ಬೆಂಗಳೂರಿನಿಂದ ಜೆದ್ದಾ, ರಿಯಾದ್ ಮತ್ತು ಕುವೈತ್​ಗೆ ಏರ್ ಇಂಡಿಯಾ ಎಕ್ಸ್​ಪ್ರೆಸ್ ನೇರ ವಿಮಾನ: ಟಿಕೆಟ್ ದರ ವಿವರ ಇಲ್ಲಿದೆ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಜೆದ್ದಾ, ರಿಯಾದ್ ಮತ್ತು ಕುವೈತ್‌ಗೆ ಅಕ್ಟೋಬರ್ 26 ಮತ್ತು 27 ರಿಂದ ನೇರ ವಿಮಾನ ಸೇವೆ ಆರಂಭಿಸುತ್ತಿದೆ. ದಕ್ಷಿಣ ಭಾರತದಿಂದ ಮಧ್ಯಪ್ರಾಚ್ಯ ಪ್ರಯಾಣವನ್ನು ಸುಗಮಗೊಳಿಸುವ ಈ ಹೊಸ ವಿಮಾನಗಳು ಬೆಂಗಳೂರು ನಿವಾಸಿಗಳಿಗೆ ಹೆಚ್ಚಿನ ಅನುಕೂಲ ನೀಡಲಿವೆ. ಟಿಕೆಟ್‌ ದರ ಹಾಗೂ ಇತರ ಮಾಹಿತಿ ಇಲ್ಲಿದೆ.

ಬೆಂಗಳೂರಿನಿಂದ ಜೆದ್ದಾ, ರಿಯಾದ್ ಮತ್ತು ಕುವೈತ್​ಗೆ ಏರ್ ಇಂಡಿಯಾ ಎಕ್ಸ್​ಪ್ರೆಸ್ ನೇರ ವಿಮಾನ: ಟಿಕೆಟ್ ದರ ವಿವರ ಇಲ್ಲಿದೆ
ಏರ್ ಇಂಡಿಯಾ ಎಕ್ಸ್​ಪ್ರೆಸ್ (ಸಾಂದರ್ಭಿಕ ಚಿತ್ರ)

Updated on: Oct 11, 2025 | 9:45 AM

ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಿನಿಂದ (Bengaluru) ಅಂತರರಾಷ್ಟ್ರೀಯ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಏರ್ ಇಂಡಿಯಾ ಎಕ್ಸ್​ಪ್ರೆಸ್ (Air India Express) ಮಹತ್ವದ ಕ್ರಮ ಕೈಗೊಂಡಿದೆ. ದಕ್ಷಿಣ ಭಾರತ ಮತ್ತು ಮಧ್ಯಪ್ರಾಚ್ಯದ ನಡುವಿನ ಪ್ರಯಾಣ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜೆದ್ದಾ, ರಿಯಾದ್ ಮತ್ತು ಕುವೈತ್​ಗೆ ಬೆಂಗಳೂರಿನಿಂದ ನೇರ ವಿಮಾನಯಾನ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ವಿಮಾನಯಾನ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಜೆದ್ದಾಗೆ ನೇರ ವಿಮಾನ ಸಂಚಾರ ಅಕ್ಟೋಬರ್ 26 ರಿಂದ ಪ್ರಾರಂಭವಾಗಲಿದೆ. ರಿಯಾದ್ ಮತ್ತು ಕುವೈತ್‌ಗೆ ನೇರ ವಿಮಾನ ಸಂಚಾರ ಅಕ್ಟೋಬರ್ 27 ರಿಂದ ಪ್ರಾರಂಭವಾಗಲಿದೆ.

ಬೆಂಗಳೂರಿನಿಂದ ಜೆದ್ದಾ, ರಿಯಾದ್, ಕುವೈತ್​ಗೆ ನೇರ ವಿಮಾನ ಟಿಕೆಟ್ ದರ ಎಷ್ಟು?

  • ಬೆಂಗಳೂರಿನಿಂದ ರಿಯಾದ್‌ಗೆ: 13,500 ರೂ.ನಿಂದ ಪ್ರಾರಂಭ
  • ಬೆಂಗಳೂರಿನಿಂದ ಜೆದ್ದಾಗೆ: 19,500 ರೂ.ನಿಂದ ಪ್ರಾರಂಭ
  • ಬೆಂಗಳೂರಿನಿಂದ ಕುವೈತ್‌ಗೆ: 13,600 ರೂ.ನಿಂದ ಪ್ರಾರಂಭ

ಜೆದ್ದಾ, ರಿಯಾದ್, ಕುವೈತ್​ಗೆ ನೇರ ವಿಮಾನ ಟಿಕೆಟ್ ಬುಕಿಂಗ್ ಹೇಗೆ?

ಬೆಂಗಳೂರಿನಿಂದ ಜೆದ್ದಾ, ರಿಯಾದ್, ಕುವೈತ್​ಗೆ ಏರ್ ಇಂಡಿಯಾ ಎಕ್ಸ್​​ಪ್ರೆಸ್ ನೇರ ವಿಮಾನದ ಟಿಕೆಟ್​ಗಳನ್ನು ಏರ್‌ಲೈನ್‌ನ ಅಧಿಕೃತ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು ಪ್ರಮುಖ ಪ್ರಯಾಣ ಪೋರ್ಟಲ್‌ಗಳ ಮೂಲಕ ಕಾಯ್ದಿರಿಸಬಹುದಾಗಿದೆ.

ಶೀಘ್ರ ಬೆಂಗಳೂರು ಬ್ಯಾಂಕಾಕ್ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ

ಈ ಕ್ರಮವು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಅತಿದೊಡ್ಡ ಕೇಂದ್ರವಾದ ಬೆಂಗಳೂರಿನಲ್ಲಿ ಕಾರ್ಯಾಚರಣೆ ಮತ್ತು ಸೇವೆ ವಿಸ್ತರಣೆಯ ಭಾಗವಾಗಿದೆ ಎಂದು ಕಂಪನಿ ತಿಳಿಸಿದೆ. ವಿಮಾನಯಾನ ಸಂಸ್ಥೆಯು ಇತ್ತೀಚೆಗಷ್ಟೇ ಕಠ್ಮಂಡು, ಅಹಮದಾಬಾದ್, ಚಂಡೀಗಢ ಮತ್ತು ಡೆಹ್ರಾಡೂನ್‌ಗಳಿಗೆ ವಿಮಾನ ಸೇವೆ ಪ್ರಾರಂಭಿಸಿದೆ. ಶೀಘ್ರದಲ್ಲೇ ಬ್ಯಾಂಕಾಕ್ (ಅಕ್ಟೋಬರ್ 18, 2025) ಮತ್ತು ಜೋಧ್‌ಪುರ ಮತ್ತು ಉದಯಪುರ (ನವೆಂಬರ್ 1, 2025) ಗಳಿಗೆ ವಿಮಾನ ಸಂಚಾರ ಆರಂಭಿಸಲಿದೆ.

ಇದನ್ನೂ ಓದಿ: ಬೆಂಗಳೂರು: ಒಂದೇ ವರ್ಷಕ್ಕೆ ಹಳ್ಳಹಿಡಿದ ‘ಸ್ಮಾರ್ಟ್ ಬಸ್ ನಿಲ್ದಾಣ’; ಮಹಿಳೆಯರ ಸುರಕ್ಷತೆಗೆ ನಿರ್ಮಿಸಿದ್ದ ನಿಲ್ದಾಣ ಅಧ್ವಾನ

ಬೆಂಗಳೂರಿನಿಂದ ವಾರಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ​ನ 440 ಕ್ಕೂ ಹೆಚ್ಚು ವಿಮಾನಗಳು ಕಾರ್ಯಾಚರಿಸುತ್ತಿವೆ. ಪ್ರಸ್ತುತ 35 ದೇಶೀಯ ಮತ್ತು 7 ಅಂತರರಾಷ್ಟ್ರೀಯ ಸ್ಥಳಗಳಿಗೆ ನೇರ ವಿಮಾನ ಸಂಚರ ಸೇವೆ ಒದಗಿಸುತ್ತಿದೆ. ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಈ ವಿಮಾನಯಾನ ಸಂಸ್ಥೆಯು 115 ವಿಮಾನಗಳ ಸಮೂಹವನ್ನು ನಿರ್ವಹಿಸುತ್ತಿದೆ. ಭಾರತ ಮತ್ತು ವಿದೇಶಗಳಲ್ಲಿ 500 ಕ್ಕೂ ಹೆಚ್ಚು ದೈನಂದಿನ ವಿಮಾನ ಹಾರಾಟ ನಡೆಸುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ