ಡಿಕೆ ಶಿವಕುಮಾರ್ 1989 ರಲ್ಲಿ ಮೊದಲ ಬಾರಿಗೆ ಎಂ ಎಲ್ ಎ ಆಗಿದ್ದ ಸಮಯಕ್ಕೆ ಆಗಷ್ಟೆ ತಮ್ಮ ಸಾಮ್ರಾಜ್ಯವನ್ನು ಕಟ್ಟಲು ಶುರು ಮಾಡಿದ್ರು , 1989 ರಿಂದ 2017ರ ತನಕ ಡಿಕೆ ಕಟ್ಟಿದ್ದು ಅಕ್ಷರಶ: ಸಾಮ್ರಾಜ್ಯವನ್ನೆ ಬಿಡಿ. ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ್ದ ಡಿಕೆ 2017 ಆಗುವಷ್ಟರಲ್ಲಿ ಎಷ್ಟರ ಮಟ್ಟಿಗೆ ದುಡಿದಿದ್ರು ಅಂದ್ರೆ 2017 ರಲ್ಲಿ ಆದಾಯ ತೆರಿಗೆ ಇಲಾಕೆಯ ಅಧಿಕಾರಿಗಳು ಬರೋಬ್ಬರಿ 80ಕ್ಕೂ ಹೆಚ್ಚು ಕಡೆ ಅಂದ್ರೆ ಡಿಕೆ ಶಿವಕುಮಾರ್ ಮನೆಯಿಂದ ಅವರ ತಮ್ಮ ಸುರೇಶ್ ನಿವಾಸ ಹಾಗೂ ಆವ್ರ ಆಪ್ತ ವಲಯದಲ್ಲಿ ಇದ್ದುಕೊಂಡು ವ್ಯವಹಾರ ಮಾಡುವ ಎಲ್ಲರ ಮನೆ, ಕಚೇರಿ, ಫಾರಂ ಹೌಸ್ ಯಾವುದನ್ನೂ ಬಿಟ್ಟೂಬಿಡದೆ ದಾಳಿ ನಡೆಸಿತ್ತು. ಬಹುಶಃ ಡಿಕೆ ಶಿವಕುಮಾರ್ ಜೀವನದಲ್ಲಿ ಇದು ಮೊದಲ ದೊಡ್ಡ ಹೊಡೆತ ಎಂದ್ರೆ ತಪ್ಪಾಗುವುದಿಲ್ಲ. 2017 ರಲ್ಲಿ ಶುರುವಾದ ತನಿಖೆ ಮುಂದೆ ಇಡಿ, ಅದಾದ ನಂತ್ರ ಸಿಬಿಐ ಹೀಗೆ ಮುಂದು ವರೆಯುತ್ತಲೇ ಇದೆ. ನಿನ್ನೆಯೂ (2022 ಡಿಸೆಂಬರ್ 19) ಡಿಕೆ ಶಿವಕುಮಾರ್ (DK Shivakumar) ಒಡೆತನದ ಸಂಸ್ಥೆಗಳ ಬಳಿಗೆ ಸಿಬಿಐ ಅಧಿಕಾರಿಗಳು ಬಂದು ತನಿಖೆ ನಡೆಸಿದ್ದಾರೆ (CBI Raid). ಹಾಗಾದ್ರೆ ಈಗ ಸಿಬಿಐ ಬಂದಿದ್ದಾದ್ರು ಯಾಕೆ? ಡಿಕೆ ಶಿವಕುಮಾರ್ ಮೇಲೆ ನಡೆಯುತ್ತಿರೊ ತನಿಖೆಗಳು ಯಾವ ಹಂತದಲ್ಲಿ ಇವೆ? ಇದ್ರ ಸಂಪೂರ್ಣ ಮಾಹಿತಿ ಹಂತ ಹಂತವಾಗಿ ಇಲ್ಲಿದೆ.
ಅಂದಹಾಗೆ ನಿನ್ನೆ ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದೆ. ಅಸಲಿಗೆ ಈ ಕೇಸ್ನ ಹಿನ್ನೆಲೆ ನೋಡಿದ್ರೆ, 2013ರಿಂದ 2018 ರ ವರೆಗೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಅಂದ್ರೆ 74 ಕೋಟಿ 92 ಲಕ್ಷ ರೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಆರೋಪ ಡಿಕೆಶಿ ವಿರುದ್ಧ ಇತ್ತು. ಇದೇ ಪ್ರಕರಣ ಸಂಬಂಧ ಸಿಬಿಐ ಅಕ್ಟೋಬರ್ 5, 2020 ರಂದು FIR ದಾಖಲಿಸಿ ದಾಳಿ ಮಾಡಿತ್ತು. ಅಂದು ಡಿಕೆಶಿ ಮತ್ತು ಸೋದರ ಡಿಕೆಸುರೇಶ್ ಅವರಿಗೆ ಸಂಬಂಧಿಸಿದ 14 ಸ್ಥಳದ ಮೇಲೆ ಸಿಬಿಐ ದಾಳಿ ಮಾಡಿತ್ತು.
ಕೆಲ ತಿಂಗಳ ಹಿಂದಷ್ಟೇ ಇದೇ ಪ್ರಕರಣ ಸಂಬಂಧ ರಾಮನಗರದಲ್ಲಿರುವ ಡಿಕೆಶಿ ಕಚೇರಿ ಮೇಲೂ ದಾಳಿ ನಡೆದಿತ್ತು. ಅಂದು ತಹಶೀಲ್ದಾರ್ ಜೊತೆ ತೆರಳಿದ್ದ ಸಿಬಿಐ ಅಧಿಕಾರಿಗಳು ಆಸ್ತಿ ಮೌಲ್ಯಮಾಪನ ಮಾಡಿದ್ರು. ಇದೀಗ ಸಿಬಿಐ ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಆಸ್ತಿ ಮೌಲ್ಯಮಾಪನ ಕಾರ್ಯ ಮಾಡಿದೆ. ಇಂದು ಬೆಂಗಳೂರಿನ ಆರ್.ಆರ್. ನಗರದಲ್ಲಿರೋ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಮೇಲೆ ಸಿಬಿಐ ದಾಳಿ ನಡೆಸಿದೆ. ಡಿಕೆಶಿ ಈ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಚೇರ್ಮನ್ ಆಗಿದ್ದು, ಡಿಕೆಶಿ ಪುತ್ರಿ ಐಶ್ವರ್ಯ ನ್ಯಾಷನಲ್ ಎಜುಕೇಷನ್ ಫೌಂಡೇಶನ್ನ ಕಾರ್ಯದರ್ಶಿ ಆಗಿದ್ದಾರೆ. ಇಂದು ಸಿಬಿಐ ಅಧಿಕಾರಿಗಳು ಡಿಕೆಶಿ ಮತ್ತು ಪುತ್ರಿ ಐಶ್ವರ್ಯಗೆ ಸೇರಿದ ಆಸ್ತಿ ಮೌಲ್ಯಮಾಪನ ಕಾರ್ಯ ಮಾಡ್ತಿದೆ. ಇದು ಸಿಬಿಐ ನಡೆಸುತ್ತಿರೊ ತನಿಖೆಯ ಒಂದು ಭಾಗ ಅಷ್ಟೆ, ಈ ಭಾಗ ಶರುವಾಗಿದ್ದು ಹೇಗೆ ಅನ್ನೋದಕ್ಕೆ ಒಂದು ಇತಿಹಾಸ ಇದೆ.
2016 ರಲ್ಲಿ ಕಾಂಗ್ರೆಸ್ ಗುಜರಾತ್ ಶಾಸಕರನ್ನು ಕರ್ನಾಟಕಕ್ಕೆ ಕರೆದುಕೊಂಡು ಬಂದು ಅವ್ರೆಲ್ಲರನ್ನು ರಾಮನಗರದ ಈಗಲ್ ಟನ್ ರೆಸಾರ್ಟ್ ನಲ್ಲಿ ಇರಿಸಿದ್ದ ಬಿಜಿಯಲ್ಲಿ ಡಿಕೆ ಶಿವಕುಮಾರ್ ಇದ್ರು. ಅದ್ರೆ ಅದೇ ಸಮಯದಲ್ಲಿ ಐಟಿ ಅಧಿಕಾರಿಗಳು ಡಿ ಕೆ ಶಿವಕುಮಾರ್ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ್ರು , ಅದ್ರಂತೆ ರೆಸಾರ್ಟ್ ಮೇಲೆ ದಾಳಿ ನಡೆಸಿದ ವೇಳೆ ಕೆಲವು ಮಹತ್ವದ ಚೀಟಿ ಹರಿದು ಹಾಕಿದ್ದಾರೆ ಅನ್ನೊ ಒಂದು ಅಂಶ ಡಿಕೆ ಗೆ ಉರುಳಾಗಿದ್ದಂತೂ ನಿಜ. ನಂತ್ರ ಅಕ್ರಮವಾಗಿ ಸಾಲ ನೀಡಿ ತೆರಿಗೆ ವಂಚನೆ ಮಾಡಿರುವ ಆರೋಪದಲ್ಲಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಒಟ್ಟು ಮೂರು ಕ್ರಿಮಿನಲ್ ಕೇಸ್‌ಗಳನ್ನು ಐಟಿ ದಾಖಲು ಮಾಡಿತ್ತು .
ಈ ನಡುವೆ ಆದಾಯ ತೆರಿಗೆ ಈಗಲ್‌ಟನ್ ರೆಸಾರ್ಟ್ ಮೇಲೆ ಐಟಿ ದಾಳಿ ನಡೆಸಿದಾಗ ಅಧಿಕಾರಿಗಳ ಎದುರೇ ಹಣಕಾಸು ವ್ಯವಹಾರದ ಚೀಟಿ ಹರಿದು ಹಾಕಿರುವುದನ್ನು ಸಚಿವ ಡಿ.ಕೆ ಶಿವಕುಮಾರ್ ಅವರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಸಹ ಐಟಿ ಹೇಳಿಕೊಂಡಿತ್ತು. ಆಗ ಡಿಕೆ ವಿರುದ್ದ ಆದಾಯ ತೆರಿಗೆ ಇಲಾಖೆ ಕಾಯಿದೆ 276 ಸಿ(1) ಉದ್ದೇಶಪೂರ್ಕವಾಗಿ ತೆರಿಗೆ ವಂಚನೆ ಹಾಗೂ ಐಪಿಸಿ ಕಲಂ 201 ಸಾಕ್ಷ್ಯನಾಶ ಮತ್ತು 204 ದಾಖಲೆ ನಾಶ ಅನ್ವಯ ಪ್ರಕರಣ ದಾಖಲು ಮಾಡಿ ಈ ಕೇಸ್ ಗಳಲ್ಲಿ ಡಿಕೆ ಶಿವಕುಮಾರ್ ಅರೋಪಿ ಎಂದು ಹೇಳಿತ್ತು ಐಟಿ.
ಇಷ್ಟು ಮಾತ್ರವಲ್ಲಾ ಅಂದು ಐಟಿ ದಾಳಿ ನಡೆಸಿದ್ದ 80 ಕಡೆಯಲ್ಲಿ ಸಾಕಷ್ಟು ಜನರು ಒಳಗೊಂಡಿದ್ರು, ಅಂದ್ರೆ ಕೆ ಶಿವಕುಮಾರ್ ಅವರ ಮನೆ, ಸಂಬಂಧಿಕರು, ಸ್ನೇಹಿತರು, ಉದ್ಯಮದ ಪಾಲುದಾರರು ಹೀಗೆ ಹಲವು ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ತನಿಖೆ ವೇಳೆ ತೆರಿಗೆ ವಂಚನೆ ಕುರಿತು ಮಾಹಿತಿ ಸಂಗ್ರಹಿಸಿದಾಗ ಉದ್ದೇಶಪೂರ್ವಕವಾಗಿ ತೆರಿಗೆ ವಂಚಿಸಲು ಬೇನಾಮಿ ವಹಿವಾಟು ಹಾಗೂ ಕೋಟ್ಯಾಂತರ ರೂ. ನಗದು ವಹಿವಾಟು ನಡೆಸಿರುವುದು ಕಂಡು ಬಂದಿದೆ. ಅಲ್ಲದೇ, ದಾಳಿ ವೇಳೆ ಚೀಟಿಗಳನ್ನು ಹರಿದು ಹಾಕಿದ್ದರು. ದಾಳಿ ವೇಳೆ ಸಿಕ್ಕ ಮಾಹಿತಿ ಹಾಗೂ ಖುದ್ದಾಗಿ ವಿಚಾರಣೆ ನಡೆಸಿದಾಗ ದಾಖಲಿಸಿದ ಹೇಳಿಕೆ ಆಧರಿಸಿ ವರದಿ ಸಿದ್ದಪಡಿಸಿದ್ದರು. ನಂತರ ಕ್ರಿಮಿನಲ್ ಕೇಸ್ ಹಾಗೂ ಐಟಿ ಕಾಯ್ದೆ ಅನ್ವಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಐಟಿ ಇಲಾಖೆಯ ತನಿಖಾ ವಿಭಾಗದ ನಿರ್ದೇಶಕರು ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದರು. ಬಳಿಕವಷ್ಟೇ ಐಟಿ ಇಲಾಖೆ ಉಪ ನಿರ್ದೇಶಕರು, ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿ ದಾಖಲೆಗಳ ಪರಿಶೀಲನೆ ನಡೆಸಿದ ನ್ಯಾಯಾಧೀಶರು, ಡಿ.ಕೆ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಲು ಒಪ್ಪಿಗೆ ನೀಡಿದ್ದರು. ಇದೆಲ್ಲಾ ಕಳೆದು ಈಗ 5 ವರ್ಷ ಕಳೆದಿದೆ, ಅದ್ರೆ ಅಂದು ಐಟಿ ಇಲಾಖೆ ಲೆಕ್ಕಾಚಾರ ಹಾಕಿ ನೀಡಿದ್ದ ಒಂದು ಪಟ್ಟಿ ಮಾತ್ರ ಡಿಕೆಗೆ ಇನ್ನೂ ತಲೆ ನೋವಾಗಿದೆ . ಅದೇ ಲೆಕ್ಕಾಚಾರ ಮುಂದೆ ಇ.ಡಿ, ಆನಂತ್ರ ಸಿಬಿಐ ನಲ್ಲಿ ದಾಖಲಾಗಿದ್ದ ಕೇಸ್ ಎಲ್ಲದಕ್ಕೂ ಮೂಲ .
ಅಂದು ಐ ಟಿ ನಡೆಸಿದ್ದ ತನಿಖೆ ವೇಳೆ ಡಿ.ಕೆ ಶಿವಕುಮಾರ್ ಅವರು ಕೈಜಾನ್ ಹೆಸರಿನ ಕೇಬಲ್ ಸಂಸ್ಥೆಗೆ 5 ಕೋಟಿ ರೂ. ಸಾಲವನ್ನು ನೀಡಿದ್ದರು. ಅದನ್ನು ಹಿಂಪಡೆಯಬೇಕು ಎಂದು ಚೀಟಿಯೊಂದರಲ್ಲಿ ಬರೆಯಲಾಗಿತ್ತು. ಡಿ.ಕೆ ಶಿವಕುಮಾರ್ ಅವರೊಂದಿಗೆ ಅನಧಿಕೃತವಾಗಿ ಹಣಕಾಸು ವಹಿವಾಟು ನಡೆಸಿ ಸಾಲ ಪಡೆದಿರುವ ಕೈಜಾನ್ ಸಂಸ್ಥೆಯ ಶಶಿಕಾಂತ್, 2015ರ ಜನವರಿಯಿಂದ 2016ರ ನವೆಂಬರ್‌ವರೆಗೆ 1 ಕೋಟಿ 10 ಲಕ್ಷ ರೂ.ಯನ್ನು ಮರಳಿಸಿದ್ದಾರೆ. ಆರೋಪಿ ಡಿ.ಕೆ ಶಿವಕುಮಾರ್ ಹಾಗೂ ಸಾಲ ಪಡೆದ ವ್ಯಕ್ತಿಯ ಮನೆ ಮೇಲೆ ದಾಳಿ ನಡೆಸಿದ ವೇಳೆ ಸಾಲ ವಹಿವಾಟಿನ ಕುರಿತು ದಾಖಲೆಗಳು ಲಭಿಸಿವೆ ಎಂದು ಐಟಿ ಅರೋಪಿಸಿತ್ತು. ಇಷ್ಟಲ್ಲದೇ ಇ ಇನ್ಫ್ರಾಸ್ಟ್ರಕ್ಚರ್ ಆ್ಯಂಡ್ ಎಂಟರ್‌ಟೈನ್‌ಮೆಂಟ್‌ನ ಮಾಲೀಕ ಎನ್ನಲಾಗಿರುವ ಸೋಮಶೇಖರ್ ಹಾಗೂ ಡಿ.ಕೆ ಶಿವಕುಮಾರ್ ಅವರ ಆಪ್ತ ಸಚಿನ್ ನಾರಾಯಣ ನಡುವೆ ವ್ಯವಹಾರ ಹಾಗೂ ಹಣಕಾಸಿನ ಒಪ್ಪಂದವಾಗಿದೆ.
ಅದರಂತೆ ಸಚಿನ್ ನಾರಾಯಣ ಅವರು 2016ರಲ್ಲಿ ಸೋಮಶೇಖರ್ ಅವರಿಗೆ 15.50 ಕೋಟಿ ರೂ. ಸಾಲ ನೀಡಿದ್ದಾರೆ. ಈ ವಿಚಾರವನ್ನು ಸಚಿನ್ ನಾರಾಯಣ್ ಮನೆ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದಾಗ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಸೋಮಶೇಖರ್ ಮನೆ ಮೇಲೆ ದಾಳಿ ನಡೆಸಿ ನಂತರ ವಿಚಾರಣೆ ನಡೆಸಿದಾಗ 7.75 ಕೋಟಿ ರೂ.ಯನ್ನು ಚೆಕ್ ರೂಪದಲ್ಲಿ ಉಳಿದ ಹಣವನ್ನು ನಗದು ರೂಪದಲ್ಲಿ ಅನಧಿಕೃತವಾಗಿ ಸ್ವೀಕರಿಸಿರುವುದಾಗಿ ಸೋಮಶೇಖರ್ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಡಿ.ಕೆ ಶಿವಕುಮಾರ್ ಅವರ ಜತೆ ಒಡನಾಟ ಇದೆ ಎಂಬುದನ್ನು ಇಬ್ಬರು ಒಪ್ಪಿಕೊಂಡಿದ್ದಾರೆ. ಅದ್ರೆ ಕೋಟ್ಯಂತರ ರೂ. ಸಾಲ ನೀಡಿರುವ ಕುರಿತು ಡಿ.ಕೆ ಶಿವಕುಮಾರ್ ಅವರು ತಮ್ಮ ಅಕೌಂಟ್ ಪುಸ್ತಕದಲ್ಲಿ ನಮೂದಿಸಿಲ್ಲ. ಅಲ್ಲದೇ, 2015-16ನೇ ಸಾಲಿನಲ್ಲಿ ಸಲ್ಲಿಸಿರುವ ಇನ್‌ಕಂ ಟ್ಯಾಕ್ಸ್ ರಿಟರ್ನ್‌ನಲ್ಲೂ ಉಲ್ಲೇಖಿಸಿಲ್ಲ ಎಂದು ಅರೋಪ ಮಾಡಿತ್ತು., ಜೊತೆಗೆ ದಾಖಲೆ ಜಪ್ತಿ ಮಾಡಿರುವ ಪ್ರಕಾರ 2015-16ನೇ ಸಾಲಿನಲ್ಲಿ ಡಿ.ಕೆ ಶಿವಕುಮಾರ್ ಅವರು ನಗದು ರೂಪದಲ್ಲಿ ಮೂರು ಕೋಟಿ ರೂ. ಸಾಲ ಕೊಟ್ಟಿದ್ದು ಆದಾಯದ ಮೂಲ ಹಾಗೂ ಇನ್ನಿತರ ವಿವರಗಳನ್ನು ವಿವರಿಸಿಲ್ಲ. ಅಲ್ಲದೇ ಅದೇ ವರ್ಷದಲ್ಲಿ 14 ಲಕ್ಷ ರೂ. ಬಡ್ಡಿಯನ್ನು ಸ್ವೀಕರಿಸಿದ್ದು, ಅದರ ಬಗ್ಗೆಯು ಯಾವುದೇ ವಿವರಣೆಯನ್ನು ನೀಡಿಲ್ಲ ಹಾಗೂ ಐಟಿ ರಿಟರ್ನ್ ವೇಳೆ ತಿಳಿಸಿಲ್ಲ. ಹೀಗೆ ಸಾಲು ಸಾಲು ಅರೋಪಗಳನ್ನು ಐಟಿ ಮಾಡಿತ್ತು
ಈ ಮೇಲಿನ ಎಲ್ಲಾ ಅರೋಪಗಳಿಗಿಂತ ಬಹು ಮುಖ್ಯವಾಗಿ ಡಿಕೆ ಶಿವಕುಮಾರ್ 2013ರ ಚುನಾವಣೆ ಅಫಿಡವಿಟ್ ನಲ್ಲಿ ನೀಡಿದಂತೆ ಅಂದ್ರೆ 01.04.2013 ದಿನಾಂಕದ ವರೆಗೆ ಡಿಕೆ ಶಿವಕುಮಾರ್ ಅವ್ರ ಕುಟುಂಬ 33,92,62,793 ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿತ್ತು, ಅದ್ರೆ 01.04.2013 ರಿಂದ 30.04.2018 ರ ಅವಧಿಯಲ್ಲಿ 28,60,81,700/ ಮತ್ತು ಕೊನೆಗೆ 30.04.2018 ರಂತೆ ರೂ. 162,53,44,494 ಅಗಿತ್ತು, ಅಲ್ಲಿಗೆ ಈ ಅವಧಿಯಲ್ಲಿ ಅವರ ಒಟ್ಟು ಆದಾಯ ಮತ್ತು ಸ್ವೀಕೃತಿಗಳು 166,79,58,216/- ಮತ್ತು ಅವರ ಒಟ್ಟು ವೆಚ್ಚವು ರೂ. 113,12,16,585/ ಅಗಿತ್ತು. ಅದ್ರೆ ಈ ಲೆಕ್ಕದ ಪ್ರಕಾರ ಅವರು ರೂ. 74,93,40,069 ಅಂದ್ರೆ 44.93 % ಆದಾಯ ಲೆಕ್ಕಕ್ಕೆ ಮೀರಿದ್ದು ಅಥವಾ ಆದಾಯಕ್ಕೆ ಮೀರಿ ಗಳಿಸಿದ್ದ ಆಸ್ತಿ ಎಂದು ಐಟಿ ನಡೆಸಿದ್ದ ತನಿಖೆ ವೇಳೆ ಪತ್ತೆಯಾಗಿತ್ತು ಎಂದು ಅರೋಪ ಇತ್ತು. ಇಲ್ಲಿಗೆ ಇನ್ನೇನು ಐಟಿ ತನಿಖೆ ಒಂದು ಹಂತಕ್ಕೆ ಮುಗಿಯತ್ತೆ ಅನ್ನೊ ಸಮಯದಲ್ಲಿ ಇಡಿ ಕೆಲಸ ಶುರು ಮಾಡಿತ್ತು ….
ಐ ಟಿ ತನಿಖೆ ನಡೆಸಿದ್ದ ವೇಳೆ ಇಡಿಗೆ ಮಾಹಿತಿ ರವಾನೆ ಮಾಡಿತ್ತು. ಐಟಿಯಿಂದ ನಡೆದ ತನಿಖೆ ವೇಳೆ ಡಿಕೆ ಅಂಡ್ ಟೀಂ ಮನಿ ಲಾಂಡರಿಂಗ್ ಮಡಿದ್ದಾರೆ ಅನ್ನೊ ಅಂಶವನ್ನು ಇ.ಡಿ ಗಮನಕ್ಕೆ ತಂದಿತ್ತು. ಈ ಮಾಹಿತಿ ಅನ್ವಯ ಇಡಿ ಹೊಸ ಇನ್ನಿಂಗ್ಸ್ ಶುರು ಮಾಡಿತ್ತು. ಜಾರಿ ನಿರ್ದೇಶನಾಲಯದ ಸ್ಪೆಷಲ್ ಡೈರೆಕ್ಟರ್ ನವದೆಹಲಿ ಅವರು 09/09/2019 ರಂದು ECIR ನಂಬರ್ 04/HQ/2018 ಕೇಸ್ ದಾಖಲು ಮಾಡಿದ್ರು .
ಈ ಹಿಂದೆ 1961 ರ ಆದಾಯ ತೆರಿಗೆ ಕಾಯಿದೆಯ 276C(1),277 & 278 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹಚರರ ವಿರುದ್ಧ ಆದಾಯ ತೆರಿಗೆ ಪ್ರಾಧಿಕಾರವು ಸಲ್ಲಿಸಿದ ಪ್ರಾಸಿಕ್ಯೂಷನ್ ದೂರಿನ ಅನ್ವಯ ಅಪರಾಧದ ಆದಾಯವನ್ನು ಬಹಿರಂಗಪಡಿಸಲು PMLA, r/w ಸೆಕ್ಷನ್ 1919 (ಬಿ) & 278 ಆದಾಯ ತೆರಿಗೆ ಕಾಯಿದೆ, 1961 ಆರ್/ಡಬ್ಲ್ಯೂ ಸೆಕ್ಷನ್ 193,199 ಮತ್ತು 120(ಬಿ) ಭಾರತೀಯ ದಂಡ ಸಂಹಿತೆ, 1960 ಅಡಿಯಲ್ಲಿ ತನಿಖೆ ನಡೆಸಿದ್ರು, ತನಿಖೆ ನಂತ್ರ 58 ಪುಟಗಳ ಚಾರ್ಜ್ ಶೀಟ್ ಅನ್ನು ಇಡಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ತನಿಖೆ ವೇಳೆ ಇ.ಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ರನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದ್ರು. ದೆಹಲಿಯ ತಿಹಾರ್ ಜೈಲಿನಲ್ಲಿ ಡಿಕೆ ಶಿವಕುಮಾರ್ ರನ್ನು ಇಡಲಾಗಿತ್ತು. ಹಲವಾರು ದಿನಗಳ ಕಾಲ ಜೈಲಿನಲ್ಲಿ ಡಿಕೆ ಇದ್ದರೂ ಈ ಸಮಯಲ್ಲಿ ಇಡಿ ತನ್ನ ತನಿಖೆ ಮೂಲಕ ಡಿ ಕೆ ಶಿವಕುಮಾರ್ ಮನಿ ಲಾಂಡರಿಂಗ್ ಹವಾಲ ನಡೆಸಿದ್ದಾರೆ ಎಂದು ಅರೋಪಿಸಿತ್ತು .
ಡಿಕೆಶಿ ಆಪ್ತ ಸುರೇಶ್ ಶರ್ಮಾ ಫ್ಲ್ಯಾಟ್‌ನಲ್ಲೇ ಮನಿ ಲ್ಯಾಂಡ್ರಿಂಗ್ ನಡೀತಿತ್ತು , ಡಿಕೆಶಿ ಸೂಚನೆಯಂತೆಯೇ ಕೋಟಿ ಕೋಟಿ ಹಣ ಸಾಗಾಟವಾಗಿತ್ತು ಎಂದು ಇಡಿ ಅರೋಪಿಸಿತ್ತು ಇನ್ನು 1 ಕೋಟಿ, 2 ಕೋಟಿ, 1.5 ಕೋಟಿ ಹೀಗೆ ಹಲವು ಬಾರಿ ಸಾಗಾಟವಾಗಿದ್ದು, ಏನೇ ಬಂದ್ರೂ ನಾನಿದ್ದೇನೆ ಡೋಂಟ್ ವರಿ ಅಂತಾ ಡಿ.ಕೆ ಶಿವಕುಮಾರ್ ಹೇಳಿದ್ರಂತೆ. ಈ ಮಹತ್ವದ ಅಂಶಗಳನ್ನು ಇಡಿ ತನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ. ಅಲ್ಲದೇ, ಹವಾಲಾ ದಂಧೆ ಬಗ್ಗೆ ಸುನಿಲ್, ಆರೋಪಿ ಆಂಜನೇಯ ಬಳಿ ದಾಖಲೆ ವಶಪಡಿಸಿಕೊಂಡಿರೋ ಇಡಿ ಅಧಿಕಾರಿಗಳಿಗೆ, ರಾಜೇಂದ್ರ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಹವಾಲ ಸಾಕ್ಷ್ಯಗಳು ಸಿಕ್ಕಿದ್ದವಂತೆ. ಸುನಿಲ್, ಚಂದ್ರಶೇಖರ್ ಆದೇಶದಂತೆ ಎಲ್ಲಾ ವ್ಯವಹಾರಗಳು ನಡೀತಿದ್ವು ಅಂತಾ ಡೈರಿಯಲ್ಲಿ ಹವಾಲ ಡೀಲ್ ಕುರಿತ ಮಾಹಿತಿ ಉಲ್ಲೇಖವಾಗಿತ್ತು ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿತ್ತು.
ಈ ಹವಾಲ ದಂಧೆ ನಡೆಸಲು ಕೋಡ್ ವರ್ಡ್ ಬಳಸಿ ಲಕ್ಷ ಲಕ್ಷ ರೂಪಾಯಿ ಹವಾಲಾ ದಂಧೆ ಮಾಡಲಾಗಿತ್ತು. ಈ ಬಗ್ಗೆ ಸುನಿಲ್, ರಾಜೇಂದ್ರ ಮೊಬೈಲ್ ನಲ್ಲೂ ಕೋಡ್ ವರ್ಡ್ ಪತ್ತೆಯಾಗಿದ್ದು, KG ಕೋಡ್ ವರ್ಡ್ ಬಳಸಿ ಹವಾಲ ವ್ಯವಹಾರ ಮಾಡಿದ್ದಾರೆ ಅಂತಾ ಇಡಿ ಅಧಿಕಾರಿಗಳು ಉಲ್ಲೇಖಿಸಿದ್ದರು ಅಂದ್ರೆ ಹಣಕ್ಕೆ 1 ಕೆ ಜಿ ಎಂದು ಕೋಡ್ ವರ್ಡ್ ಬಳಕೆ ಎಂದು ಹೇಳಿತ್ತು ಇಡಿ . ಅಲ್ಲದೇ, ಆರೋಪಿ ಆಂಜನೇಯಗೆ ವಾರಕ್ಕ ಒಂದರಿಂದ ಒಂದೂವರೆ ಲಕ್ಷ ಹಣವನ್ನ ವಹಿವಾಟಿಗೆಂದೆ ಡಿಕೆಶಿ ನೀಡ್ತಿದ್ರು ಅನ್ನೋದನ್ನು ನಮೂದಿಸಿತ್ತು. ಸುನಿಲ್ ಶರ್ಮಾ ದಿಲ್ಲಿ ಮನೆಯಲ್ಲೇ ಹಣವಿಟ್ಟಿದ್ರು. ಡಿಕೆಶಿಗಾಗಿ ಹವಾಲ ದಂಧೆ ಎಂದಿದ್ದ ಸುನಿಲ್ ಶರ್ಮಾ ಹೇಳಿಕೆಯನ್ನ ಜಾರ್ಜ್‌ಶೀಟ್ ಕಂಪ್ಲೀಟ್ ಆಗಿ ತಿಳಿಸಲಾಗಿದೆ. ಅಲ್ಲದೇ, ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕ 6.61 ಕೋಟಿ ಡಿಕೆಶಿಯದ್ದೇ ಅಂತಾನೂ ಇಡಿ ಅರೋಪಿಸಿತ್ತು.
ಮೊದಲ ಹಂತದಲ್ಲಿ ಇ.ಡಿ ತನಿಖೆ ವೇಳೆ ಸಿಕ್ಕ ಹಣವೆಲ್ಲಾ ತನ್ನದಲ್ಲಾ ಎಂದು ಡಿಕೆ ಹೇಳಿದ್ರು ಜೊತಗೆ ಆಪ್ತರು ಸಹ ಇದೆಲ್ಲಾ ನಮ್ಮದೆ ಅನ್ನೊ ಹುಂಬುತನದಲ್ಲಿ ಇದ್ರು ಅದ್ರೆ ಇಡಿ ದಾಳಿಯ ನಂತ್ರ ಡಿಕೆಶಿ ಅತ್ಯಾಪ್ತನಾಗಿದ್ದ ಸಚಿನ್ ನಾರಾಯಣ್, ರಾಜೇಂದ್ರ, ಆಂಜನೇಯ ಸುನಿಲ್ ಶರ್ಮಾ ಸಿಕ್ಕಿದ್ದ ಹಣ ಡಿಕೆಶಿಯದ್ದೇ ಅಂತಾ ಹೇಳಿದ್ರು. ಆದ್ರೆ, 7 ತಿಂಗಳ ಬಳಿಕ ಕೊಟ್ಟಿದ್ದ ಹೇಳಿಕೆಯನ್ನ ಹಿಂಪಡೆದಿದ್ರು. ಸಿಕ್ಕ ಹಣವೆಲ್ಲಾ ನಮ್ಮದೇ ಎಂದಿದ್ರು. ಈ ಅಂಶ ಉಲ್ಲೇಖಿಸಿರುವ ಇಡಿ, ಆರೋಪಿಗಳ ಮೇಲೆ ಡಿಕೆಶಿ ಪ್ರಭಾವ ಬೀರಿದ್ರು ಅಂತಾ ಚಾರ್ಜ್‌ಶೀಟ್‌ನಲ್ಲಿ ಅರೋಪಿಸಿತ್ತು . ಇಷ್ಟೆಲ್ಲಾ ಆಗಿದ್ದ ಬಳಿಕ 2020 ರಲ್ಲಿ ಸಿಬಿಐ ಡಿಕೆ ಕುತ್ತಿಗೆಗೆ ಕೈ ಹಾಕಿತ್ತು
ಸಿಬಿಐ ಈ ಹಿಂಡೆ ಐ ಟಿ ಮತ್ತು ಇಡಿ ನಡೆಸಿದ್ದ ತನಿಖಾ ಸಂಪೂರ್ಣ ಮಾಹಿತಿಯನ್ನು ಪಡೆದಿತ್ತು ಅದ್ರಲ್ಲು ಡಿಕೆ ಶಿವಕುಮಾರ್ ಸರ್ಕಾರದ ಪವರ್ ಮಿನಿಸ್ಟರ್ ಅಗಿದ್ದ ಸಮಯದಲ್ಲಿ ಸಾಕಷ್ಟು ಅಕ್ರಮ ಮಾಡಿದ್ದಾರೆ ಭ್ರಷ್ಟಾಚಾರ ಮಾಡಿ ಹಣ ಮಾಡಿದ್ದಾರೆ. ಹೀಗಾಗಿ ತನಿಖೆ ನಡೆಸಬಹುದು ಎಂದು ಇ.ಡಿ ಸಹ ಸಿಬಿಐ ಗೆ ಒಂದು ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ ಸಿಬಿಐ ಕರ್ನಾಟಕ ಸರ್ಕಾರಕ್ಕೆ ಡಿಕೆ ಶಿವಕುಮಾರ್ ವಿರುದ್ದ DSPE ಆಕ್ಟ್ 1946 ರ ಸೆಕ್ಷನ್ 5 ರ ಅಡಿ ಭ್ರಷ್ಟಾಚಾರ ತಡೆ ಕಾಯ್ದೆಯ ಎಲ್ಲಾ ಉದ್ದೇಶಿತ ಉಲ್ಲಂಘನೆಗಳ ವಿಚಾರಣೆ ನಡೆಸಲು ಅನುಮತಿಗೆ ಪತ್ರ ಬರೆದಿತ್ತು. ಪತ್ರಕ್ಕೆ 27.02.2020 ರಂದು ಕರ್ನಾಟಕ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು.
ಸಿಬಿಐ ಮತ್ತೆ ಕೆದಕಿದ್ದು ಅದೇ ಹಳೆ ಕಥೆಯನ್ನು ಡಿಕೆ ಶಿವಕುಮಾರ್ 2013ರ ಚುನಾವಣೆ ಅಫಿಡವಿಟ್ ನಲ್ಲಿ ನೀಡಿದಂತೆ ಅಂದ್ರೆ 01.04.2013 ದಿನಾಂಕದ ವರೆಗೆ ಡಿಕೆ ಶಿವಕುಮಾರ್ ಅವ್ರ ಕುಟುಂಬ 33,92,62,793 ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿತ್ತು, ಅದ್ರೆ 01.04.2013 ರಿಂದ 30.04.2018 ರ ಅವಧಿಯಲ್ಲಿ 28,60,81,700/ ಮತ್ತು ಕೊನೆಗೆ 30.04.2018 ರಂತೆ ರೂ. 162,53,44,494 ಅಗಿತ್ತು, ಅಲ್ಲಿಗೆ ಈ ಅವಧಿಯಲ್ಲಿ ಅವರ ಒಟ್ಟು ಆದಾಯ ಮತ್ತು ಸ್ವೀಕೃತಿಗಳು 166,79,58,216/- ಮತ್ತು ಅವರ ಒಟ್ಟು ವೆಚ್ಚವು ರೂ. 113,12,16,585/ ಅಗಿತ್ತು ಅದ್ರೆ ಈ ಲೆಕ್ಕದ ಪ್ರಕಾರ ಅವರು ರೂ. 74,93,40,069 ಅಂದ್ರೆ 44.93% ಆಧಾಯ ಲೆಕ್ಕಕ್ಕೆ ಮೀರಿದ್ದು ಅಥವಾ ಆದಾಯಕ್ಕೆ ಮೀರಿ ಗಳಿಸಿದ್ದ ಆಸ್ತಿ ಎಂದು ಐಟಿ ನಡೆಸಿದ್ದ ತನಿಖೆ ವೇಳೆ ಪತ್ತೆಯಾಗಿತ್ತು.
ಈ ಆಸ್ತಿ ಗಳಿಸಲಿಕ್ಕೆ ಡಿಕೆ ಶಿವಕುಮಾರ್ ಭ್ರಷ್ಟಾಚಾರ ಮಾಡಿದ್ದಾರೆ ಜೊತೆಗೆ ರೂ. 74,93,40,069 ಅಂದ್ರೆ 44.93% ಬಗ್ಗೆ ಸಿಬಿಐ ಪ್ರಶ್ನೆ ಮಾಡಿದ್ದ ಸಮಯದಲ್ಲಿ ಡಿಕೆ ಶಿವಕುಮಾರ್ ಗೆ ಇದು ಭ್ರಷ್ಟಾಚಾರ ಮಾಡಿ ಸಂಪಾದನೆ ಮಾಡಿದ್ದು ಅಲ್ಲಾ ಬದಲಾಗಿ ತಾನು ಕೃಷಿಯಿಂದ ದುಡಿದಿದ್ದು ಎಂದು ಹೇಳಿದ್ದರಾದ್ರು ಅದಕ್ಕೆ ಯಾವುದೇ ದಾಖಲೆ ನೀಡಿಲ್ಲಾ, ಹೀಗಾಗಿ ಡಿಕೆ ನೀಡಿದ್ದ ಉತ್ತರಗಳು ಸಿಬಿಐ ನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಮಾಧಾನ ಅಗಿರದ ಕಾರಣ ಕೇಸ್ ಮಾಡಿ ತನಿಖೆ ಶುರು ಮಾಡಿದ್ರು , ಕೇಸ್ ದಾಖಲು ಮಾಡಿದ್ದ ಸಮಯದಲ್ಲಿ 14 ಕಡೆ ದಾಳಿ ಮಾಡಿದ್ರು ಬಳಿಕ ಮತ್ತು ಡಿಕೆಶಿ ಸ್ವಂತ ಊರಾದ ಕನಕಪುರದ ನಿವಾಸಕ್ಕೂ ಭೇಟಿ ನೀಡಿದ್ರು ಈ ವೇಳೆ ಡಿಕೆಶಿ ಅವ್ರ ಆಸ್ತಿಯ ಮೌಲ್ಯ ಮಾಪನವನ್ನು ತಹಶೀಲ್ದಾರರಿಂದ ಮಾಡಿಸಿತ್ತು ಸಿಬಿಐ.
ಡಿಕೆ ಮೇಲಿನ ತನಿಖೆ ಮುಂದಿನ ಭಾಗವಾಗಿ ನಿನ್ನೆ ಸಿಬಿಐ ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಆಸ್ತಿ ಮೌಲ್ಯಮಾಪನ ಕಾರ್ಯ ಮಾಡಿದೆ. ಇಂದು ಬೆಂಗಳೂರಿನ ಆರ್.ಆರ್. ನಗರದಲ್ಲಿರೋ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಮೇಲೆ ಸಿಬಿಐ ದಾಳಿ ನಡೆಸಿದೆ. ಡಿಕೆ ಶಿವಕುಮಾರ್ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಚೇರ್ಮನ್ ಆಗಿದ್ದು, ಡಿಕೆಶಿ ಪುತ್ರಿ ಐಶ್ವರ್ಯ ನ್ಯಾಷನಲ್ ಎಜುಕೇಷನ್ ಫೌಂಡೇಶನ್ನ ಕಾರ್ಯದರ್ಶಿ ಆಗಿದ್ದಾರೆ. ಇಂದು ಸಿಬಿಐ ಅಧಿಕಾರಿಗಳು ಡಿಕೆಶಿ ಮತ್ತು ಪುತ್ರಿ ಐಶ್ವರ್ಯಗೆ ಸೇರಿದ ಆಸ್ತಿಗಳ ಮೌಲ್ಯಮಾಪನ ಕಾರ್ಯ ನಡೆಸಿದ್ದಾರೆ.
ವರದಿ: ಕಿರಣ್ ಹೆಚ್ ವಿ