
ಬೆಂಗಳೂರು, ಅಕ್ಟೋಬರ್ 29: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ನಿಂತು ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ಹಾವುಗಳ ಕಾಟವೂ ಹೆಚ್ಚಾಗಿದೆ. ನಗರದ ಹಲವು ಬಡಾವಣೆಗಳಲ್ಲಿ ಮನೆಗಳ ಒಳಗೆ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಶೂ ಸ್ಟ್ಯಾಂಡ್, ಬೈಕ್, ಬಾತ್ರೂಮ್ ಮತ್ತು ವಾಷಿಂಗ್ ಮಷಿನ್ಗಳ ಬಳಿ ಹಾವುಗಳು ಪ್ರತ್ಯಕ್ಷವಾಗುತ್ತಿವೆ. ಮತ್ತೊಂದೆಡೆ, ರಾಜ್ಯದಲ್ಲಿ ಹಾವು ಕಡಿತ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗಿದ್ದು, ಕಳೆದ ಒಂದು ವಾರದಲ್ಲೇ 702 ಮಂದಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ. ಈ ಅವಧಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ಕಳೆದ ವಾರ ಮಳೆಯ ಕಾರಣದಿಂದ ಬೆಂಗಳೂರಿನಲ್ಲಿ ವಾತಾವರಣ ತಂಪಾಗಿತ್ತು. ಆದರೆ, ಕಳೆದ ಮೂರು ದಿನಗಳಿಂದ ಬಿಸಿಲು ಹೆಚ್ಚಾಗಿದ್ದು, ಹಾವುಗಳು ಹೊರಗೆ ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ. ಮನೆಗಳ ಶೂ ಸ್ಟ್ಯಾಂಡ್, ಬೈಕ್ಗಳ ಬಳಿ, ಬಾತ್ರೂಮ್ ಹಾಗೂ ವಾಷಿಂಗ್ ಮಷಿನ್ಗಳ ಹತ್ತಿರ ಹಾವುಗಳು ಕಾಣಿಸಿಕೊಳ್ಳುತ್ತಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಮನೆಗಳಿಗೆ ಹಾವುಗಳು ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸಹಾಯವಾಣಿ, 100 ಹಾಗೂ ಅಗ್ನಿಶಾಮಕ ದಳದ ಸಹಾಯವಾಣಿಗಳಿಗೆ ಕರೆಗಳು ಬರುತ್ತಿವೆ. ಕಳೆದ ಮೂರು ದಿನಗಳಲ್ಲೇ 200ಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ತಿಳಿದುಬಂದಿದೆ. ನಾಗರಹಾವು, ಕೊಳಕು ಮಂಡಲ, ಕೆರೆ ಹಾವು ಹಾಗೂ ಕಟ್ಟು ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.
ವಿದ್ಯಾರಣ್ಯಪುರ, ನಾಗರಭಾವಿ, ಆರ್.ಆರ್. ನಗರ, ಯಲಹಂಕ, ಜೆ.ಪಿ. ನಗರ ಮತ್ತು ಸರ್ಜಾಪುರ ಸೇರಿದಂತೆ ನಗರದಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಪ್ರದೇಶಗಳಲ್ಲಿ ಹಾವುಗಳ ಆವಾಸಸ್ಥಾನಗಳು ನಾಶವಾಗುತ್ತಿವೆ. ಕಾಂಕ್ರೀಟ್ ಕಟ್ಟಡಗಳು ಮತ್ತು ಅಭಿವೃದ್ಧಿ ಕಾರ್ಯಗಳಿಂದ ಅವುಗಳ ವಾಸಸ್ಥಾನಕ್ಕೆ ಧಕ್ಕೆಯಾಗಿದ್ದು, ಹಾವುಗಳು ಮನೆಗಳತ್ತ ಬರುತ್ತಿವೆ.
ಮನೆಗಳಲ್ಲಿ ಹಾವುಗಳು ಕಾಣಿಸಿಕೊಂಡ ಕೂಡಲೇ ಉರಗ ಸಂರಕ್ಷಕರು ಸ್ಥಳಕ್ಕೆ ತೆರಳಿ ಅವುಗಳನ್ನು ಸುರಕ್ಷಿತವಾಗಿ ರಕ್ಷಿಸುತ್ತಿದ್ದಾರೆ. ಆದರೆ, ನಿರಂತರವಾಗಿ ಬರುತ್ತಿರುವ ಕರೆಗಳಿಂದ ಹಾವು ಸಂರಕ್ಷಕರಿಗೂ ಹೆಚ್ಚಿನ ಒತ್ತಡ ಉಂಟಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಉದ್ದೇಶದಿಂದ ಹಾವುಗಳನ್ನು ಹಿಡಿಯಲು ಹೋಗಿ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಯೂ ಇರುವುದರಿಂದ, ಸಾರ್ವಜನಿಕರು ಇಂತಹ ಸಾಹಸಗಳಿಗೆ ಮುಂದಾಗಬಾರದು ಎಂದು ಉರಗ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮನೆಗಳಿಗೆ ಹಾವುಗಳು ನುಗ್ಗುತ್ತಿರುವ ಆತಂಕದ ನಡುವೆಯೇ ರಾಜ್ಯದಲ್ಲಿ ಹಾವು ಕಡಿತ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ 702 ಮಂದಿ ಹಾವು ಕಡಿತಕ್ಕೆ ಒಳಗಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಜನವರಿಯಿಂದ ಈವರೆಗೆ ರಾಜ್ಯದಲ್ಲಿ ಒಟ್ಟು 17,608 ಮಂದಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ. ಈ ಪೈಕಿ 205 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ತಲೆದಿಂಬಿನಡಿಯೇ ಇತ್ತು ಬೃಹತ್ ಗಾತ್ರದ ನಾಗರ! ಗೊತ್ತೇ ಇಲ್ಲದೆ ರಾತ್ರಿಯಿಡೀ ಹಾವಿನ ಜತೆ ಕಳೆದಿದ್ದ ಅಣ್ಣ-ತಂಗಿ
ಹಾವು ಕಡಿತ ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಜಿಲ್ಲಾಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ಆಂಟಿ ಸ್ನೇಕ್ ವೆನಮ್ ಔಷಧವನ್ನು ದಾಸ್ತಾನು ಇರಿಸುವಂತೆ ಸೂಚಿಸಲಾಗಿದೆ. ಹಾವು ಕಡಿತಕ್ಕೆ ಒಳಗಾದವರಿಗೆ ತ್ವರಿತವಾಗಿ ಔಷಧ ಮತ್ತು ಚಿಕಿತ್ಸೆ ಒದಗಿಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.
ಮನೆಗಳಲ್ಲಿ ಹಾವು ಕಾಣಿಸಿಕೊಂಡರೆ ಅದನ್ನು ಹೊಡೆಯಲು ಅಥವಾ ಸ್ವತಃ ಹಿಡಿಯಲು ಪ್ರಯತ್ನಿಸಬಾರದು. ಬದಲಿಗೆ ಸಂಬಂಧಪಟ್ಟ ಸಹಾಯವಾಣಿ ಅಥವಾ ಉರಗ ಸಂರಕ್ಷಕರನ್ನು ಸಂಪರ್ಕಿಸಿ, ಸುರಕ್ಷಿತವಾಗಿ ಹಾವನ್ನು ರಕ್ಷಿಸುವ ವ್ಯವಸ್ಥೆ ಮಾಡಬೇಕು. ಹಾವು ಕಡಿತಕ್ಕೆ ಒಳಗಾದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ