ಬೆಂಗಳೂರು, ಡಿಸೆಂಬರ್ 24: ಫೆಬ್ರವರಿ 28ರೊಳಗೆ ಎಲ್ಲಾ ನಾಮಫಲಕ ಕನ್ನಡದಲ್ಲಿರಬೇಕು. ಇಲ್ಲದಿದ್ದರೆ, ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಾಲ್ಗಳು, ಅಂಗಡಿ-ಮುಂಗಟ್ಟುಗಳು ನಾಮಫಲಕ ಬದಲಿಸಬೇಕು. ಈ ಬಗ್ಗೆ ಮಾಲ್ಗಳ ಮಾಲೀಕರ ಸಭೆ ಕರೆದು ಸೂಚನೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಅವರು ಡಿ. 27ರಂದು ಕನ್ನಡ ನಾಮಫಲಕ ಅಭಿಯಾನ ಆರಂಭಿಸುತ್ತಿದ್ದಾರೆ. ಸರ್ಕಾರದ ಆದೇಶ ಕೂಡ ಇರುವುದರಿಂದ ಇದನ್ನ ನಾವು ಗಮನವಹಿಸುತ್ತೇವೆ. ಈಗಾಗಲೇ ಮುಖ್ಯ ರಸ್ತೆ, ಉಪರಸ್ತೆಗಳ ನಾಮಫಲಕ ಸರ್ವೇ ಮಾಡಿದ್ದೇವೆ. ಯಾರು ನಿಯಮ ಪಾಲಿಸಿಲ್ಲ ಎನ್ನುವವರ ಬಗ್ಗೆ ಮಾಹಿತಿ ನೀಡಬೇಕು. ಆಯಾ ವಲಯ ಆಯುಕ್ತರಿಗೆ ಮಾಹಿತಿ ನೀಡಬೇಕು. ಒಂದಷ್ಟು ಸಮಯ ತೆಗೆದುಕೊಂಡು ಕನ್ನಡ ನಾಮಫಲಕ ಹಾಕಬೇಕು ಎಂದಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನ 8 ವಲಯಗಳ ಅಧಿಕಾರಿಗಳು ಸರಿಯಾಗಿ ಕೆಲಸಮಾಡಿಲ್ಲ. ಇದರಿಂದ ಕನ್ನಡಕ್ಕೆ ಕುತ್ತು ಬಂದಿದೆ ಅಂತಾ ಆಯುಕ್ತರ ಗಮನಕ್ಕೆ ತಂದಿದ್ದೇವೆ. ನಾವು ಸರ್ವೇ ಮಾಡಿದಾಗ ಈ ರೀತಿ ಆರೋಪ ಬಂದಿದೆ. ಅಂಗಡಿ-ಮುಂಗಟ್ಟು ಲೈಸೆನ್ಸ್ ರಿನಿವಲ್ ಮಾಡಲು ಹಣ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: New Year 2024: ಡಿ.27ರಂದು ಹೊಸ ವರ್ಷಾಚರಣೆ ಮಾರ್ಗಸೂಚಿ ಬಗ್ಗೆ ನಿರ್ಧರಿಸಲಾಗುತ್ತೆ; ಬಿಎಂಪಿ ಮುಖ್ಯ ಆಯುಕ್ತ
ಸದ್ಯ ಆಯಾ ವಲಯ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಬೇಕು. ಈಗ ಆಯುಕ್ತರು ಈ ಬಗ್ಗೆ ವಲಯ ಅಧಿಕಾರಿಗಳ ಜೊತೆ ಸಭೆ ನಡೆಸುವ ಭರವಸೆ ಕೊಟ್ಟಿದ್ದಾರೆ. ಫೆಬ್ರವರಿ 28ರ ತನಕ ಗಡುವು ತೆಗೆದುಕೊಂಡಿದ್ದಾರೆ. ಆ ಗಡುವಿನೊಳಗೆ ಕ್ರಮ ತೆಗೆದುಕೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಬಿಬಿಎಂಪಿಯ ಕಚೇರಿ ಬಳಿ ಉಪವಾಸ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಸಾಲು ಸಾಲು ರಜೆ: ಪ್ರಯಾಣಿಕರಿಂದ ದುಪ್ಪಟ್ಟು ದರ ಸುಲಿಗೆ ಮಾಡುತ್ತಿರುವ ಬಸ್ ಬುಕ್ಕಿಂಗ್ ಆ್ಯಪ್ಸ್
ಡಿ. 27ರಂದು ನಮ್ಮ ಹೋರಾಟ ನಡೆಯುತ್ತೆ. ದೇವನಹಳ್ಳಿ ಏರ್ ಪೋರ್ಟ್ನ ಸಾದರಹಳ್ಳಿ ಟೋಲ್ನಿಂದ ಪ್ರತಿಭಟನೆ ಶುರುವಾಗುತ್ತೆ. ಅಲ್ಲಿಂದ ಕಬ್ಬನ್ ಪಾರ್ಕ್ ತನಕ ಮೆರವಣಿಗೆ ನಡೆಯುತ್ತೆ. ಈ ಕಾಯ್ದೆಯನ್ನ ಪಾಲಿಕೆಯೇ ಮಾಡಿದೆ. ನಿಯಮ ಉಲ್ಲಂಘಿಸಿದವರ ಬಗ್ಗೆ ಎಷ್ಟು ಕ್ರಮ ತೆಗೆದುಕೊಂಡಿದ್ದಾರೆ, ಎಷ್ಟು ದಂಡ ಹಾಕಿದ್ದಾರೆ ಅನ್ನೋದರ ವರದಿ ಕೇಳಿದ್ದೇವೆ. ಮಾಹಿತಿ ನೀಡೋದಾಗಿ ಕಮಿಷನರ್ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ವರದಿ: ಶಾಂತ ಮೂರ್ತಿ .ಎಂ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.