
ದೇವನಹಳ್ಳಿ, ನವೆಂಬರ್ 07: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಮಾಡ್ತಿರುವುದಾಗಿ ಪತ್ರವೊಂದು ಪತ್ತೆಯಾದ ಘಟನೆ ನಡೆದಿದೆ. ಅಷ್ಟರಲ್ಲಿ ಟೇಕ್ಆಫ್ ಆಗಿದ್ದ ವಿಮಾನ ಪತ್ರ ಸಿಕ್ಕ ಬೆನ್ನಲ್ಲೇ ತುರ್ತಾಗಿ ಪುನಃ ಏರ್ಪೋರ್ಟ್ಗೆ ವಾಪಸ್ ಆಗಿದೆ. ಒಟ್ಟು 178 ಪ್ರಯಾಣಿಕರನ್ನು ಕೆಳಗಡೆ ಇಳಿಸಿ ಭದ್ರತಾ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗಿದೆ.
ಇಂದು ಸಂಜೆ 5.50ಕ್ಕೆ KIABಯಿಂದ ಲಕ್ನೋಗೆ 6E451 ಸಂಖ್ಯೆಯ ಇಂಡಿಗೋ ವಿಮಾನ 178 ಪ್ರಯಾಣಿಕರನ್ನು ಹೊತ್ತು ಟೇಕ್ ಆಫ್ ಆಗಿತ್ತು. ವಿಮಾನ ಹಾರಾಟ ಆರಂಭಿಸಿದ ಕೆಲವೇ ಸಮಯದಲ್ಲಿ ಪ್ರಯಾಣಿಕರೊಬ್ಬರು ಶೌಚಾಲಯಕ್ಕೆ ಹೋದಾಗ ಅಲ್ಲಿ ಬೆದರಿಕೆ ಪತ್ರವೊಂದು ಪತ್ತೆಯಾಗಿದೆ. ಆ ಪತ್ರದಲ್ಲಿ ‘ಈ ವಿಮಾನ ಸಂಜೆ 6:30ಕ್ಕೆ ಸರಿಯಾಗಿ ಹೈಜಾಕ್ ಆಗಲಿದೆ’ ಎಂದು ಬರೆಯಲಾಗಿತ್ತು.
ಶೌಚಾಲಯದಲ್ಲಿ ಬೆದರಿಕೆ ಪತ್ರ ಕಂಡ ತಕ್ಷಣವೇ ಪ್ರಯಾಣಿಕರು ವಿಮಾನದ ಸಿಬ್ಬಂದಿ ಹಾಗೂ ಪೈಲಟ್ ಗಮನಕ್ಕೆ ತಂದಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೈಲಟ್, ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಸಂಪರ್ಕಿಸಿ ಮಾಹಿತಿ ನೀಡಿ, ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಪುನಃ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ತಿರುಗಿಸಿದ್ದಾರೆ.
ಇನ್ನು ವಿಮಾನ ಕೆಐಎಬಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಿದ್ದಂತೆ, ಭದ್ರತಾ ಸಿಬ್ಬಂದಿ ಎಲ್ಲಾ 178 ಪ್ರಯಾಣಿಕರನ್ನು ಕೆಳಗಿಳಿಸಿ ತೀವ್ರ ತಪಾಸಣೆ ಮಾಡಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರೇ ಈ ಪತ್ರವನ್ನು ಬರೆದು ಶೌಚಾಲಯದಲ್ಲಿ ಇಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಕೆಂಪೇಗೌಡ ಏರ್‌ಪೋರ್ಟ್ ಪೊಲೀಸರು ಪ್ರಯಾಣಿಕರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನ ರದ್ದಾದ ಹಿನ್ನೆಲೆ ಗಲಾಟೆ ನಡೆದಿದೆ. ದೆಹಲಿಗೆ ತೆರಳಲು ಸ್ಪೈಸ್‌ಜೆಟ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದ ಮಹಿಳೆಯೊಬ್ಬರು, ಕೊನೆಯ ಕ್ಷಣದಲ್ಲಿ ವಿಮಾನಯಾನ ರದ್ದುಗೊಳಿಸಿದ್ದಕ್ಕೆ ಹಾಗೂ ಸಮರ್ಪಕ ಮಾಹಿತಿ ನೀಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ ರದ್ದಾದ ಹಿನ್ನೆಲೆಯಲ್ಲಿ ಸುಮಾರು 35 ಪ್ರಯಾಣಿಕರು ಸ್ಪೈಸ್‌ಜೆಟ್ ಕೌಂಟರ್ ಬಳಿ ಜಮಾಯಿಸಿದ್ದು, ಈ ವೇಳೆ ಮಹಿಳೆಯೊಬ್ಬರು ಕೌಂಟರ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಡೆ ಹಿಡಿದು ಎಳೆದಾಡಿ ಹಲ್ಲೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್ ಬಳಿ ಮಾಂಸ ತ್ಯಾಜ್ಯದ ಹಾವಳಿ: ದುರ್ವಾಸನೆಗೆ ಗ್ರಾಮಸ್ಥರು ಕಂಗಾಲು; ನಾಯಿ, ಹದ್ದುಗಳು ಹೆಚ್ಚಳ
ಮಹಿಳೆಯ ಈ ವರ್ತನೆಯನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಮಹಿಳೆ ಮತ್ತು ಸ್ಪೈಸ್‌ಜೆಟ್ ಸಿಬ್ಬಂದಿಯನ್ನು ಸಮಾಧಾನಪಡಿಸಿದ್ದಾರೆ. ಮಹಿಳೆಯ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೂ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.