6 ಟ್ರಂಕ್​ಗಳ ಮೂಲಕ ಬೆಂಗಳೂರಿನಿಂದ ತಮಿಳುನಾಡಿಗೆ ಮರಳಲಿವೆ ದಿ.ಜಯಲಲಿತಾರ ಆಭರಣ, ವಸ್ತುಗಳು

| Updated By: ಆಯೇಷಾ ಬಾನು

Updated on: Feb 20, 2024 | 7:40 AM

ದಿವಂಗತ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಪ್ತಿಯಾಗಿದ್ದ ಜಯಲಲಿತಾರ ಒಡವೆ ಹಿಂತಿರುಗಿಸಲು ದಿನಾಂಕ‌ ನಿಗದಿಯಾಗಿದೆ. ಒಡವೆ ಮತ್ತಿತರ ಜಯಲಲಿತಾರ ವಸ್ತುಗಳನ್ನು ಒಯ್ಯಲು 6 ಟ್ರಂಕ್ ಗಳನ್ನು ತರಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ಬೆಂಗಳೂರಿನ ವಿಶೇಷ ಕೋರ್ಟ್ ಸೂಚನೆ ನೀಡಿದೆ.

6 ಟ್ರಂಕ್​ಗಳ ಮೂಲಕ ಬೆಂಗಳೂರಿನಿಂದ ತಮಿಳುನಾಡಿಗೆ ಮರಳಲಿವೆ ದಿ.ಜಯಲಲಿತಾರ ಆಭರಣ, ವಸ್ತುಗಳು
6 ಟ್ರಂಕ್ ಗಳಲ್ಲಿ ತಮಿಳುನಾಡಿಗೆ ಮರಳಲಿದೆ ಜಯಲಲಿತಾರ ಆಭರಣ, ವಸ್ತುಗಳು
Follow us on

ಬೆಂಗಳೂರು, ಫೆ.20: ಅಂತೂ ಇಂತೂ ಬೆಂಗಳೂರಿನ ಕೋರ್ಟ್ ಕಸ್ಟಡಿಯಲ್ಲಿದ್ದ ದಿವಂಗತ ಜಯಲಲಿತಾರ (J. Jayalalithaa) ಆಭರಣಗಳು ತಮಿಳುನಾಡಿಗೆ (Tamil Nadu) ಮರಳಲು ಮುಹೂರ್ತ ನಿಗದಿಯಾಗಿದೆ. ಬೆಂಗಳೂರಿನ ವಿಶೇಷ ಕೋರ್ಟ್ 6 ಟ್ರಂಕ್ ಗಳೊಂದಿಗೆ ಬೆಂಗಳೂರಿಗೆ ಬರುವಂತೆ ತಮಿಳುನಾಡಿನ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಷ್ಟಕ್ಕೂ ತಮಿಳುನಾಡಿಗೆ ಮರಳಲಿರುವ ಜಯಲಲಿತಾರ ವಸ್ತುಗಳು ಯಾವುವು? ಕೋರ್ಟ್ ಹೇಳಿರೋದೇನು? ಡಿಟೈಲ್ಸ್ ಇಲ್ಲಿದೆ.

ಕರ್ನಾಟಕದ ಮೇಲುಕೋಟೆಯಲ್ಲಿ ಜನಿಸಿದ್ದ ತಮಿಳುನಾಡು ಸಿಎಂ ಜಯಲಲಿತಾ ಅವರು ಆದಾಯ ಮೀರಿದ‌ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಜೈಲಿನಲ್ಲಿದ್ರು. ವಿಚಾರಣೆ ಬೆಂಗಳೂರಿನಲ್ಲಿ ನಡೆದಿದ್ದರಿಂದ ಜಯಲಲಿತಾರಿಂದ ವಶಕ್ಕೆ ಪಡೆದಿದ್ದ ಆಭರಣ, ಸೀರೆ ಮತ್ತಿತರ ವಸ್ತುಗಳೂ ಬೆಂಗಳೂರಿನ ಕೋರ್ಟ್ ಸುಪರ್ದಿಯಲ್ಲೇ ಇದ್ದವು.‌ ಇದೀಗ ಈ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಕೋರ್ಟ್ ನಿರ್ಧರಿಸಿದೆ. ದಿವಂಗತ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಪ್ತಿಯಾಗಿದ್ದ ಜಯಲಲಿತಾರ ಒಡವೆ ಹಿಂತಿರುಗಿಸಲು ದಿನಾಂಕ‌ ನಿಗದಿಪಡಿಸಿರುವ ಕೋರ್ಟ್ ಮಾರ್ಚ್ 6 ಮತ್ತು 7 ರಂದು ತಮಿಳುನಾಡು ಸರ್ಕಾರಕ್ಕೆ‌ ಒಡವೆ ಹಸ್ತಾಂತರ ಮಾಡಲು ತೀರ್ಮಾನಿಸಿದೆ. ಒಡವೆ ಸ್ವೀಕರಿಸಲು ತಮಿಳುನಾಡು ಸರ್ಕಾರದಿಂದ ಇಬ್ಬರು ಅಧಿಕಾರಿಗಳ ನೇಮಕವಾಗಿದೆ. ತಮಿಳುನಾಡು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಐಜಿಪಿ ವಿಜಿಲೆನ್ಸ್ ಹಾಜರಿರಬೇಕು ಎಂದು ವಿಶೇಷ ನ್ಯಾಯಾಧೀಶ ಮೋಹನ್ ಸೂಚನೆ ನೀಡಿದ್ದಾರೆ.‌ ಒಡವೆ ಮತ್ತಿತರ ಜಯಲಲಿತಾರ ವಸ್ತುಗಳನ್ನು ಒಯ್ಯಲು 6 ಟ್ರಂಕ್ ಗಳನ್ನು ತರಬೇಕು ವಿಡಿಯೋಗ್ರಾಫರ್, ಫೋಟೋಗ್ರಾಫರ್ ಕರೆತರಲು ಸೂಚನೆ ನೀಡಿದೆ. ಒಡವೆ ಹಸ್ತಾಂತರದ‌‌ ಎರಡೂ ದಿನಗಳು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಭದ್ರತೆ ಒದಗಿಸಲು ಪೊಲೀಸರಿಗೆ ಸೂಚನೆ ನೀಡಿದೆ.

ಇದನ್ನೂ ಓದಿ: Jayalalithaa: 1997ರಲ್ಲಿ ವಶಪಡಿಸಿಕೊಂಡ ಜಯಲಲಿತಾಗೆ ಸೇರಿದ 11,344 ಸೀರೆ, 91 ಕೈಗಡಿಯಾರ, 750 ಅಲಂಕೃತ ಚಪ್ಪಲಿಗಳನ್ನು ಹರಾಜು ಹಾಕುವಂತೆ ಮನವಿ

6 ಟ್ರಂಕ್ ಗಳಲ್ಲಿ ಜಯಲಲಿತಾರ ವಸ್ತುಗಳು

7040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜೆರೇಟರ್, 10 ಟಿ.ವಿ. ಸೆಟ್ , 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್​ಗಳನ್ನು ತೆಗೆದುಕೊಂಡು ಹೋಗಲು 6 ಟ್ರಂಕ್​ಗಳು ತಮಿಳುನಾಡಿನಿಂದ ಬೆಂಗಳೂರಿಗೆ ಬರಲಿವೆ.

ಹೀಗೆ 6 ದೊಡ್ಡ ಟ್ರಂಕ್ ಗಳಲ್ಲಿ ಜಯಲಲಿತಾರ ಅಮೂಲ್ಯ ವಸ್ತುಗಳನ್ನು ಬೆಂಗಳೂರಿನ ಕೋರ್ಟ್ ತಮಿಳುನಾಡಿಗೆ ಮರಳಿಸಲಿದೆ. ವ್ಯಾಜ್ಯ ಶುಲ್ಕವಾಗಿ ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ 5 ಕೋಟಿ ರೂಪಾಯಿ ಪಾವತಿಸಬೇಕೆಂದು ಕೋರ್ಟ್ ಸೂಚನೆ ನೀಡಿದೆ. ಒಟ್ಟಿನಲ್ಲಿ ದಶಕಗಳ ಕಾಲ ಬೆಂಗಳೂರಿನ ಕೋರ್ಟ್ ಸುಪರ್ದಿನಲ್ಲಿದ್ದ ಜಯಲಲಿತಾರ ದುಬಾರಿ ಒಡವೆ, ವಸ್ತುಗಳು ತಮಿಳುನಾಡು ಸರ್ಕಾರ ಸೇರಲಿದ್ದು,‌ ಒಡವೆಗಳ ವಿಲೇವಾರಿಯ ಬಗ್ಗೆ ಅಲ್ಲಿನ ಸರ್ಕಾರವೇ ತೀರ್ಮಾನಿಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ