ನೆಲಮಂಗಲ, ಜುಲೈ 24: ಬೇರೆಯವರ ಜಮೀನು(Property Fraud) ತನ್ನದೆಂದು ತೋರಿಸಿ ಅಡ್ವಾನ್ಸ್ ಹಣ ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala) ತಾಲೂಕಿನಲ್ಲಿ ನಡೆದಿದೆ. RTGS ಮುಖಾಂತರ 50ಲಕ್ಷ ಹಣ ಪಡೆದು ವಂಚನೆ ಮಾಡಲಾಗಿದೆ. ಬಜ್ಜಣ್ಣ ಅವರಿಗೆ ಸೇರಿದ ಬೆಣಚನಹಳ್ಳಿಯ ಸರ್ವೆ ನಂ 73/5,73/7,73/11, ಸೇರಿದ ಒಂದೂವರೆ ಎಕರೆ ಜಾಗವನ್ನು ತೋರಿಸಿ ಲಕ್ಷ್ಮಿಕಾಂತ್, ಪ್ರಮೋದ್ ಎಂಬ ಇಬ್ಬರು ಹನುಮಂತರಾಜುಗೆ ವಂಚನೆ ಮಾಡಿದ್ದಾರೆ.
ಆರೋಪಿ ಲಕ್ಷ್ಮಿಕಾಂತ್ ತಾನು ಪೊಲೀಸ್ IG ಕಚೇರಿಯಲ್ಲಿ ಕೆಲಸ ಮಾಡುವುದಾಗಿ ನಂಬಿಸಿ ಹನುಮಂತರಾಜು ಅವರ ಬಳಿ 50 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾಬೆ. ಸದ್ಯ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ IPC420, 419, 408, 468, ಜೊತೆಗೆ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ಲಕ್ಷಾಂತರ ಬೆಲೆ ಬಾಳುವ ಕುರಿ, ಮೇಕೆ ಕಳ್ಳತನವಾಗಿದೆ. ರೈತ ರವಿಕುಮಾರ್ ಅವರಿಗೆ ಸೇರಿದ ಡಾರ್ಪರ್, ಬನ್ನೂರು ತಳಿಯ ಕುರಿ, ಮೇಕೆಗಳು ಕಳ್ಳತನವಾಗಿವೆ. ಜೀವನಾಧಾರವಾಗಿದ್ದ ಕುರಿ, ಮೇಕೆ ಕಳದುಕೊಂಡು ರೈತ ಕಂಗಾಲಾಗಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Udupi News: ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು, ನೀರಿಗೆ ಬೀಳುತ್ತಿರುವ ದೃಶ್ಯ ಗೆಳೆಯನ ಮೊಬೈಲ್ನಲ್ಲಿ ಸೆರೆ
ಹುಣಸೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275 ಬಿಳಿಕೆರೆ ಬೈಪಾಸ್ ಬಳಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಣೆ ಮಾಡುವವರನ್ನು ವಶಕ್ಕೆ ಪಡೆದಿದ್ದಾರೆ. 15 ಎಮ್ಮೆ, ಕರುಗಳನ್ನು ವಶಕ್ಕೆ ಪಡೆದಿದ್ದು ಇಬ್ಬರನ್ನು ಬಂಧಿಸಲಾಗಿದೆ. ಚಾಲಕ ಪರಾರಿಯಾಗಿದ್ದಾನೆ. ಪಿರಿಯಾಪಟ್ಟಣ ತಾಲೂಕು ಹಲಗನಹಳ್ಳಿಯ ಅಲೀಮ್, ಮನ್ಸೂರ್ ಬಂಧಿತ ಆರೋಪಿಗಳು. ಜಾನುವಾರುಗಳು ಪಿಂಜಾರಾಪೋಲ್‌ಗೆ ರವಾನಿಸಲಾಗುತ್ತಿತ್ತು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲೆ ಹುಣಸೂರಿನ ನರಸಿಂಹ ಸ್ವಾಮಿ ತಿಟ್ಟಿನ ಬಳಿ ಎರಡು ದಿನದ ಹಿಂದೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಚಾರಿ ವೃದ್ದ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಈಗ ಅಪರಿಚಿತ ವ್ಯಕ್ತಿ ಗುರುತು ಪತ್ತೆ ಮಾಡಿದ್ದಾರೆ. ಹೆಚ್ಡಿ ಕೋಟೆ ನಿವಾಸಿ ಪುಟ್ಟಸ್ವಾಮಿ(65) ಮೃತ ದುರ್ದೈವಿ.
ಘಟನೆ ನಡೆದ ದಿನ ಮೃತರ ಗುರುತು ಪತ್ತೆಯಾಗಿರಲಿಲ್ಲ. ಮೃತರ ಬಳಿ ಹೆಚ್ಡಿ ಕೋಟೆಯಿಂದ ಹುಣಸೂರಿಗೆ ಬಂದ ಬಸ್ ಟಿಕೆಟ್ ಇತ್ತು. ಮೃತರ ಗುರುತು ಪತ್ತೆ ಹಚ್ಚಲು ಸಹಾಯ ಮಾಡುವಂತೆ ಪೊಲೀಸರು ಮನವಿ ಮಾಡಿದ್ದರು. ತಮ್ಮನ ಮಗಳ ಮನೆಗೆ ಬರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದ್ದು ಗಾಯಾಳು ಪುಟ್ಟಸ್ವಾಮಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪುಟ್ಟಸ್ವಾಮಿ ಮೃತಪಟ್ಟಿದ್ದರು. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ