ಅಗ್ನಿ ದುರಂತದಲ್ಲಿ 13 ಜನ ಸಜೀವದಹನ: ಸ್ಥಳಕ್ಕೆ ಡಿಕೆ ಶಿವಕುಮಾರ್​ ಭೇಟಿ, ಪರಿಹಾರ ನೀಡುವಂತೆ ಬೊಮ್ಮಾಯಿ ಆಗ್ರಹ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 07, 2023 | 11:15 PM

ಲಾರಿಯಲ್ಲಿ ಪಟಾಕಿ ಅನ್​ಲೋಡ್ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಪಟಾಕಿ ಅಂಗಡಿ ಹೊತ್ತಿ ಉರಿದಿದ್ದು, 13 ಜನರು ಸಜೀವದಹನವಾಗಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಶನಿವಾರ ನಡೆದಿದೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್​ 07: ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿ ನಡೆದ ಪಟಾಕಿ ದುರಂತದಲ್ಲಿ 13 ಜನ ಕಾರ್ಮಿಕರು ಸಜೀವದಹನವಾಗಿರುವಂತಹ ಘಟನೆ ಶನಿವಾರ ನಡೆದಿದೆ. ಈ ಕುರಿತಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಟ್ವೀಟ್​ ಮಾಡುವ ಮೂಲಕ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಈ ದುರಂತದ ಸತ್ಯಾಸತ್ಯತೆ ತಿಳಿಯಲು ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ

ದುರಂತ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾಧ್ಯದವರೊಂದಿಗೆ ಮಾತನಾಡಿದ ಅವರು, ದುರಂತ ಕಂಡು ಬಹಳ ದುಃಖ ಆಗುತ್ತಿದೆ. ಅಮಾಯಕ ಯುವಕರು ಸಾವನ್ನಪ್ಪಿದ್ದಾರೆ. 19 ಜನ ಕೆಲಸ ಮಾಡುತ್ತಿದ್ದ ಮಾಹಿತಿ ಇದೆ. ಇನ್ನೂ ಮೃತದೇಹ ಇರುವ ಬಗ್ಗೆ ಅನುಮಾನ ಇದೆ. ಬಹಳ ಡೇಂಜರ್ ಆಗಿದೆ ಎಂದು ಹೇಳಿದ್ದಾರೆ.

ನಾಳೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಸಮಗ್ರ ಮಾಹಿತಿ ಸಂಗ್ರಹಿಸಿ ಸಂಪೂರ್ಣ ಪರಿಶೀಲಿಸಲಿದ್ದಾರೆ.

ಇದನ್ನೂ ಓದಿ: ಆನೇಕಲ್: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಪಟಾಕಿ ಅಂಗಡಿ: 13 ಜನರು ಸಜೀವದಹನ

ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಹೇಳಿಕೆ ನೀಡಿದ್ದು, ಪಟಾಕಿ ಗೋಡೌನ್​ಗೆ ಅನುಮತಿ ಪಡೆಯಲಾಗಿದೆ. 2018 ರಲ್ಲಿ ಲೈಸೆನ್ಸ್ ರಿನಿವಲ್ ಮಾಡಲಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ರಿನಿವಲ್ ಮಾಡಲಾಗುತ್ತೆ. ಆದರೆ ರೂಲ್ಸ್ ಪ್ರಕಾರ ಫಾಲೋ ಮಾಡಲಾಗಿದ್ಯಾ ಇಲ್ವಾ? ಸ್ಟಾಕಿಂಗ್ ಬಗ್ಗೆ ಲಿಮಿಟೇಷನ್ ಬಗ್ಗೆ ಫಾಲೋ ಆಗಿದ್ಯಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್​


ಬಹುಶಃ ಹೆಚ್ಚಿನ ಮಟ್ಟದಲ್ಲಿ ಸಂಗ್ರಹ ಮಾಡಿದ್ದಕ್ಕೆ ಇಷ್ಟು ದೊಡ್ಡ ಘಟನೆ ನಡೆದಿದೆ. ಎಲ್ಲೆಲ್ಲಿ ಫೇಲ್ಯೂರ್ ಆಗಿದೆ ಮಾಹಿತಿ ಪಡೆಯಲಾಗಿದೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಕೃಷ್ಣಗಿರಿ ಡಿಸಿ ಕೂಡ ಮಾಹಿತಿ ಪಡೆದಿದ್ದಾರೆ. ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ. ಕಂಡಿಷನ್ ಮೀರಿ ದೊಡ್ಡ ಗೋಡೌನ್ ಮಾಡಿರುವ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಿಷ್ಟು

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ಮಾಧ್ಯಮದ ಮೂಲಕ ನನ್ನ ಗಮನಕ್ಕೆ ಬಂತು. ಐದು ಗಂಟೆಯ ನಂತರ 20 ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ರು ಅಂತ ತಿಳಿತು. ಬೆಂಕಿ ಅವಘಡಕ್ಕೆ ಸಂಭವಿಸದಂತೆ ಜಿಲ್ಲಾಧಿಕಾರಿ ಹಾಗೂ ಪೋಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ಇಲ್ಲಿ ನನಗೆ ನೋಡಿ ಬಹಳ ಗಾಬರಿ ಆಯ್ತು. ಪಟಾಕಿ ಮಾರಾಟ ಅಂಗಡಿ ಜೊತೆಗೆ ಗೋಡೌನ್ ಅವಕಾಶ ಕೊಟ್ಟಿದ್ದೆ ತಪ್ಪು. ಒಂದೇ ಕಡೆ ಅಧಿಕಾರಿಗಳು ಪಟಾಕಿ ಮಳಿಗೆ ಹಾಗೂ ಗೋಡೌನ್ಗೆ ಅವಕಾಶ ಕೊಡಲಾಗಿದೆ. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಇದೊಂದು ದುರಂತ ಘಟನೆಯಾಗಿದ್ದು ಹದಿಮೂರು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಮೂರು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ದವೇ ಕ್ರಮವಾಗಬೇಕು. ಇದರ ಸಂಪೂರ್ಣ ತನಿಖೆಯಾಗಬೇಕು. ಮೃತಕುಟುಂಬಗಳಿಗೆ ಪರಿಹಾರದ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಹೆಚ್ಚು ಪರಿಹಾರ ಕೊಡುವ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:04 pm, Sat, 7 October 23