ಕಳೆದ 5 ವರ್ಷಗಳಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಕರ್ನಾಟಕದಲ್ಲಿ 629 ಮಂದಿ ಸಾವು: ಕೇವಲ 7 ಪ್ರಕರಣಗಳಲ್ಲಿ ಮಾತ್ರ ಈವರೆಗೆ ಶಿಕ್ಷೆ
ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ ವರದಕ್ಷಿಣೆ ಕಿರುಕುಳಕ್ಕೆ 629 ಮಂದಿ ಮೃತಪಟ್ಟಿದ್ದು, ಈ ಪೈಕಿ ಕೇವಲ 7 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ ಎಂದು ಗೃಹ ಇಲಾಖೆಯ ಅಂಕಿಅಂಶಗಳು ತಿಳಿಸಿವೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸರಾಸರಿ ವಾರ್ಷಿಕವಾಗಿ ವರದಕ್ಷಿಣೆ ಕಿರುಕುಳಕ್ಕೆ 126 ಮಂದಿ ಮೃತಪಟ್ಟಿದ್ದರೆ, 2,700 ವರದಕ್ಷಿಣೆ ಕಿರುಕುಳ ಪ್ರಕರಣಗಳು ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಸುಮಾರು 2,000 ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಬೆಂಗಳೂರು, ಅಕ್ಟೋಬರ್ 25: ಕಳೆದ 5 ವರ್ಷಗಳಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಕರ್ನಾಟಕದಲ್ಲಿ 629 ಮಂದಿ ಮೃತಪಟ್ಟಿದ್ದು, ಈ ಪೈಕಿ ಕೇವಲ ಏಳು ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಈವರೆಗೆ ಶಿಕ್ಷೆಯಾಗಿದೆ. 70 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಗೃಹ ಇಲಾಖೆಯ ಅಂಕಿಅಂಶಗಳ ಪ್ರಕಾರ, 2022ರ ಜನವರಿಯಿಂದ 2026ರ ಜುಲೈವರೆಗೆ ರಾಜ್ಯದಲ್ಲಿ 629 ವರದಕ್ಷಿಣೆ ಸಾವು ಪ್ರಕರಣಗಳು ದಾಖಲಾಗಿವೆ. ಪೊಲೀಸರು 543 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ಪೈಕಿ 463 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ. ಶಿಕ್ಷೆ ಮತ್ತು ಖುಲಾಸೆ ಸೇರಿದಂತೆ ಇತ್ಯರ್ಥಗೊಂಡಿರುವ 77 ಪ್ರಕರಣಗಳೆಲ್ಲವೂ 2022ರಿಂದ 2024ರ ನಡುವೆ ದಾಖಲಾಗಿದ್ದವು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಂದೇ ಒಂದು ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ. ಇನ್ನು 2024ರಲ್ಲಿ 9 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದ ಬಳಿಕ, ಯಾವುದೇ ಪ್ರಕರಣದಲ್ಲಿ ಖುಲಾಸೆ ತೀರ್ಪು ಬಂದಿಲ್ಲ.
ಕಳೆದ 5 ವರ್ಷಗಳಲ್ಲಿ 13,453 ಪ್ರಕರಣ
ವರದಕ್ಷಿಣೆ ಕಿರುಕುಳಕ್ಕೆ ಸಾವು ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರುವುದು ಸಂತ್ರಸ್ತರಿಗೆ ನ್ಯಾಯ ನಿರಾಕರಿಸುವುದರ ಜೊತೆಗೆ ಅವರ ಕುಟುಂಬಗಳನ್ನು ತೀವ್ರ ಸಂಕಷ್ಟಕ್ಕೆ ದೂಡುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವರದಕ್ಷಿಣೆ ಕಿರುಕುಳ ಮತ್ತು ಸಾವು ಪ್ರಕರಣಗಳನ್ನು ಸಾಬೀತುಪಡಿಸುವುದು ಕಷ್ಟಕರವಾಗಿದೆ. ಏಕೆಂದರೆ, ಕಿರುಕುಳದ ಬಹುಪಾಲು ಘಟನೆಗಳು ಮನೆಯೊಳಗೆ ನಡೆಯುತ್ತವೆ ಮತ್ತು ಸ್ವತಂತ್ರ ಸಾಕ್ಷಿಗಳಿರುವುದಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿಯೂ ರಾಜ್ಯದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಿದೆ. ಇದೇ ಅವಧಿಯಲ್ಲಿ ದಾಖಲಾದ 13,453 ಪ್ರಕರಣಗಳಲ್ಲಿ ಪೊಲೀಸರು 10,649 ಪ್ರಕರಣಗಳಿಗೆ ಮಾತ್ರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇವುಗಳಲ್ಲಿ 8,307 ಪ್ರಕರಣಗಳು ನ್ಯಾಯಾಲಯಗಳಲ್ಲಿವೆ. ಕೇವಲ 50 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 1,914 ಮಂದಿ ಖುಲಾಸೆಯಾಗಿದ್ದಾರೆ.
ಇದನ್ನೂ ಓದಿ: ವಿದೇಶಿ ವಲಸಿಗರ ಕೇಂದ್ರದಿಂದ ಮಹಿಳೆ ಪರಾರಿ; ಕಿಟಕಿ ಸರಳು ಕಟ್ ಮಾಡಿ ಎಸ್ಕೇಪ್
ವಾರ್ಷಿಕವಾಗಿ ಸರಾಸರಿ 126 ಮಂದಿ ಬಲಿ
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸರಾಸರಿ ವಾರ್ಷಿಕವಾಗಿ ವರದಕ್ಷಿಣೆ ಕಿರುಕುಳಕ್ಕೆ 126 ಮಂದಿ ಮೃತಪಟ್ಟಿದ್ದರೆ, 2,700 ವರದಕ್ಷಿಣೆ ಕಿರುಕುಳ ಪ್ರಕರಣಗಳು ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಸುಮಾರು 2,000 ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಸರ್ಕಾರದ ಅಂಕಿಅಂಶಗಳು ಸಂಪೂರ್ಣ ಚಿತ್ರಣವನ್ನು ನೀಡುವುದಿಲ್ಲ. ವರದಕ್ಷಿಣೆ ಕಿರುಕುಳ ಮತ್ತು ಸಾವು ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಆದರೆ, ನ್ಯಾಯ ಪಡೆಯುವ ಪ್ರಕ್ರಿಯೆ ದೀರ್ಘ ಮತ್ತು ಕಷ್ಟಕರವಾಗಿರುವುದರಿಂದ ದೂರು ದಾಖಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಈ ವಿಷವರ್ತುಲದಿಂದ ಹೊರಬರಲು ದಾರಿ ಕಾಣದೆ ಅನೇಕ ಮಹಿಳೆಯರು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಹಿಂಸೆಯನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರಿನ ಅವೇಕ್ಷಾ ಮಹಿಳಾ ಟ್ರಸ್ಟ್‌ನ ಸಂಸ್ಥಾಪಕಿ ಡೊನ್ನಾ ಫರ್ನಾಂಡಿಸ್ ತಿಳಿಸಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




