ಬೆಂಗಳೂರು, ಆ.13: ಅಕ್ಟೋಬರ್ 3, 2021 ರಂದು 545 ಪಿಎಸ್ಐ ಹುದ್ದೆಗಳಿಗೆ(PSI Recruitment Scam) ನಡೆಸಲಾಗಿದ್ದ ಪರೀಕ್ಷೆಯ ಹಗರಣ ಇಡೀ ರಾಜ್ಯದಲ್ಲಿ ಸಂಚನ ಮೂಡಿಸಿತ್ತು. ಆರೋಪ-ಪ್ರತ್ಯಾರೋಪ, ಬಂಧನಗಳ ನಂತರ 2023ರ ಸೆಪ್ಟೆಂಬರ್ 28 ರಂದು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಮರು ಪರೀಕ್ಷೆ ನಡೆಸುವುದಕ್ಕೆ ಸರ್ಕಾರ ತಿಳಿಸಿತ್ತು. ಆದ್ರೆ ಈಗ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್(Karnataka High Court) ಮುಂದುವರಿಸಿದೆ. ಇದರ ನಡುವೆ ಪಿಎಸ್ಐ ಆಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
545 ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನ ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಹೀಗಾಗಿ 545 ನೇಮಕಾತಿಯಲ್ಲಿ ಆಯ್ಕೆಯಾದ 490 ಅಭ್ಯರ್ಥಿಗಳನ್ನು ನ್ಯಾಯಾಂಗ ತನಿಖಾ ವ್ಯಾಪ್ತಿಗೆ ತರಲು ಮನವಿ ಮಾಡಿ ಪತ್ರ ಬರೆದಿದ್ದಾರೆ. 545 ನೇಮಕಾತಿಯಲ್ಲಿ 53 ಮಂದಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಶಾಶ್ವತವಾಗಿ ಯಾವುದೇ ನೇಮಕಾತಿಯಲ್ಲಿ ಭಾಗಿಯಾಗದಂತೆ ಅನರ್ಹಗೊಳಿಸಲಾಗಿದೆ. ಹೀಗಾಗಿ ಪ್ರಾಮಾಣಿಕವಾಗಿ ಆಯ್ಕೆಯಾದವರಿಗೆ ನೇಮಕಾತಿ ನೀಡಬೇಕು. ಹಿಂದಿನ ಸರ್ಕಾರ ಮರುಪರೀಕ್ಷೆಗೆ ಆದೇಶಿಸಿತ್ತು. ಮರುಪರೀಕ್ಷೆ ನಡೆಸಿದ್ರೆ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತೆ. ಆಯ್ಕೆಯಾದ 490 ಅಭ್ಯರ್ಥಿಗಳಲ್ಲಿ 137 ಮಂದಿ ಮಹಿಳೆಯರಿದ್ದಾರೆ. ಮರು ಪರೀಕ್ಷೆಯಿಂದ ಅವರು ಮತ್ತೆ ಅಧ್ಯಯನ ಮಾಡಲು ಆಗುವುದಿಲ್ಲ. ಕೆಲವರು ಸರ್ಕಾರಿ, ಖಾಸಗಿ ಕಂಪನಿ ಕೆಲಸಗಳಿಗೆ ರಾಜೀನಾಮೆ ನೀಡಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳನ್ನೂ ನ್ಯಾಯಾಂಗ ತನಿಖೆ ವ್ಯಾಪ್ತಿಗೆ ಪರಿಗಣಿಸಿ. ಅಭ್ಯರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ: ನ್ಯಾಯಾಂಗ ತನಿಖೆಗೆ ಯಾವುದೇ ಸೌಲಭ್ಯ ನೀಡದ ರಾಜ್ಯ ಸರ್ಕಾರ
545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕಂಡು ಬಂದ ನಂತರ ಸರ್ಕಾರವು ನೇಮಕಾತಿ ರದ್ದುಗೊಳಿಸಿತ್ತು. ಬಳಿಕ ಸೆಪ್ಟೆಂಬರ್ 28 ರಂದು ಮರು ಪರೀಕ್ಷೆಗೆ ಆದೇಶಿಸಿತ್ತು. ಆದರೆ ಸೆಪ್ಟೆಂಬರ್ 28 ರಂದು ನಡೆಯಬೇಕಿದ್ದ ಮರು ಪರೀಕ್ಷೆ ನಡೆಸುವುದರ ವಿರುದ್ಧ ಈ ಹಗರಣದ ಪಾಸಾಗಿರುವ ಆರೋಪಿಗಳಲ್ಲಿ 100 ಮಂದಿ ಅಭ್ಯರ್ಥಿಗಳು ತಕರಾರು ಅರ್ಜಿ ಹಾಕಿದ್ದಾರೆ. ಹೀಗಾಗಿ 2023ರ ಸೆಪ್ಟೆಂಬರ್ 28 ರಂದು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಮರು ಪರೀಕ್ಷೆ ನಡೆಸುವುದಕ್ಕೆ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಮುಂದುವರೆಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:15 am, Sun, 13 August 23