ಬೆಂಗಳೂರು: ಬಿಎಂಟಿಸಿ ಬಸ್ನಲ್ಲಿ(BMTC Bus) ಬೆಂಕಿ ಕಾಣಿಸಿಕೊಂಡಿದ್ದು, ಮಲಗಿದ್ದ ಕಂಡಕ್ಟರ್ (conductor) ಸಜೀವ ದಹನವಾಗಿರುವ ಘಟನೆ ಬೆಂಗಳೂರಿನ ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಮುತ್ತಯ್ಯಸ್ವಾಮಿ ಮೃತದ ದುರ್ವೈವಿ(45). ಇಂದು (ಮಾರ್ಚ್ 10) ನಸುಕಿನಲ್ಲಿ ಬಸ್ನಲ್ಲಿ ಏಕಾಏಕಿ ಬೆಂಕಿ ದುರಂತ ಸಂಭವಿಸಿದ್ದು, ಬಸ್ನಲ್ಲೇ ನಿದ್ದೆಗೆ ಜಾರಿದ್ದ ಕಂಡಕ್ಟರ್ ಸುಟ್ಟು ಕರಕಲಾಗಿದ್ದಾರೆ. ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್ನಲ್ಲಿ ಚಾಲಕ ಹಾಗೂ ನಿರ್ವಾಹಕ ಮಲಗಿದ್ದರು. ಬೆಳಗ್ಗೆ ಚಾಲಕ ಪ್ರಕಾಶ್ ಎದ್ದು ಶೌಚಕ್ಕೆ ಹೋದಾಗ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದುರ್ಘಟನೆಯಲ್ಲಿ ನಿರ್ವಾಹಕ ಮುತ್ತಯ್ಯಸ್ವಾಮಿ ಮೃತಪಟ್ಟಿದ್ದರೆ, ಅದೃಷ್ಟವಶಾತ್ ಬಸ್ ಚಾಲಕ ಪ್ರಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮೊತ್ತೊಂದು ಅಗ್ನಿ ಅವಘಡ: ಐದಾರು ಗುಜರಿ ಗೋಡೌನ್‌ಗಳಿಗೆ ಹೊತ್ತಿಕೊಂಡ ಬೆಂಕಿ
ಮಾರ್ಗ ಸಂಖ್ಯೆ- 243/1, ಸುಮ್ಮನಹಳ್ಳಿ ಡಿಪೋ-31ಗೆ ಸೇರಿದ ಬಸ್ನಲ್ಲಿ ಮುತ್ತಯ್ಯಸ್ವಾಮಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ರೂಟ್ ಮುಗಿಸಿ ಲಿಂಗದೀರನಹಳ್ಳಿ ಬಸ್ ನಿಲ್ದಾಣದಲ್ಲಿ ನಿಂತಿದೆ. ನಿಂತಿದ್ದ ಬಸ್ನಲ್ಲೇ ಚಾಲಕ ಹಾಗೂ ನಿರ್ವಾಹಕ ಮಲಗಿದ್ದರು. ಆದ್ರೆ, ಚಾಲಕ ಬೆಳಗ್ಗೆ ಎದ್ದು ಶೌಚಾಲಯಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ. ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ನಿರ್ವಾಹಕ ಮುತ್ತಯ್ಯಸ್ವಾಮಿ ಮೂಲತಃ ಬಳ್ಳಾರಿ ಮೂಲದವರು ಎಂದು ತಿಳಿದುಬಂದಿದ್ದು, ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಈ ಬಗ್ಗೆ ಬಿಎಂಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಇಂದು ಬೆಳಗ್ಗೆ ಸುಮಾರು 4.45 ರ ಸಮಯದಲ್ಲಿ ಘಟಕ 31 ಅನುಸೂಚಿ ಸಂಖ್ಯೆ 243L/1, ಲಿಂಗದೀರನಹಳ್ಳಿ ರಾತ್ರಿ ತಂಗುವ KA 57 F, 2069 ಸಂಖ್ಯೆ ಬಸ್. ಚಾಲಕ ಪ್ರಕಾಶ್ , ನಿರ್ವಾಹಕ ಮುತ್ತಯ್ಯ ಲಿಂಗದೇವರಹಳ್ಳಿ ಬಸ್ ನಿಲ್ದಾಣದಲ್ಲಿ ರಾತ್ರಿ ತಂಗಲು ಅಲ್ಲಿಯೇ ಸ್ಥಳವಿದ್ದು, ಚಾಲಕ ತಂಗುವ ಸ್ಥಳದಲ್ಲಿ ಮಲಗಿದ್ದಾರೆ. ಆದರೆ ನಿರ್ವಾಹಕ ತಾವು ಬಸ್ ನಲ್ಲಿಯೇ ಮಲಗುವುದಾಗಿ ತಿಳಿಸಿರುವುದಾಗಿ ಚಾಲಕ ಹೇಳಿಕೆ ನೀಡಿದ್ದಾರೆ. ತಂಗುವ ಸ್ಥಳದಲ್ಲಿ ಮಲಗಿದ್ದರಿಂದ ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿಲ್ಲ ಎಂದು ಚಾಲಕ ತಿಳಿಸಿದ್ದಾರೆ. ಬೆಂಕಿ ಹತ್ತಿರುವುದನ್ನು ನೋಡಿ ಬೀಟ್ ಪೋಲಿರು ತಕ್ಷಣ ಅಗ್ನಿಶಾಮಕದವರಿಗೆ ತಿಳಿಸಿ ಬೆಂಕಿ ನಂದಿಸಲು ಪ್ರಯತ್ನ ಮಾಡಿದ್ದಾಗ್ಯೂ ದುರದೃಷ್ಟವಶಾತ್ ನಿರ್ವಾಹಕ ಬದುಕುಳಿಯಲಿಲ್ಲ. ಸಂಸ್ಥೆಯು ತೀವ್ರ ಸಂತಾಪವನ್ನು ಸೂಚಿಸುತ್ತದೆ. ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ತಕ್ಷಣವೇ ಭೇಟಿ ನೀಡಿದ್ದಾರೆ. ನಿರ್ವಾಹಕರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರಿ ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಬಿಎಂಪಿಟಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
Published On - 6:45 am, Fri, 10 March 23