ಬೆಂಗಳೂರು ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣ: ಮತ್ತೋರ್ವ ಅರೆಸ್ಟ್

Bangalore news: ಮತದಾರರ ಚೀಟಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು, ಇದೀಗ ಮತ್ತೋರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿದ್ದಾರೆ.

ಬೆಂಗಳೂರು ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣ: ಮತ್ತೋರ್ವ ಅರೆಸ್ಟ್
ಬೆಂಗಳೂರು ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ಮತ್ತೋರ್ವ ಅರೆಸ್ಟ್
TV9kannada Web Team

| Edited By: Rakesh Nayak Manchi

Nov 22, 2022 | 7:42 PM

ಬೆಂಗಳೂರು: ಮತದಾರರ ಚೀಟಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮ ಪ್ರಕರಣ (Voter ID Scam) ಸಂಬಂಧ ತನಿಖೆ ಚುರುಕುಗೊಂಡಿದ್ದು, ಅಕ್ರಮದಲ್ಲಿ ಭಾಗಿಯಾದವರ ಬಂಧನಕ್ಕೂ ಬಲೆ ಬೀಸಲಾಗಿದೆ. ಅದರಂತೆ ಮತ್ತೋರ್ವ ಆರೋಪಿ ಲೋಕೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಸಮೀಕ್ಷೆಗೆ ಆರ್‌ಒಗಳಿಂದ ಅನುಮತಿ ಪಡೆದಿದ್ದ ಆರೋಪ ಸಂಬಂಧ ದಾಖಲಾದ ಎಫ್​ಐಆರ್​ನಲ್ಲಿ ಲೋಕೇಶ್​​ ಹೆಸರು ಉಲ್ಲೇಖವಾಗಿತ್ತು. ಹೀಗಾಗಿ ಹಲಸೂರು ಗೇಟ್ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ, ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದೇವೆ. ಹಗರಣದ ಬಗ್ಗೆ ಕಾಡುಗೋಡಿ, ಹಲಸೂರು ಗೇಟ್​ ಠಾಣೆಯಲ್ಲಿ FIR ದಾಖಲಾಗಿತ್ತು. 2 ಎಫ್​ಐಆರ್​ನಲ್ಲೂ ಈತನ ಹೆಸರು ಉಲ್ಲೇಖವಾಗಿತ್ತು. ಆರೋಪಿಯನ್ನು ಬಂಧಿಸಿ ಒಂದು ಸುತ್ತಿನ ವಿಚಾರಣೆ ಮಾಡಲಾಗಿದೆ. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ರವಿಕುಮಾರ್​ನ ಆಪ್ತನಾಗಿದ್ದಾನೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದರು.

ವೋಟರ್​ ಐಡಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮ ಪ್ರಕರಣ  (Voter id scam)ಸಂಬಂಧ ಕೇಂದ್ರ ಚುನಾವಣಾ ಆಯೋಗ (Election Commission of India)ದ ಅಧಿಕಾರಿಗಳ ತಂಡ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ಮಾಹಿತಿ ಕಲೆಹಾಕಿಕೊಂಡಿದ್ದಾರೆ. ಇದರ ಬೆನ್ನಲ್ಲೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಭೇಟಿ ನೀಡಿದರು. ಮುಖ್ಯ ಚುನಾವಣಾಧಿಕಾರಿ ಮೀನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಇದ್ದರು. ಚರ್ಚೆ ನಂತರ ಪೊಲೀಸ್ ಆಯುಕ್ತರು ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡಿದೆ ತೆರಳಿದರು.

ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಕಳವು ಪ್ರಕರಣದ ಸಂಬಂಧ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿರುದ್ಧ ಹಲಸೂರುಗೇಟ್‌ ಮತ್ತು ಕಾಡುಗೋಡಿ ಪೊಲೀಸ್‌ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ಮತದಾರರ ಪಟ್ಟಿವಿಶೇಷ ಪರಿಷ್ಕರಣೆ 2023 ಕಾರ್ಯಚಟುವಟಿಕೆಗಳ ಕುರಿತು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಶೈಕ್ಷಣಿಕ ಸಾಂಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಷರತ್ತುಬದ್ಧ ಅನುಮತಿಯನ್ನು ಬಿಬಿಎಂಪಿ ನೀಡಿತ್ತು.

ಈ ಸಂಸ್ಥೆಯ ವಿರುದ್ಧ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ದೂರು ಬಂದಿದ್ದು ಷರತ್ತು ಉಲ್ಲಂಘಿಸಿರುವುದನ್ನು ಪರಿಗಣಿಸಿ ಅನುಮತಿ ಪತ್ರವನ್ನು ರದ್ದುಪಡಿಸಲಾಗಿದೆ. ಜೊತೆಗೆ ಈ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ಹಲಸೂರುಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada