
ಬೆಂಗಳೂರು, ಏಪ್ರಿಲ್ 22: ರಾಷ್ಟ್ರೀಯ ಜನಗಣತಿ-2026 ಬೆಂಗಳೂರಿನಲ್ಲಿ (bangaluru) ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯನ್ನ ಕಾಣದೇ ಕುಂಟುತ್ತಾ ಸಾಗಿದೆ. ಇನ್ನು ಗಣತಿ ಕಾರ್ಯಕ್ಕೆ 6 ಸಾವಿರ ಸರ್ಕಾರಿ ನೌಕರರು ಕೈಕೊಟ್ಟಿದ್ದಾರೆ. ಹೀಗಾಗಿ ಇಕ್ಕಟ್ಟಿಗೆ ಸಿಲುಕಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಖಾಸಗಿ ವ್ಯಕ್ತಿಗಳಿಂದ ಗಣತಿ ಮಾಡಿಸಲು ತಯಾರಿ ನಡೆಸಿದೆ.
ರಾಷ್ಟ್ರೀಯ ಜನಗಣತಿ 2026 ಮನೆ ಮನೆ ಗಣತಿ ಕಾರ್ಯ ಶುರುವಾಗಿ ಒಂದು ವಾರವೇ ಆದರೂ ಬೆಂಗಳೂರಿನಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಂಡುಬಂದಿಲ್ಲ. ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದ ಸರ್ಕಾರಿ ಸಿಬ್ಬಂದಿ ಪೈಕಿ 6 ಸಾವಿರ ಮಂದಿಗೆ ಗೈರು ಹಾಜರಾಗಿರುವುದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳಿಗೆ ತಲೆನೋವಾಗಿದೆ.
ಇನ್ನು ಒಂದಷ್ಟು ಸರ್ಕಾರಿ ನೌಕರರು ಗಣತಿ ಕಾರ್ಯದಿಂದ ದೂರ ಉಳಿದ ಹಿನ್ನಲೆ ಉಂಟಾಗಿರುವ ಸಿಬ್ಬಂದಿ ಕೊರತೆಯನ್ನ ನೀಗಿಸಲು ಜಿಬಿಎ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಖಾಸಗಿಯವರಿಂದ ಮನೆ ಮನೆ ಗಣತಿ ಕಾರ್ಯ ನಡೆಸಲು ಮುಂದಾಗಿದೆ. 5 ನಗರ ಪಾಲಿಕೆಗಳಿಗೆ ಸುಮಾರು ತಲಾ 1 ಸಾವಿರ ಗಣತಿದಾರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಇದನ್ನೂ ಓದಿ: ಇಂದಿನಿಂದ ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಪಿಯುಸಿ ತೇರ್ಗಡೆ ಹೊಂದಿದ ಆ್ಯಂಡ್ರಾಯ್ಡ್ ಫೋನ್ ಹೊಂದಿರುವ ವ್ಯಕ್ತಿಗಳನ್ನ ಆಯ್ಕೆ ಮಾಡಿಕೊಂಡು ತರಬೇತಿ ನೀಡಿ ಗಣತಿ ಮಾಡಿಸಲು ಜಿಬಿಎ ಸಜ್ಜಾಗಿದೆ. ಇನ್ನು ವಿದ್ಯಾರ್ಥಿಗಳು ಗಣತಿ ಕಾರ್ಯ ಮಾಡಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.
ಸರ್ಕಾರಿ ನೌಕರರು ಮಾಡಬೇಕಿದ್ದ ಜನಗಣತಿಯಂತಹ ಸೂಕ್ಷ್ಮ ಕಾರ್ಯವನ್ನ ಖಾಸಗಿಯವರಿಂದ ಮಾಡಿಸುವುದು ಎಷ್ಟು ಸರಿ ಎಂಬ ಆಕ್ಷೇಪವು ಕೇಳಿಬರುತ್ತಿದೆ. ಆದರೆ ಸಿಬ್ಬಂದಿ ಕೊರತೆ ನೀಗಿಸಲು ಜಿಬಿಎಗೆ ಇರುವ ಮಾರ್ಗ ಇದೇ ಆಗಿದ್ದು, ಈ ನಡೆ ಮುಂದೆ ವಿವಾದಾತ್ಮಕ ತಿರುವು ಪಡೆದುಕೊಳ್ಳಲಿದೆಯೋ ಕಾದುನೋಡಬೇಕಿದೆ.
ರಾಷ್ಟ್ರೀಯ ಜನಗಣತಿ ಮತ್ತು ಮನೆ ಗಣತಿ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು ಜಿಲ್ಲೆಯ ಆರು ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಕೋಲಾರ ತಾಲ್ಲೂಕಿನ ತಹಶೀಲ್ದಾರ್ ನಯನ, ಮುಳಬಾಗಿಲು ತಹಶೀಲ್ದಾರ್ ಗೀತಾ, ಕೆಜಿಎಫ್ ತಹಶೀಲ್ದಾರ್ ಭರತ್, ಬಂಗಾರಪೇಟೆ ತಹಶೀಲ್ದಾರ್ ಸುಜಾತ, ಮಾಲೂರು ತಹಶೀಲ್ದಾರ್ ರೂಪಾ ಹಾಗೂ ಶ್ರೀನಿವಾಸಪುರ ತಹಶೀಲ್ದಾರ್ ಸುದೀಂದ್ರ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: 2027ರ ಜನಗಣತಿ: ಏ 1ರಿಂದ ಕರ್ನಾಟಕದಲ್ಲಿ ಮೊದಲ ಹಂತ ಶುರು, ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಕರ್ನಾಟಕ ನಾಗರೀಕ ಸೇವಾ ನಿಯಮ 2012ರ ಕಾಲಂ 3 ಹಾಗೂ ಜನಗಣತಿ ಕಾಯ್ದೆ 1948ರ ಕಾಲಂ 6(2) ಉಲ್ಲಂಘನೆ ಆರೋಪದಡಿ 24ಗಂಟೆಯಲ್ಲಿ ನೋಟಿಸ್ಗೆ ಸಮಜಾಯಿಷಿ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸೂಕ್ತ ಸಮಯದಲ್ಲಿ ಉತ್ತರಿಸದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.