ಬೆಂಗಳೂರು: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ್ತಿಲ್ಲ. ರಾಜ್ಯ ಸರ್ಕಾರದ (Karnataka Government) ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಜಿವಿಕೆ ಕಂಪನಿ (GVK company). ವೇತನ ಹೆಚ್ಚಿಸಿ (salary hike) ಹಣ ಬಿಡುಗಡೆ ಮಾಡಿದರೂ ವೇತನ ಹೆಚ್ಚಳ ಮಾಡದ ಜಿವಿಕೆ ಕಂಪನಿ. ಇದರ ಫಲಶೃತಿಯಾಗಿ ಮತ್ತೊಮ್ಮೆ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ 108 ಆಂಬುಲೆನ್ಸ್ ಸಿಬ್ಬಂದಿ (108 Ambulance staff). ಜೊತೆಗೆ, ಜಿವಿಕೆ ಕಂಪನಿಯನ್ನು ಕೂಡಲೇ ವಜಾ ಮಾಡುವಂತೆಯೂ ಒತ್ತಾಯ ಮಾಡಿದ್ದಾರೆ.
ಏನಾಗಿತ್ತು?:
ಜಿವಿಕೆ ಕಂಪನಿಯು 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಎರಡು ತಿಂಗಳು ಸಂಬಳ ಬಿಡುಗಡೆ ಮಾಡಿರಲಿಲ್ಲ. ಅ ಸಂದರ್ಭದಲ್ಲಿ ನೌಕರರು ಸಾಮೂಹಿಕ ರಜೆ ಹಾಕ್ತೀವಿ ಎಂದು ಎಚ್ಚರಿಕೆ ನೀಡಿದ್ದಿವಿ. ಅಂದು ಆರೋಗ್ಯ ಸಚಿವರು ಮಧ್ಯ ಪ್ರವೇಶ ಮಾಡಿ ವೇತನದಲ್ಲಿ ಆಗಿರುವ ತಾರತಮ್ಯ ಸರಿಪಡಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದರು. ಅದರಂತೆ ಆಯುಕ್ತರು ಅಕ್ಟೋಬರ್ ಏಳನೇ ತಾರೀಕು ಜಿವಿಕೆ ಕಂಪನಿ ಮತ್ತು ನೌಕರರ ಜೊತೆಗೆ ಸಭೆ ನಡೆಸಿದ್ದರು.
ಸುಮಾರು ವರ್ಷಗಳಿಂದ ಜಿವಿಕೆ ಕಂಪನಿ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಮಾಡಿರಲಿಲ್ಲ. ಹಾಗಾಗಿ 45 % ರಷ್ಟು ವೇತನ ಹೆಚ್ಚಳ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದಕ್ಕಾಗಿ ರಾಜ್ಯ ಸರ್ಕಾರ 31 ಕೋಟಿ ರುಪಾಯಿ ಹಣವನ್ನು ಬಿಡುಗಡೆ ಮಾಡಿದ್ದರು. ಆದರೆ ಈಗ ಜಿವಿಕೆ ಕಂಪನಿಯು ಸರ್ಕಾರ ಹೇಳಿದಂತೆ ವೇತನ ಹೆಚ್ಚಳ ಮಾಡಲು ಆಗುವುದಿಲ್ಲ. ಹೈದ್ರಾಬಾದ್ ಹೆಡ್ ಆಫೀಸ್ ನಿಂದ (GVK Foundation in Hyderabad) ನಮಗೆ ವೇತನ ಹೆಚ್ಚಳ ಮಾಡಲು ಅನುಮತಿ ಸಿಕ್ಕಿಲ್ಲ ಎಂದು ಸಬೂಬು ಹೇಳುತ್ತಿದೆ.
ಸಂಬಳ ಹೆಚ್ಚಳ ಮಾಡಲು ಹಣ ಬಿಡುಗಡೆ ಮಾಡಿರುವುದು ಕರ್ನಾಟಕ ಸರ್ಕಾರ!
ಕೂಡಲೇ ರಾಜ್ಯ ಸರ್ಕಾರ ಇಂತಹ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಸೂಚನೆ ನೀಡಿದಂತೆ ವೇತನ ಹೆಚ್ಚಳ ಮಾಡಿಲ್ಲ ಅಂದರೆ 108 ಆಂಬುಲೆನ್ಸ್ ಸಿಬ್ಬಂದಿಗಳು ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ನಾವು ರಾಜ್ಯ ಸರ್ಕಾರದ ವಿರುದ್ಧ ಇಲ್ಲ, ಹಾಗಾಗಿ ಆರೋಗ್ಯ ಸಚಿವರು ಮತ್ತು ಆರೋಗ್ಯ ಇಲಾಖೆಯ ಆಯುಕ್ತರು ಕೂಡಲೇ ಈ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡ್ತೀವಿ ಎಂದು ಸಿಬ್ಬಂದಿ ಅಲವತ್ತುಕೊಂಡಿದ್ದಾರೆ.
13 ವರ್ಷಗಳಿಂದ ನಿರಂತರವಾಗಿ ಸಿಬ್ಬಂದಿಯ ಮೇಲೆ ದಬ್ಬಾಳಿಕೆ ಮಾಡಿಕೊಂಡು ಬಂದಿದೆ ಇದೇ ಜಿವಿಕೆ ಕಂಪನಿ. ಎಲ್ಲದಕ್ಕೂ ಹೈದ್ರಾಬಾದ್ ಹೆಡ್ ಆಫೀಸ್ ನಿಂದ ಅನುಮತಿ ಬೇಕು ಅಂದರೆ ಹೇಗೆ? ಸಂಬಳ ಹೆಚ್ಚಳ ಮಾಡಲು ಹಣ ಬಿಡುಗಡೆ ಮಾಡಿರುವುದು ಕರ್ನಾಟಕ ಸರ್ಕಾರ. ಹಾಗಾಗಿ, ಕೂಡಲೇ ರಾಜ್ಯ ಸರ್ಕಾರ ಈ ಕಂಪನಿಯನ್ನು ವಜಾ ಮಾಡಲಿ. 108 ಸಿಬ್ಬಂದಿ ಮೂರು ತಿಂಗಳು ಉಚಿತವಾಗಿ ಸೇವೆ ನೀಡಲು ತಯಾರಿದ್ದೇವೆ ಎಂದೂ 108 ನೌಕರರ ಸಂಘದ ಉಪಾಧ್ಯಕ್ಷ ಎನ್ ಹೆಚ್ ಪರಮಶಿವ ಅವರು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ.