ರಾಮನಗರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ನಿನ್ನೆ ರಾತ್ರಿ 10 ಗಂಟೆಯಿಂದ ಶುರುವಾದ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಇರಲಿದೆ. ಈ ನಡುವೆ ಕಾಂಗ್ರೆಸ್ ಮುಖಂಡರು ನಾಳೆಯಿಂದ ಮೇಕೆದಾಟು ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ನಾಳೆಯಿಂದ ಮೇಕೆದಾಟು ಪಾದಯಾತ್ರೆ ಆರಂಭಿಸುತ್ತಿರುವ ಹಿನ್ನೆಲೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಮನಗರ ಜಿಲ್ಲೆಯ ಕನಕಪುರದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಕುಟುಂಬಸ್ಥರ ಜೊತೆ ತೆರಳಿ ಡಿಕೆ ಶಿವಕುಮಾರ್ ಮನೆದೇವರು ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಪಾದಯಾತ್ರೆಗೂ ಮುನ್ನ ದೇವರ ದರ್ಶನ ಪಡೆಯುತ್ತಿದ್ದೇನೆ. ಜನರ ಅಭಿವೃದ್ಧಿ, ಜನರಿಗಾಗಿ ಪಾದಯಾತ್ರೆ ಮಾಡುತ್ತಿದ್ದೇನೆ. ಎಲ್ಲಿ ಶ್ರಮ ಇರುತ್ತೋ ಅಲ್ಲಿ ಫಲ ಇರುತ್ತೆ ಅಂತ ಹೇಳಿದರು.
ಪಾದಯಾತ್ರೆ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ನಮ್ಮ ಪಾದಯಾತ್ರೆ ತಡೆಗಟ್ಟಲು ಮಾಡಿರುವ ಷಡ್ಯಂತ್ರ ಇದು. ಏನೇ ಆದರೂ ನಾವು ಪಾದಯಾತ್ರೆಯನ್ನು ಮಾಡುತ್ತೇವೆ. ನಾನು ಕೂಡ ರಿಯಾಲಿಟಿ ಚೆಕ್ ಮಾಡಿದ್ದೇನೆ. ರಾಮನಗರದಲ್ಲಿ ಯಾರು ಐಸಿಯುನಲ್ಲಿದ್ದಾರೆ ತೋರಿಸಲಿ. ಬದುಕಿರುವ ಬಡವರನ್ನು ಇವರು ಸಾಯಿಸುತ್ತಿದ್ದಾರೆ ಅಷ್ಟೇ. ನಾನು, ಸಿದ್ದರಾಮಯ್ಯ ಪಾದಯಾತ್ರೆಯನ್ನು ಮಾಡುತ್ತೇವೆ. ನಮ್ಮ ಹಿಂದೆ ಕೆಲವು ಶಾಸಕರು ಸಹ ಬರುತ್ತಾರೆ. ಇಂದು ಸಂಜೆ ಹಿರಿಯ ನಾಯಕರ ಜತೆ ಚರ್ಚಿಸಿ ನಾಳಿನ ಪಾದಯಾತ್ರೆಗೆ ರೂಪರೇಷೆಯನ್ನು ಮಾಡುತ್ತೇವೆ ಅಂತ ತಿಳಿಸಿದರು.
ಇದನ್ನೂ ಓದಿ
ಕೊವಿಡ್ ಬಗ್ಗೆ ಡಿಕೆ ಶಿವಕುಮಾರ್ಗೆ ಮಾಹಿತಿಯ ಕೊರತೆ ಇದೆ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್
Published On - 11:30 am, Sat, 8 January 22