ಬೆಂಗಳೂರು: ಐಪಿಎಲ್ ಪಂದ್ಯಾವಳಿ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಇದೇ ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ಕಟ್ಟಿ ದಂಧೆ ನಡೆಸುತ್ತಿದ್ದ ಜಾಲ ಪತ್ತೆಯಾಗಿದೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಸಂಬಂಧ 30ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡ ಸಿಸಿಬಿ ಪೊಲೀಸರು 160 ಮಂದಿಯನ್ನು ಬಂಧಿಸಿ 62 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ.
ಬೆಟ್ಟಿಂಗ್ ದಂಧೆ ಸಂಬಂಧ ನಗರದ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೂ ಹಲವು ಗ್ಯಾಂಬ್ಲರ್ಗಳ ಮೇಲೆ ಸಿಸಿಬಿ ಪೊಲೀಸರು ನಿಗಾ ಇಟ್ಟಿದ್ದಾರೆ. ಐಪಿಎಲ್ ಪಂದ್ಯ ನಡೆಯುವ ದಿನ ಆನ್ಲೈನ್ ಮತ್ತು ವಿವಿಧ ಆ್ಯಪ್ಗಳ ಮೂಲಕ ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟುತ್ತಿದ್ದರು. ದಂಧೆಕೋರರು ಬಾಲ್ ಟು ಬಾಲ್ ಬೆಟ್ಟಿಂಗ್ ಕಟ್ಟುತ್ತಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ವಿವಿಧ ಠಾಣೆಗಳಲ್ಲಿ ಒಟ್ಟು 35 ಪ್ರಕರಣಗಳನ್ನು ದಾಖಲಿಸಿ ತನಿಖೆಗೆ ಆರಂಭಿಸಿದ್ದರು. ಅದರಂತೆ ದಂಧೆಯಲ್ಲಿ ತೊಡಗಿದ್ದ 160 ಮಂದಿಯ ಸಹಿತ ಬೆಟ್ಟಿಂಗ್ಗೆ ಬಳಕೆ ಮಾಡಿದ್ದ 62 ಲಕ್ಷ ರೂ. ನಗದನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಇನ್ನೂ ಹಲವು ಗ್ಯಾಂಬ್ಲರ್ಗಳ ಮೇಲೆ ನಿಗಾ ಇಡಲಾಗಿದೆ.
ಇತ್ತೀಚೆಗಷ್ಟೇ ಮೈದಾನದಲ್ಲೇ ಕೂತು ಸೆಕೆಂಡ್ ಲೆಕ್ಕದಲ್ಲಿ ಬೆಟ್ಟಿಂಗ್ ಮಾಡುತ್ತಿದ್ದ ನಾಲ್ವರಿದ್ದ ಗ್ಯಾಂಗ್ ಒಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ದೇಶದ ಯಾವುದೇ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದರೂ ಅಲ್ಲಿಗೆ ಈ ಗ್ಯಾಂಗ್ ಹೋಗುತ್ತಿತ್ತು. ಮೈದಾನದಲ್ಲೇ ಕೂತು ಕೋಟ್ಯಾಂತರ ರೂಪಾಯಿ ಅಕ್ರಮವಾಗಿ ಸಂಪಾದಿಸುತ್ತಿದ್ದರು.
ಪಂದ್ಯದ ಸಮಯದಲ್ಲಿ ಈ ಗ್ಯಾಂಗ್ನ ಒಂದು ಬ್ಯಾಚ್ ಮೈದಾನದ ಒಳಗೆ ಹೋದರೆ ಇನ್ನೊಂದು ಬ್ಯಾಚ್ ಪ್ರತಿ ಬಾಲ್ಗೂ ಹೊರಗಡೆ ಬೆಟ್ಟಿಂಗ್ ನಡೆಸುತ್ತಿತ್ತು. ಕ್ರೀಡಾಂಗಣದಲ್ಲಿ ಕುಳಿತಿದ್ದ ಗ್ಯಾಂಗ್ನ ದಂಧೆಕೋರರು ಕಳುಹಿಸುವ ಮಾಹಿತಿ ಆಧರಿಸಿ ಹೊರಗಿರುವ ಮತ್ತೊಂದು ಗ್ಯಾಂಗ್ ಟಿವಿ ನೋಡಿಕೊಂಡು ಬೆಟ್ಟಿಂಗ್ ಹಾಕುತ್ತಿತ್ತು.
ಗ್ರೌಂಡ್ ಲೆವೆಲ್ ಮ್ಯಾಚ್ಗೂ ಟಿವಿಯ ಲೈವ್ ಮ್ಯಾಚ್ಗೂ 10 ಸೆಕೆಂಡಿನ ಅಂತರವಿದೆ. ಈ ಅಂತರವನ್ನೇ ತಮ್ಮ ಅನುಕೂಲಕ್ಕೆ ಮಾಡಿಕೊಂಡು ಹಲವೆಡೆ ಆರೋಪಿಗಳು ವಂಚನೆ ಮಾಡಿರುವುದು ತನಿಖೆ ವೇಳೆ ಬಯಲಿಗೆ ಬಂದಿತ್ತು.
Published On - 4:58 pm, Tue, 25 April 23