಷೇರು ಮಾರುಕಟ್ಟೆಯಲ್ಲಿಂದು ಅಲ್ಲೋಲ ಕಲ್ಲೋಲವಾಗಿದೆ. ಇಂದು ಒಂದೇ ದಿನ ₹30 ಲಕ್ಷ ಕೋಟಿ ಷೇರು ಮಾರಾಟ ಮಾಡಿದ್ದಾರೆ. ಹೂಡಿಕೆದಾರರು 420 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ. ಶಾಂಘೈ ಕಾಂಪೋಸಿಟ್ ಸೂಚ್ಯಂಕ ಶೇ.8ರಷ್ಟು ಕುಸಿದಿದ್ದು, ಚೀನಾದ 2,500 ಕಂಪನಿಗಳ ಷೇರು ಶೇ.10ರಷ್ಟು ಕುಸಿತ ಕಂಡಿದೆ. ಜ.23ರ ನಂತರ ಇಂದು ಚೀನಾ ಷೇರುಪೇಟೆ ವಹಿವಾಟು ಡಾಲರ್ ಎದುರು ಯುಆನ್ ಮೌಲ್ಯ ಶೇ. 1.2ರಷ್ಟು ಕುಸಿತವಾಗಿದೆ.