ನೆಲಮಂಗಲ: 200 ವರ್ಷಕ್ಕೂ ಹಳೆಯ ಬೃಹತ್ ಅರಳಿಮರ ಧರೆಗುರುಳಿದೆ. ಬೆಳಿಗ್ಗೆ 7:20ರ ಸುಮಾರಿಗೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಲ್ಲಸಂದ್ರ ಗ್ರಾಮದಲ್ಲಿರುವ ಅರಳಿಮರ ಧರೆಗುರುಳಿದ್ದು ಅದೃಷ್ಟವಶಾತ್ ಯಾವುದೇ ರೀತಿಯ ಹಾನಿಯಾಗಿಲ್ಲ. ಮಲ್ಲಸಂದ್ರದ ಅರಳಿಮರದ ಕಟ್ಟೆಯನ್ನ ಹಿಂದೆ ಗುರುತಿಗಾಗಿ ಹೇಳುತ್ತಿದ್ರು. ಅಲ್ಲದೆ ಸಾಕಷ್ಟು ಮದುವೆ, ಜಮೀನು ವ್ಯಾಪಾರ, ಯಾವುದೇ ಮಾತುಕತೆಗಳು ಕೂಡ ಇದೇ ಅರಳಿ ಮರದ ಕೆಳಗೆ ನಡೆಯುತ್ತಿದ್ದ ಕಾರಣ ಈ ಜನರಿಗೆ ಈ ಮರದ ಮೇಲೆ ಅತಿಯಾದ ನಂಟಿತ್ತು.
ಈ ಅರಳಿ ಮರ ದೊಡ್ಡ ಅರಸಪ್ಪ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಇತ್ತು. ನಾಗರಪಂಚಾಮಿ ದಿನ ಹತ್ತಾರು ಹಳ್ಳಿಯ ಗ್ರಾಮಸ್ಥರು ಬಂದು ಪೂಜೆ ಸಲ್ಲಿಸಿ ತಾವು ಮನೆಯಲ್ಲಿ ತಯಾರಿಸಿ ತಂದಿದ್ದ ಪ್ರಸಾದಗಳನ್ನ ಹಂಚುತ್ತಿದ್ದರು. ಚಿಕ್ಕಮಕ್ಕಳು ಈ ಮರದ ಕೆಳಗೆ ಆಟ ಆಡಿ ನಲಿಯುತ್ತಿದ್ರು. ಬೆಂಗಳೂರಿನ ಏಕೈಕ ಜೆಡಿಎಸ್ ಶಾಸಕರಾಗಿರುವ ಅರ್.ಮಂಜುನಾಥ್ ಬಿಬಿಎಂಪಿ ಅನುದಾನದಲ್ಲಿ ಅರಳಿಕಟ್ಟೆ ಅಭಿವೃದ್ಧಿ ಮಾಡಿಸಿದ್ದರು. ಅರಳಿ ಕಟ್ಟೆಯಲ್ಲಿ ನಾಗರಕಲ್ಲು ಪ್ರತಿಷ್ಠಾಪಿಸಲಾಗಿದೆ. ಈಗಲೂ ಗ್ರಾಮದ ಅನೇಕರು ಪೂಜೆ ಸಲ್ಲಿಸಿ ಅರಳಿಮರದ ಬುಡಕ್ಕೆ ಯಥೇಚ್ಛವಾಗಿ ಹಾಲುಸುರಿದ ಪರಿಣಾಮವೂ ಏನೂ ಮರದ ಬೇರು ನಶಿಸಿ ಬುಡದ ಸಮೇತವಾಗಿ ಮುರಿದು ಬಿದ್ದಿದೆ ಅಂತ ಕೆಲವು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಮರ 270ವರ್ಷಕ್ಕೂ ಹೆಚ್ಚು ಹಳೆಯ ಅರಳಿಮರವಾಗಿದ್ದು ಇವತ್ತು ಬೆಳಿಗ್ಗೆ 7:20ರ ಸುಮಾರಿಗೆ ಬುಡ ಸಮೇತವಾಗಿ ಧರೆಗುರುಳಿದೆ. ಮುರಿದು ಬಿದ್ದ ಮರವನ್ನ ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿ ತೆರವು ಕಾರ್ಯಚರಣೆ ನಡೆಸಿದ್ದಾರೆ. ಮರದ ಕೆಳಗೆ ಕೂತು ಕಾಲ ಕಳೆಯುತ್ತಿದ್ದ ದಿನಗಳ ನೆನಪು ಮಾತ್ರ ಶಾಶ್ವತ.
ಆಮ್ಲಜನಕದ ಆಗರ ಈ ಅರಳಿ ಮರ
‘ಅರಳಿ ಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ಮರಗಳು ಕೇವಲ ಸೂರ್ಯನ ಬೆಳಕಿನಲ್ಲಿ ಮಾತ್ರ ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಸಿದರೆ, ಅರಳಿ ಮರ ಚಂದ್ರನ ಬೆಳಕಿನಲ್ಲೂ ಈ ಕ್ರಿಯೆಯನ್ನು ನಡೆಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಇದು ಸಸ್ಯಗಳಲ್ಲೇ ಪ್ರಾಮುಖ್ಯವಾದ ಪ್ರಭೇದ. ನಗರದ ವಾಯುಮಾಲಿನ್ಯ ನಿಯಂತ್ರಣದಲ್ಲಿ ಈ ಮರಗಳ ಕೊಡುಗೆ ಮಹತ್ವದ್ದು ಎಂದು ಸಸ್ಯ ವೈದ್ಯ ವಿಜಯ್ ನಿಶಾಂತ್ ತಿಳಿಸಿದ್ದಾರೆ.
ಹಿಂದೂ ಜನರು ಇದನ್ನು ಪವಿತ್ರವಾದ ಮರವೆಂದು ಪೂಜೆ ಮಾಡುತ್ತಾರೆ. ಇದರ ಕಟ್ಟಿಗೆಯನ್ನು ಹೋಮ, ಹವನಾದಿ ಧಾರ್ಮಿಕ ವ್ರತಾಚರಣೆಗಳಲ್ಲಿ ಉಪಯೋಗಿಸುತ್ತಾರೆ. ಇದರ ತೊಗಟೆಯ ಕಷಾಯವನ್ನು ಕಜ್ಜಿ ಹುಣ್ಣುಗಳಿಗೆ ಔಷಧವಾಗಿ ಬಳಸುವುದುಂಟು. ಅರಳಿಮರಗಳನ್ನು ತೋಟಗಳಲ್ಲೂ ದೇವಸ್ಥಾನಗಳ ಪರಿಸರದಲ್ಲೂ ಹೆದ್ದಾರಿಯ ಇಬ್ಬದಿಗಳಲ್ಲೂ ನೆರಳಿಗಾಗಿ ಬೆಳೆಸುತ್ತಾರೆ. ಕೆಲವು ಜಾತಿಯ ಅರಗಿನ ಹುಳುಗಳನ್ನು ಬೆಳೆಸುವುದಕ್ಕೂ ಇವುಗಳ ಉಪಯೋಗವಿದೆ. ಎಲೆಯನ್ನು ದನಕರು, ಆಡು, ಕುರಿಗಳಿಗೆ ಮೇವಾಗಿ ಬಳಸುತ್ತಾರೆ. ಇವುಗಳ ಹಾಲಿನಲ್ಲಿರುವ ಜಿಗುಟಾದ ದ್ರವದಿಂದ ರಬ್ಬರನ್ನು ಮಾಡಬಹುದು. ಕೆಲವು ಜಾತಿಯ ಮರಗಳ ಎಲೆ, ಬೇರು ಮತ್ತು ತೊಗಟೆಯ ಕಷಾಯವನ್ನು ಭೇದಿ, ವಾಂತಿ, ಹಲ್ಲುನೋವು, ದಮ್ಮು ಇತ್ಯಾದಿ ರೋಗಗಳಿಗೆ ಉಪಯೋಗಿಸುತ್ತಾರೆ.
ವರದಿ: ಮೂರ್ತಿ, ಟಿವಿ9
ಇದನ್ನೂ ಓದಿ: ಸಾಲುಮರದ ತಿಮ್ಮಕ್ಕಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್