ಫಕೀರ ಅಂದ್ರೆ ಸೈತಾನನ್ನು ಓಡಿಸುವವ, ಮನೆಯಲ್ಲಿ ನೆಮ್ಮದಿ ತರ್ತಾನೆ ಅಂತ ಇಂದಿಗೂ ಕೆಲವರು ನಂಬುವುದು ಸಹಜ. ಆದ್ರೆ ಇದನ್ನೆ ಬಂಡವಾಳ ಮಾಡಿಕೊಂಡಿದ್ದ ಖತರ್ನಾಕ್ ಫಕೀರನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ರೆ ಮತ್ತೊಂದೆಡೆ ಕುಚುಕು ಸ್ನೇಹಿತರಿಬ್ಬರು ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ (Gold Jewellery) ಲೂಟಿ ಮಾಡಿ ಗೋವಾ ಕಡೆ ಸುತ್ತಾಡಿ ಸುಸ್ತಾಗಿದ್ದು ಕೊನೆಗೆ ಮಾವನ ಮನೆ (Arrest) ಸೇರಿದ್ದಾರೆ. ಒರ್ವ ಥೇಟ್ ಫಕೀರ (Fakir), ಕೈಯಲ್ಲೊಂದು ತಮಟೆ, ಹಣೆಗೆ ಪೇಟಾ, ಹೆಗಲ ಮೇಲೊಂದು ಶಾಲುವ ಹಾಕ್ಕೊಂಡು, ಕಗ್ಗತ್ತಲ ರಾತ್ರಿಯಲ್ಲಿ ರಸ್ತೆಗಿಳಿಯುತ್ತಿದ್ದ ಈ ಫಕೀರನನ್ನ ನೋಡಿದ್ರೆ ಯಾರಾದ್ರು ಎಲ್ಲೋ ಸೈತಾನನ್ನ ಓಡಿಸಲು ಹೋಗ್ತಿದ್ದಾನೆ ಅಂತಲೆ ಅಂದುಕೊಳ್ತಿದ್ರು. ಆದ್ರೆ ಸೈತಾನನ್ನ ಓಡಿಸುತ್ತೀನಿ ಅಂತ ಮನೆಗಳಿಗೆ ಎಂಟ್ರಿಕೊಡ್ತಿದ್ದ ಈ ಫಕೀರ ಮಾಡ್ತಿದ್ದ ಘನಂಧಾರಿ ಕೆಲಸಕ್ಕೆ ಅನೇಕ ಕುಟುಂಬಗಳೇ ಬೆಚ್ಚಿ ಬಿದ್ದಿವೆ. ಅಂದಹಾಗೆ ಮೇಲಿನ ಫೋಟೋದಲ್ಲಿರುವ ಈ ನಕಲಿ (Duplicate) ಫಕೀರನ ಹೆಸರು ಸೈಯದ್ ಸಲೀಂ, ಮೂಲತಃ ಶಿವಮೊಗ್ಗದ ಶಿಕಾರಿಪುರದವನಾದ ಇವನು ಬೊಂಬೆ ವ್ಯಾಪಾರಕ್ಕೆ ಅಂತ ಬೆಂಗಳೂರಿಗೆ ಬರ್ತಿದ್ದು, ಸಿಟಿಯಲ್ಲಿ ಫಕೀರನ ವೇಷ ಹಾಕ್ಕೊಂಡು ಬೀದಿ ಬೀದಿ ಸುತ್ತುತ್ತಾನೆ.
ಅದೇ ರೀತಿ ಕಳೆದ ಜನವರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರಕ್ಕೆ ಬಂದ ಈ ಫಕೀರ ನಗರದ ಹಲವು ಬಡಾವಣೆಗಳಲ್ಲಿ ಸುತ್ತಾಡಿದ್ದು ನಂತರ ಕಡಿಮೆ ಜನರಿರುವ ಮುಸಲ್ಮಾನರು ಮತ್ತಿತರೆ ಬಡವರ ಮನೆಗಳನ್ನ ನೋಡಿ ಅವರ ಮನೆಗೆ ಎಂಟ್ರಿ ಕೊಡ್ತಿದ್ದ.
ಮನೆಯಲ್ಲಿದ್ದವರಿಗೆ ಸೈತಾನ್ ಅದು ಇದು ಅಂತ ಬೆದರಿಸಿ ಮಂತ್ರ ಹಾಕೋದಾಗಿ ಮಾಡ್ತಿದ್ದ ಈ ಐನಾತಿ ನಂತರ ಮನೆಯಲ್ಲಿದ್ದವರಿಗೆ ಮಾತುಗಳಿಂದ ಮರಳು ಮಾಡಿ ಮನೆಯಲ್ಲಿನ ಚಿನ್ನಾಭರಣಗಳನ್ನ ಒಂದು ಮಡಿಕೆಯಲ್ಲಿ ನೀರಿಗೆ ಹಾಕಿಸಿ ಎರಡು ಗಂಟೆ ಬಿಟ್ಟು ಒಪನ್ ಮಾಡುವಂತೆ ಹೇಳಿ ಹೋಗ್ತಿದ್ದ.
ಇನ್ನು ಇವನ ಮರಳು ಮಾತುಗಳನ್ನ ನಂಬಿದ ಜನರು ಎರಡು ಗಂಟೆ ನಂತರ ಮಡಿಕೆ ಒಪನ್ ಮಾಡಿದಾಗ ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನು ಇದೇ ರೀತಿ ಈ ನಕಲಿ ಫಕೀರ ಹೊಸಕೋಟೆಯಲ್ಲಿ ಹತ್ತು ಕಡೆ ಮತ್ತು ನೆರೆಯ ಆಂಧ್ರ ಮತ್ತು ತಮಿಳುನಾಡಿನಲ್ಲಿ ಒಂದೊಂದು ಕಡೆ ಇದೇ ರೀತಿ ವಂಚನೆ ಮಾಡಿದ್ದು 300 ಗ್ರಾಂ ಚಿನ್ನಾಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿರುವುದಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಮಾಹಿತಿ ನೀಡಿದ್ದಾರೆ.
ಫಕೀರನ ವೇಶದಲ್ಲಿ ಬಂದು ಮೋಸ ಮಾಡುವುದು ಇವನ ಕೆಲಸವಾದ್ರೆ ಒಂಟಿ ಮನೆಗಳನ್ನೆ ಟಾರ್ಗೆಟ್ ಮಾಡಿಕೊಂಡು ಲೂಟಿ ಮಾಡ್ತಿದ್ದ ಕುಚುಕು ಗೆಳೆಯರದ್ದು ಮತ್ತೊಂದು ಕಥೆ. ಹೌದು ಮೂಲತಃ ದೊಡ್ಡಬಳ್ಳಾಫುರ ಮತ್ತು ನೆಲಮಂಗಲ ಮೂಲದವರಾದ ಭರತ್ ಮತ್ತು ಆನಂದ್ ಅನ್ನೂ ಈ ಇಬ್ಬರು ಕುಚುಕು ಗೆಳೆಯರು ಜೊತೆಯಲ್ಲೆ ಓದಿ ಬೆಳೆದಿದ್ದು ಹಣ ಮಾಡೋಕ್ಕೆ ಕಳ್ಳತನವನ್ನ ವೃತ್ತಿಯಾಗಿಸಿಕೊಂಡಿದ್ರು.
ಜತೆಗೆ ಬೈಕ್ ನಲ್ಲಿ ಏರಿಯಾಗಳಲ್ಲಿ ರೌಂಡ್ಸ್ ಹಾಕಿ ಬೀಗ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡ್ತಿದ್ದ ಖದೀಮರು ಮನೆಯ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣಗಳನ್ನ ದೋಚಿ ಎಸ್ಕೇಪ್ ಆಗ್ತಿದ್ರು. ಅದೇ ರೀತಿ ಹೊಸಕೋಟೆಯಲ್ಲಿಯೂ 5 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಂಟಿ ಮನೆಗಳಲ್ಲಿ ಕಳ್ಳತನ ಮಾಡಿ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಕುಚುಕು ಗೆಳಯರನ್ನ ಹೊಸಕೋಟೆ ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದ ತಂಡ ಬಂಧಿಸಿದೆ.
ಇನ್ನು ಈ ಎರಡು ಪ್ರಕರಣಗಳಲ್ಲಿ ಫಕೀರ ಮತ್ತು ಕುಚುಕು ಗೆಳೆಯರಿಂದ 32 ಲಕ್ಷ ಮೌಲ್ಯದ ಒಟ್ಟು 502 ಗ್ರಾಂ ಚಿನ್ನವನ್ನ ಹೊಸಕೋಟೆ ಪೊಲೀಸರು ವಶ ಪಡಿಸಿಕೊಳ್ಳುವ ಮೂಲಕ ಭರ್ಜರಿ ಬೇಟೆಯಾಡಿದ್ದಾರೆ.
ಒಟ್ಟಾರೆ ದುಡಿದು ತಿನ್ನುವ ವಯಸ್ಸಲ್ಲಿ ಸುಲಭವಾಗಿ ಹಣ ಮಾಡಿ ಶೋಕಿ ಮಾಡೋಕ್ಕೆ ಅಂತ ನಂಬಿಕೆಯನ್ನೆ ಬಂಡಾವಳ ಮಾಡಿಕೊಂಡು ಲಕ್ಷ ಲಕ್ಷ ಚಿನ್ನಾಭರಣ ದೋಚುತ್ತಿದ್ದವರ ಹೆಡೆಮುರಿಗೆ ಕಟ್ಟಿದ್ದು ಇನ್ನಾದರೂ ಇಂತಹ ವಂಚಕರ ಬಳಿ ಎಚ್ಚರದಿಂದಿರುವುದು ಒಳಿತು.
ವರದಿ: ನವೀನ್ ಟಿವಿ 9 ದೇವನಹಳ್ಳಿ