ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಪಾದಯಾತ್ರೆ ದುರದೃಷ್ಟಕರ. ಸರ್ಕಾರದ ಕಾನೂನು ಪಾಲನೆ ಮಾಡದ ಪಕ್ಷಕ್ಕೆ ವಿರೋಧ ಪಕ್ಷ ಅಂತ ಕರೆಯಕ್ಕಾಗುತ್ತಾ? ಮುಂದೊಂದು ದಿನ ಇವರೇ ಆಡಳಿತ ಮಾಡಿದಾಗ, ವಿಪಕ್ಷಗಳು ಛೀಮಾರಿ ಹಾಕಿದಾಗ ಇವರಿಗೆ ಹೇಗೆ ಅನಿಸುತ್ತದೆ? ಇದರ ಕನಿಷ್ಟ ತಿಳುವಳಿಕೆ ಅವರಿಗೆ ಇರಬೇಕಿತ್ತು. ಕಾಂಗ್ರೆಸ್ನವರು ಕುದುರೆ ರೇಸ್ ಆದರೂ ಮಾಡಲಿ, ಮ್ಯಾರಥಾನ್ ಆದರೂ ಮಾಡಲಿ. ಈಗಾಗಲೇ ಅವರು ಜಟಕಾ ಗಾಡಿ, ಎತ್ತಿನ ಗಾಡಿ, ಸೈಕಲ್ನಲ್ಲಿ ಹೋಗಿದ್ದಾರೆ. ಈಗ ರೈಲಲ್ಲಾದರೂ ಹೋಗಲಿ, ಬಸ್ನಲ್ಲಾದರೂ ಹೋಗಲಿ, ಟ್ರೆಕ್ಕಿಂಗ್ ಮಾಡಲಿ. ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು. ಮಾಡುವುದನ್ನು ಮಾಡಲಿ, ಸಮಯ ನೋಡಿ ಮಾಡಲಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.
ಸಚಿವ ಆರ್.ಅಶೋಕ್‌ಗೂ ನನಗೂ ಪ್ರಾಥಮಿಕ ಸಂಪರ್ಕ ಇಲ್ಲ: ಡಾ.ಕೆ.ಸುಧಾಕರ್
ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಕೊವಿಡ್ ಪಾಸಿಟಿವ್ ಬಂದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಸಚಿವ ಆರ್.ಅಶೋಕ್‌ಗೂ ನನಗೂ ಪ್ರಾಥಮಿಕ ಸಂಪರ್ಕ ಇಲ್ಲ. ಅವರನ್ನು ಭೇಟಿಯಾಗಿ ಸುಮಾರು 10 ದಿನಗಳಾಗಿದೆ. ತಜ್ಞರ ಸಭೆಯಲ್ಲಿ ನಾವು ಮಾಸ್ಕ್ ಧರಿಸಿ ಭಾಗಿಯಾಗಿದ್ದೆವು. 2 ದಿನದ ಹಿಂದೆ ನಾನು ಮತ್ತು ಸಿಎಂ ಬೊಮ್ಮಾಯಿ ಟೆಸ್ಟ್ ಮಾಡಿಸಿದ್ದೇವೆ. ಕೊವಿಡ್ ಟೆಸ್ಟ್ ವರದಿಯಲ್ಲಿ ನೆಗೆಟಿವ್ ಬಂದಿದೆ. ಈವರೆಗೂ ಸುಮಾರು 50 ರಿಂದ 60 ಬಾರಿ ಟೆಸ್ಟ್ ಮಾಡಿಸಿದ್ದೇನೆ. ನನಗೆ ಈವರೆಗೂ ಪಾಸಿಟಿವ್ ಬಂದಿಲ್ಲವೆಂದು ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.