ಬೆಂಗಳೂರು, ನ.04: ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದಿಂದ ಬರೊಬ್ಬರಿ 2 ಸಾವಿರ ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ನವೆಂಬರ್ 12 ಮತ್ತು 14 ರಂದು ನರಕ ಚತುರ್ದಶಿ ಹಾಗೂ ಬಲಿಪಾಡ್ಯಮಿ ಹಬ್ಬ ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ ನ.10 ರಿಂದ 12 ರವರೆಗೆ ಬೆಂಗಳೂರಿನಿಂದ ಕೆಳಕಂಡ ಸ್ಥಳಗಳಿಗೆ 2 ಸಾವಿರ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ನಿಗಮ ಮಾಡಿದೆ. ಇದರ ಜೊತೆಗೆ ಅಂತರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ನ.14 ಹಾಗೂ 15 ರಂದು ವಿಶೇಷ ಬಸ್ಸುಗಳು ಕೂಡ ಸಂಚರಿಸಲಿವೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಹೆಚ್ಚುವರಿ ಬಸ್ಗಳು ಕಾರ್ಯನಿರ್ವಹಿಸಲಿವೆ.
ಇದನ್ನೂ ಓದಿ:Deepavali Train: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಬೇಕಾ? ರೈಲು ಟಿಕೆಟ್ ಬುಕಿಂಗ್ ಈಗಲೇ ಶುರು
ಇನ್ನು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
ತಮಿಳುನಾಡು ಮತ್ತು ಕೇರಳ ಕಡೆಗೆ ನೋಡುವುದಾರೆ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಕಾರ್ಯನಿರ್ವಹಿಸಲಿವೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇನ್ನು ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ ಹಾಗೂ ಪಿಕ್‌ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸುವಂತೆ ಕೋರಲಾಗಿದೆ.
ಇದನ್ನೂ ಓದಿ:Deepavali Train: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಬೇಕಾ? ರೈಲು ಟಿಕೆಟ್ ಬುಕಿಂಗ್ ಈಗಲೇ ಶುರು
ಹೌದು, ಇ-ಟಿಕೇಟ್ ಬುಕಿಂಗ್‌ನ್ನು www.ksrtc.karnataka.gov.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದ್ದು, ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ನಿಗಮ ತಿಳಿಸಿದೆ. ಇನ್ನು ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟç ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳು ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ.
ಇನ್ನು ಕಾರ್ಯಾಚರಣೆ ಮಾಡಲಾಗುವ ಹೆಚ್ಚುವರಿ ಸಾರಿಗೆಗಳು, ಅವುಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅಂತರ್‌ಜಾಲ ವ್ಯವಸ್ಥೆಯಲ್ಲಿ ಹಾಗೂ ಕರಾರಸಾ ನಿಗಮದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಮಾಹಿತಿಗಾಗಿ ಒದಗಿಸಲಾಗಿದೆ. ಅದಾಗ್ಯೂ ಹೆಚ್ಚುವರಿ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಯ್ದಿರಿಸುವ ಮುಂಗಡ ಚೀಟಿಗಳಲ್ಲೂ ಕೂಡ ವಾಹನ ಹೊರಡುವ ಸ್ಥಳದ ವಿವರ ನಮೂದಿಸಲಾಗಿದೆ. ಅಲ್ಲದೇ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:52 pm, Sat, 4 November 23