
ಬೆಂಗಳೂರು, (ಸೆಪ್ಟೆಂಬರ್ 23: ಬೆಂಗಳೂರಿನ ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ವಿವಾಹಿತ ಮಹಿಳೆಯೊಬ್ಬಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆಕೆಯ 12 ವರ್ಷದ ಮಗಳೆದುರಿಗೇ ಈ ಭೀಕರ ಘಟನೆ ನಡೆದಿದೆ. ಕೊಲೆ ಮಾಡಿದಾತನ ಹೆಸರು ಲೋಹಿತಾಶ್ವ ಅಲಿಯಾಸ್ ಲೋಕೇಶ್. ರೇಖಾ(35) ಕೊಲೆಯಾದ ದುರ್ದೈವಿ. ಹಂತಕ ಲೋಹಿತಾಶ್ವ ಮತ್ತು ಕೊಲೆಯಾದ ರೇಖಾ ಇಬ್ಬರೂ ಗಂಡ ಹೆಂಡತಿಯಾಗಿದ್ದು, ಆಕೆಯ ಮಗಳ ವಿಷಯದಲ್ಲಿ ನಡೆದ ಕಲಹ ಕೊಲೆಯಲ್ಲಿ ದುರಂತ ಅಂತ್ಯ ಕಂಡಿದೆ.
ಆಗಿದ್ದೇನು?
ಹಂತಕ ಲೋಹಿತಾಶ್ವ ಮತ್ತು ರೇಖಾ ಇತ್ತೀಚೆಗಷ್ಟೆ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ರೇಖಾಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಕಿರಿಯವಳನ್ನು ಆಕೆಯ ತಂದೆ ತಾಯಿಯ ಬಳಿ ಬಿಟ್ಟಿದ್ದಳು. ಆದರೆ 12 ವರ್ಷದ ಹಿರಯ ಮಗಳನ್ನು ಮಾತ್ರ ತನ್ನೊಟ್ಟಿಗೆ ಇರಿಸಿಕೊಂಡಿದ್ದಳು. ಇದರಿಂದಾಗಿಯೇ ರೇಖಾ ಮತ್ತು ಹಂತಕನ ನಡುವೆ ವೈಮನಸ್ಸುಂಟಾಗಿತ್ತು. ಇದರ ಸಲುವಾಗಿಯೇ ಸುಂಕದಕಟ್ಟೆ ಬಸ್ ನಿಲ್ದಾಣಕ್ಕೆ ಬಂದ ತಾಯಿಯನ್ನು ಮಗಳ ಕಣ್ಣೆದುರೇ ಭೀಕರವಾಗಿ ಹತ್ಯೆಗೈದಿದ್ದಾನೆ.
ಈ ಪ್ರಕರಣ ಸೋಮವಾರ ಬೆಳಿಗ್ಗೆ 11.30 ರ ಸುಮಾರಿಗೆ ಸಾರ್ವಜನಿಕರ ಕಣ್ಣೆದುರಿಗೇ ನಡೆದಿದೆ. ರೇಖಾಳ ಎದೆಗೆ ಮತ್ತು ಹೊಟ್ಟಗೆ ಸುಮಾರು 11 ಬಾರಿ ಚಾಕುವಿನಿಂದ ಇರಿದ ಲೋಕೇಶ್ನನ್ನು ಸಾರ್ವಜನಿಕರು ತಡೆಯಲು ಪ್ರಯತ್ನ ಪಟ್ಟರೂ ಲೆಕ್ಕಿಸದೆ ಅವರೆಡೆಗೆ ಚಾಕು ಎಸೆದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಹಂತಕ ಲೋಹಿತಾಶ್ವನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ತುಮಕೂರು ತಾಲೂಕಿನ ಶಿರಾ ಮೂಲದ ಲೋಹಿತಾಶ್ವ, ಹಾಸನದ ಚನ್ನರಾಯಪಟ್ಟನದ ರೇಖಾಳನ್ನು ತನ್ನ ಸ್ನೇಹಿತರ ಮೂಲಕ ಪರಿಚಯ ಮಾಡಿಕೊಂಡಿದ್ದ. ರೇಖಾ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಅವರ ಕಛೇರಿಯಲ್ಲೇ ಲೋಹಿತಾಶ್ವ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಮುರಿದು ಬಿದ್ದ ಮದುವೆಯನ್ನು ಬದಿಗಿಟ್ಟು ಹೊಸ ಜೀವನವನ್ನು ಶುರು ಮಾಡಲು ಬಯಸಿದ್ದರು. ಒಂದೂ ವರೆ ವರ್ಷದಿಂದ ಲಿವಿನ್ ಸಂಬಂಧದಲ್ಲಿದ್ದ ಇಬ್ಬರೂ 3 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಬಳಿಕ ಸುಂಕದಕಟ್ಟೆಯ ಬಳಿಯೇ ಬಾಡಿಗೆ ಮನೆಯೊಂದರಲ್ಲಿ ಜೀವಿಸುತ್ತಿದ್ದರು. ರೇಖಾಳ ಹಿರಿಯ ಮಗಳು ಅವಿಬ್ಬರ ಜೊತೆ ಇರುವುದು ಲೋಹಿತಾಶ್ವನಿಗೆ ಇಷ್ಟವಿರಲಿಲ್ಲ. ಮಗಳನ್ನು ಬೇರೆ ಕಡೆ ಕಳುಹಿಸು ಎಂದು ರೇಖಾಗೆ ಸಾಕಷ್ಟು ಬಾರಿ ದುಂಬಾಲು ಬಿದ್ದಿದ್ದ. ಆದರೆ ರೇಖಾ ಮಾತ್ರ ಮಗಳನ್ನು ಕಳುಹಿಸಲು ಒಪ್ಪಿರಲಿಲ್ಲ. ಈ ಕಾರಣಕ್ಕಾಗಿಯೇ ಪದೇ ಪದೇ ಇಬ್ಬರೂ ಜಗಳವಾಡುತ್ತಿದ್ದರು.ಕೊಲೆಯಾದ ದಿನ ಬೆಳಿಗ್ಗೆಯೂ ರೇಖಾ ಅವನೊಂದಿಗೆ ಜಗಳವಾಡಿಕೊಂಡೇ ಬಂದಿದ್ದಳು. ಇದೇ ಉದ್ವೇಗದಲ್ಲಿ ಬಸ್ ನಿಲ್ಧಾಣಕ್ಕೆ ಬಂದ ಹಂತಕ ಹೀನ ಕೃತ್ಯವೆಸಗಿದ್ದಾನೆ.