ಬೆಂಗಳೂರು: ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಇದೇ 18 ರಂದು (July 18th) ಚುನಾವಣೆ ನಡೆಯಲಿದ್ದು, ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು (Draupadi Murmu) ಅವರು ಪ್ರಚಾರಾರ್ಥವಾಗಿ ನಾಳೆ ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ (2022 Presidential election).
ಶಾಂಗ್ರಿಲಾ ಹೊಟೇಲ್ ಗೆ ಆಗಮಿಸಲಿರುವ ದ್ರೌಪದಿ ಮುರ್ಮು ಅವರನ್ನು ಆದಿವಾಸಿ ಜನಾಂಗದ ಕಲಾ ತಂಡವು ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತಿಸಲಿದೆ. ಎಸ್ ಟಿ ಮೋರ್ಚಾ ನೇತೃತ್ವದಲ್ಲಿ ದ್ರೌಪದಿ ಮುರ್ಮು ಅವರನ್ನು ಅದ್ಧೂರಿಯಾಗಿ ಸ್ವಾಗತ ಕೋರಲು ನಿರ್ಧರಿಸಲಾಗಿದೆ.
ಮಹಿಳಾ ಮೋರ್ಚಾ ಟೀಮ್ ನಿಂದ ಸಾವಿರಾರು ಕಾರ್ಯಕರ್ತರನ್ನು ಸೇರಿಸಲು ಆಲೋಚಿಸಲಾಗಿದೆ. ಸಂಜೆ ಐದು ಗಂಟೆಗೆ ಬಿಜೆಪಿ ಶಾಸಕರು ಮತ್ತು ಸಂಸದರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗಿಯಾಗಲಿರುವ ಮುರ್ಮು ಚುನಾವಣೆಯಲ್ಲಿ ತಮ್ಮ ಪರ ಮತ ಚಲಾಯಿಸಲು ಕೋರಲಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಬಿಜೆಪಿ ಕರ್ನಾಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಅನೇಕ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಸಭೆ ಮುಗಿಸಿ ನಾಳೆಯೆ ದೆಹಲಿಗೆ ವಾಪಸಾಗಲಿದ್ದಾರೆ.
ಈ ಮಧ್ಯೆ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೆಗೌಡ ಅವರನ್ನು ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಭೇಟಿ ಆಗಲಿದ್ದಾರಾ ಎಂಬ ಕುತೂಹಲ ಮೂಡಿದೆ.
Published On - 4:20 pm, Sat, 9 July 22