ಬೆಂಗಳೂರು: ಇಬ್ಬರು ಅಂತಾರಾಜ್ಯ ಕಳ್ಳರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಬಾಷಾ(34), ಶೇಕ್ ಅಯೂಬ್(32) ಬಂಧಿತರು. ಬಂಧಿತರಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ, 2 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಸೈಯದ್, ಆಂಧ್ರ ಪ್ರದೇಶದಿಂದ ಜಾಲಿ ರೈಡ್ ಬಂದು ಬೆಂಗಳೂರಿನಲ್ಲಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದ. ಇನ್ನು ವಿಶೇಷವೆಂದರೆ ಸೈಯದ್ ಆಂಧ್ರದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಮಿಸ್ಟರ್ ಆಂಧ್ರ ಪ್ರಶಸ್ತಿ ಪಡೆದಿದ್ದಾನೆ. ಅಲ್ಲಿ ಖ್ಯಾತಿ ಪಡೆದು ಒಳ್ಳೆ ಹೆಸರು ಮಾಡಿ ನಗರಕ್ಕೆ ಬಂದು ಕುಖ್ಯಾತಿ ಪಡೆಯುವ ಕೆಲಸ ಮಾಡಿದ್ದಾನೆ.
ಆಂಧ್ರದಿಂದ ಬಂದು ನಗರದಲ್ಲಿ ಲಾಡ್ಜ್ ಮಾಡಿ ಸೈಯದ್ ಪಾರ್ಟಿ ಮಾಡ್ತಿದ್ದ. ಮಾರನೆ ದಿನ ರಸ್ತೆಗಿಳಿದು ಸರಗಳವು ಮಾಡ್ತಿದ್ದ. ಹೀಗೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾನಕಿ ಎಂಬುವವರ ಸರ ಕದ್ದಿದ್ದ. ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ. ದೂರು ಹಿನ್ನೆಲೆ ಪೊಲೀಸರು ಸಿಸಿಟಿವಿ ಜಾಡು ಹಿಡಿದು ಹೊರಟಾಗ ಸೈಯದ್ ಕದ್ದ ಬೈಕ್ ಸಿಕ್ಕಿತ್ತು. ಬೈಕ್ ಬಿಟ್ಟು ಹೋದವನು ಮತ್ತೆ ಬರ್ತಾನೆ ಎಂದು ಪೊಲೀಸರು ಬೈಕ್ ಗೆ ಜಿಪಿಎಸ್ ಅಳವಡಿಸಿದ್ದರು. ಹತ್ತು ಹದಿನೈದು ದಿನಗಳವರೆಗೂ ತಾಳ್ಮೆಯಿಂದ ಕಾದಿದ್ದ ಪೊಲೀಸರು ನಂತರ ಯಾವಾಗ ಜಿಪಿಎಸ್ ಆಕ್ಟೀವ್ ಆಯ್ತೋ ಗಿರಿನಗರ ಪೊಲೀಸರೂ ಆಕ್ಟೀವ್ ಆಗಿದ್ದರು. ಜಿಪಿಎಸ್ ನ ಫಾಲೋ ಮಾಡಿ ಕೊನೆಗೆ ವಿಶೇಷ ತಂಡದ ಬಲೆಗೆ ಮಿಸ್ಟರ್ ಆಂಧ್ರ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಮತ್ತೊಬ್ಬ ಆರೋಪಿ ಶೇಕ್ ಅಯೂಬ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕಂದಮ್ಮನ ಪ್ರಾಣ ತೆಗೆದ ಸ್ಮಾರ್ಟ್‌ಫೋನ್, ವಿಡಿಯೋ ಗೇಮ್ ಆಡುತ್ತಿದ್ದ ವೇಳೆ ಸ್ಫೋಟ
ಆಂಧ್ರ ಮೂಲದ ಆರೋಪಿಗಳು ಬೆಂಗಳೂರಿಗೆ ಬಂದು ಇಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡ್ತಿದ್ರು. ಬಳಿಕ ಅದೇ ದ್ವಿಚಕ್ರ ವಾಹನದಲ್ಲಿ ಸರಗಳ್ಳತನ ಮಾಡ್ತಿದ್ರು. ನಂತರ ದ್ವಿಚಕ್ರ ಬಿಟ್ಟು ಆಟೋ ಮೂಲಕ ಕೆ.ಆರ್.ಪುರಂಗೆ ಹೋಗಿ ಅಲ್ಲಿಂದ ಬಸ್ ಏರಿ ತಮ್ಮ ಊರಿಗೆ ಪರಾರಿಯಾಗುತ್ತಿದ್ದರು. ಸಧ್ಯ ಈ ಖತರ್ನಾಕ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಖದೀಮರು ಸರಗಳ್ಳತನ ಮಾಡಿದ ಕೂಡಲೇ ಬಟ್ಟೆ ಬದಲಿಸ್ತಿದ್ದರಂತೆ. ಸಿಸಿಟಿವಿಯಲ್ಲಿ ತಮ್ಮ ಮುಖ ತಿಳಿಯಬಾರದು. ಪೊಲೀಸರು ನಮ್ಮನ್ನು ಹಿಡಿಯಬಾರದೆಂದು ನಾನಾ ರೀತಿಯ ತಯಾರಿ ಮಾಡಿಕೊಂಡಿದ್ದರು. ಆದ್ರೆ ಸಿನಿಮೀಯ ರೀತಿಯಲ್ಲಿ ಖಾಕಿ ಆರೋಪಿಗಳ ಹೆಡೆಮುರಿ ಕಟ್ಟಿದೆ. ಸಿಸಿಟಿವಿ ಪರಿಶೀಲನೆ ವೇಳೆ ಸಿಕ್ಕ ಕದ್ದ ಬೈಕ್ನ ಸುಳಿವಿನಿಂದ ಮಿಸ್ಟರ್ ಆಂಧ್ರ ಸಿಕ್ಕಿಬಿದ್ದಿದ್ದಾನೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:29 pm, Tue, 25 April 23