ಬೆಂಗಳೂರು: ಮೊದಲ ಗ್ಯಾರಂಟಿಯಾಗಿರುವ ಗೃಹಜ್ಯೋತಿ (Gruha Jyothi Scheme) ಜಾರಿಗೆ ಸಂಪುಟ ಸಭೆ ನಿರ್ಧರಿಸಿದ್ದು, ಜುಲೈ 1 ರಿಂದ ಬಳಕೆ ಮಾಡುವ ವಿದ್ಯುತ್ ಉಚಿತವಾಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗದಿತ ಪ್ರಮಾಣದಷ್ಟು ವಿದ್ಯುತ್ ಬಳಸಿದರೆ ಬಿಲ್ಲ ಕಟ್ಟುವಂತಿಲ್ಲ. 12 ತಿಂಗಳ ಆವರೇಜ್ ವಿದ್ಯುತ್ ಬಳಕೆ ಮೇಲೆ ಶೇ 10 ರಷ್ಟು ಸೇರಿಸಿ ಹೆಚ್ಚುವರಿ ವಿದ್ಯುತ್ ನೀಡುತ್ತೇವೆ. 50 ಯುನಿಟ್ ಬಳಸುತ್ತಿದ್ದವರು 190 ಯುನಿಟ್ ಬಳಸಿದರೆ ಅಂತಹ ಗ್ರಾಹಕರನ್ನು ಗೃಹಜ್ಯೋತಿ ಯೋಜನೆಗೆ ಪರಿಗಣಿಸಲಾಗುವುದಿಲ್ಲ. ಹಿಂದಿನ ತಿಂಗಳಲ್ಲಿ ಬಾಕಿ ಇರಿಸಿರುವ ವಿದ್ಯುತ್ ಬಿಲ್ ಅನ್ನು ಗ್ರಾಹಕರು ಕಟ್ಟಬೇಕು ಎಂದರು.
ಜನರಿಗೆ ಕೊಟ್ಟಿ ಮೊದಲ ವಾಗ್ದಾನದಲ್ಲಿ ಗೃಹಜ್ಯೋತಿ ಮೊದಲನೆಯದ್ದು. ಪ್ರತಿ ಮನೆಗೆ 200 ಯುನಿಟ್ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದೇವು. ಈ ಗ್ಯಾರಂಟಿಯನ್ನು ಜಾರಿ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ. ಸುದೀರ್ಘವಾಗಿ ಐದು ಗ್ಯಾರಂಟಿಗಳ ಬಗ್ಗೆ ಚರ್ಚೆ ನಡೆಸಿ ಐದೂ ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ತೀರ್ಮಾನ ಮಾಡಿದ್ದೇವೆ. ಎಲ್ಲಾ ಜಾತಿ, ಧರ್ಮ, ಭಾಷಿಕರಿಗೆ ಗ್ಯಾರಂಟಿಗಳನ್ನು ತಲುಪಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: Yuva Nidhi Scheme: 2022-23ನೇ ಸಾಲಿನಲ್ಲಿ ಪದವಿ ಪಡೆದವರಿಗೆ ‘ಯುವನಿಧಿ’, ತೃತೀಯ ಲಿಂಗಿಗಳಿಗೂ ಯೋಜನೆ ಭಾಗ್ಯ
ಗೃಹ ಜ್ಯೋತಿ ಯಲ್ಲಿ ಕಳೆದ ವರ್ಷದ 12 ತಿಂಗಳ ಸರಾಸರಿ ಪಡೆದುಕೊಳ್ಳುತ್ತೇವೆ. ಕಮರ್ಷಿಯಲ್ ವಿದ್ಯುತ್ಗೆ ಈ ಯೋಜನೆ ಅನ್ವಯ ಆಗುವುದಿಲ್ಲ. ಬಾಡಿಗೆದಾರರು ಬಿಲ್ ಕಟ್ಟುತ್ತಾ ಇದ್ದರೆ ಅವರಿಗೆ ಉಚಿತ ವಿದ್ಯುತ್ ಕೊಡುತ್ತೇವೆ. ಒಂದು ಮನೆಯಲ್ಲಿ ಒಂದಕ್ಕಿಂತ ಜಾಸ್ತಿ ಆರ್ ಆರ್ ನಂಬರ್ ಇದ್ದರೆ ಅದು ಕಮರ್ಷಿಯಲ್ ಆಗುತ್ತದೆ, ಹಾಗಾಗಿ ಬಾಡಿಗೆದಾರರಿಗೆ ಉಚಿತ ಅನ್ವಯ ಇಲ್ಲ. ಸಿಂಗಲ್ ಬಿಲ್ಡಿಂಗ್ನಲ್ಲಿ ಬಾಡಿಗೆದಾರರಾಗಿದ್ದು ಆರ್ ಆರ್ ನಂಬರ್ ಮಾತ್ರ ಇದ್ದರೆ ಉಚಿತ ವಿದ್ಯುತ್ ನೀಡಲಾಗುವುದು. ಒಂದು ಬಿಲ್ಡಿಂಗ್ನಲ್ಲಿ ಒಂದು ಮನೆಯ ಆರ್ ಆರ್ ನಂಬರ್ ಮಾತ್ರ ಪರಿಗಣನೆ ಮಾಡಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳಿಗೆ ಬೇಕಾದ ಖರ್ಚು ವೆಚ್ಚದ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಸರ್ಕಾರ ನೀಡಿಲ್ಲ. ಗೃಹ ಜ್ಯೋತಿ ಅಡಿಯಲ್ಲಿ ಒಂದು ಬಿಲ್ಡಿಂಗ್ನಲ್ಲಿ ಒಂದಕ್ಕಿಂತ ಹೆಚ್ಚು ಆರ್ ಆರ್ ನಂಬರ್ ಇದ್ದಾಗ ಅದು ಬಿಲ್ಡಿಂಗ್ ಮಾಲೀಕರಿಗೆ ಮಾತ್ರ ಅನುಕೂಲವಾಗಲಿದೆ. ಒಂದು ಬಿಲ್ಡಿಂಗ್ನಲ್ಲಿ ಒಂದು ಆರ್ ಆರ್ ನಂಬರ್ ಮಾತ್ರ ಪರಿಗಣನೆ ಮಾಡಲಾಗುತ್ತದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತವಾಗಿ ಜಾರಿ ಮಾಡಿ ಘೋಷಣೆ ಮಾಡಿದರು. ಇಂದು (ಜೂನ್ 02) ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಬಗ್ಗೆ ವಿವರಿಸಿದರು. 5 ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದ್ದು, ಯಾವುದೇ ಜಾತಿ, ಧರ್ಮ, ಭಾಷೆ ಬೇಧವಿಲ್ಲದೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Fri, 2 June 23