ಬೆಂಗಳೂರು ಗ್ರಾಮಾಂತರ, ಮೇ.14: ಕಾರ್ಖಾನೆಯಲ್ಲಿ ಎಲ್ಪಿಜಿ(LPG) ಅನಿಲ ಸೋರಿಕೆಯಿಂದ ಬೆಂಕಿ ತಗುಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ(Dabaspete) ಕೈಗಾರಿಕಾ ಪ್ರದೇಶದ ಜಿಂದಾಲ್ ಅಲ್ಯುಮಿನಿಯಂ ಕಾರ್ಖಾನೆಯಲ್ಲಿ ನಡೆದಿದೆ. ಬಿಹಾರಿ ಮೂಲದ ಕಾರ್ಮಿಕ ತೋಸಿಫ್ ಖಾನ್(23) ಮೃತ ವ್ಯಕ್ತಿ. ಘಟನೆ ಹಿನ್ನಲೆ ಪ್ರೊಡಕ್ಷನ್ ಇನ್ ಚಾರ್ಜ್ ಅಮಿತ್ ಸರ್ಕಾರ್, ಸುರಕ್ಷತೆ ಅಧಿಕಾರಿ ಬಂಗಾರು ಸೇರಿದಂತೆ ಜಿಂದಾಲ್ ಫ್ಯಾಕ್ಟರಿಯ ಮುಖ್ಯಸ್ಥರು ಮತ್ತು ಆಡಳಿತ ವರ್ಗದವರು, ಜವಾಬ್ದಾರಿಯುತ ಅಧಿಕಾರಿಯನ್ನು ನೇಮಿಸದೇ ಕಾರ್ಮಿಕರಿಗೆ ಸುರಕ್ಷತಾ ಉಪಕರಣಗಳನ್ನು ನೀಡದೇ ನಿರ್ಲಕ್ಷ ತೋರಿದ್ದು, ಇದರಿಂದ ಇವರ ವಿರುದ್ಧ ಕಲಂ 304(ಎ) ಐಪಿಸಿ ಅಡಿ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ತಾಲೂಕಿನ ದಾಸನಪುರ ಎಪಿಎಂಸಿ ಬಳಿ ಕ್ಯಾಂಟರ್ ಡಿಕ್ಕಿಯಾಗಿ ಆಟೋದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ದಾಸನಪುರ ಎಪಿಎಂಸಿ ಬಳಿಯ ನಗರೂರಿನ ಮೊನಲಿಸಾ(31) ಸಾವು. ಇನ್ನು ಘಟನೆ ಹಿನ್ನಲೆ ಕ್ಯಾಂಟರ್ ವಾಹನವನ್ನು ಜಪ್ತಿ ಮಾಡಿ ಪೊಲೀಸ್ ಸಿಬ್ಬಂದಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ದುರಂತ: ಗಾಯಗೊಂಡಿದ್ದ ಮೂವರು ಸಾವು, ಅನಾಥವಾದ ಹಸುಗೂಸು
ದಾವಣಗೆರೆ: ಜಗಳೂರು ತಾಲೂಕಿನ ದೊಡ್ಡಭೋಮನಹಳ್ಳಿಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದಾಗ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಕಾಲುಜಾರಿ ಬಿದ್ದು ಕೃಷಿ ಮಹಿಳೆ ಸಾವನ್ನಪ್ಪಿದ್ದಾರೆ. ಶಾರದಮ್ಮ(59) ಮೃತರು. ಇತ್ತೀಚಿಗೆ ಸುರಿದ ಮಳೆಗೆ ಕೃಷಿ ಹೊಂಡ ತುಂಬಿಕೊಂಡಿತ್ತು. ಇಂದು(ಮೇ.14) ಮಧ್ಯಾನ್ನ ಎತ್ತುಗಳಿಗೆ ನೀರು ಕುಡಿಸಿಕೊಂಡು ಬರುವುದಕ್ಕೆ ಹೋದಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ