ಇನ್ಸ್ಟಾಗ್ರಾಮ್ನಲ್ಲಿ (Instagram) ಪರಿಚಯವಾಗಿದ್ದ ಯುವಕನ ಭೇಟಿಗೆಂದು ಬಂದಿದ್ದ ಮಹಿಳೆ ದರೋಡೆಗೆ (robbery) ಒಳಗಾಗಿದ್ದಾರೆ. 19 ವರ್ಷದ ಯುವಕನ ಭೇಟಿಗೆ ಬಂದಿದ್ದ 36 ವರ್ಷದ ಮಹಿಳೆಯ ಬಳಿ ರಾಬರಿ ಮಾಡಲಾಗಿದೆ. ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದ 36 ವರ್ಷದ ಮಹಿಳೆ ಮತ್ತು 19 ವರ್ಷದ ಮಹಾಂತೇಶ್ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದ. ಆರು ತಿಂಗಳಿನಿಂದ ಈ ಪರಿಚಯ ಪರಸ್ಪರ ಗಾಢ ಸ್ನೇಹಕ್ಕೆ ತಿರುಗಿತ್ತು. ಇದೇ ಜುಲೈ 12ನೇ ತಾರೀಖು ಸದರಿ ಮಹಿಳೆಯು ಯುವಕನ ಭೇಟಿಯಾಗಲು ಬಂದಿದ್ದರು.
ಇಬ್ಬರೂ ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ದೇವಾಲಯದ ಬಳಿ ಭೇಟಿಯಾಗಲು ಬಂದಿದ್ರು. ದೇವಾಲಯಕ್ಕೆ ಹೋಗಿ, ಬಳಿಕ ಅಲ್ಲಿಯೇ ಬಂಡೆಯ ಮೇಲೆ ಕುಳಿತಿದ್ದಾಗ ಬಂದ ದುಷ್ಕರ್ಮಿಗಳು ಬಂದಿದ್ದಾರೆ. ಇದೇ ವೇಳೆ ಅಸಾಮಿಗಳು ರಾಬರಿ ನಡೆಸಿ ಎಸ್ಕೇಪ್ ಆಗಿದ್ದಾರೆ. ಈ ಪ್ರಕರಣದಲ್ಲಿ ಸುರೇಶ್ (23) ಮತ್ತು ಗುರು(24) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ (Bannerghatta Police).
ಚಂಪಕಧಾಮಸ್ವಾಮಿ ದೇವಾಲಯದ ಬಳಿ ಏನು ನಡೆದಿತ್ತು ಅಲ್ಲಿ?:
ಸದರಿ ಯುವಕ ಮತ್ತು ವಿವಾಹಿತ ಮಹಿಳೆ ಚಂಪಕಧಾಮಸ್ವಾಮಿ ದೇವಾಲಯದ ಬಳಿ ಇದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಗಳಿಬ್ಬರೂ ವಿಡಿಯೋ ಮಾಡಿಕೊಂಡು ನಿಮ್ಮ ಕುಟುಂಬದವರಿಗೆ ತಿಳಿಸೋದಾಗಿ ಬೆದರಿಕೆ ಹಾಕಿದ್ದಾರೆ. ಮದುವೆಯಾಗಿದ್ದರೂ ಪರ ಪುರುಷನ ಜೊತೆ ಬಂದಿರೋದಾಗಿ ತಿಳಿಸುತ್ತೇವೆಂದು ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ಅದೇ ರೀತಿ ಯುವಕನನ್ನು ಹೆದರಿಸಿದ್ದ ಕಿರಾತಕರು ಪೊಲೀಸರಿಗೆ ಹೇಳಿ ಜೈಲಿಗೆ ಕಳುಹಿಸುತ್ತೇವೆಂದು ಬೆದರಿಕೆ ಹಾಕಿದ್ದಾರೆ.
ದುಷ್ಕರ್ಮಿಗಳಿಬ್ಬರೂ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಚೈನ್ ಮತ್ತು ಮೊಬೈಲ್ ಕಿತ್ತುಕೊಂಡಿದ್ದಾರೆ. ಆರೋಪಿಗಳು ಯುವಕ ಮಹಾಂತೇಶ್ ಬಳಿ ಹಣ ನೀಡುವಂತೆ ಬೆದರಿಸಿದ್ದಾರೆ. ಅದರಂತೆ ಮಹಾಂತೇಶ್ ತನ್ನ ಸ್ನೇಹಿತನ ಮೊಬೈಲಿಗೆ ಪೋನ್ ಮಾಡಿ ಆರೋಪಿಗಳ ನಂಬರಿಗೆ 10 ಸಾವಿರ ರೂಪಾಯಿ ಪೋನ್ ಪೇ ಮಾಡಿಸಿದ್ದ. ದುಷ್ಕರ್ಮಿಗಳಿಬ್ಬರೂ ಜೋಡಿಯಿಂದ ಚಿನ್ನ, ಮೊಬೈಲ್, ನಗದು ದೋಚಿ ಪರಾರಿಯಾಗಿದ್ದರು.
ಅದಾದ ಮೇಲೆ ಮಹಿಳೆ ಹಾಗೂ ಯುವಕನಿಂದ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಬನ್ನೇರುಘಟ್ಟ ಪೊಲೀಸರು ತಲಾಷೆ ನಡೆಸಿ, ಸಮೀಪದ ಕೋಳಿಫಾರಂ ಗೇಟ್ ಬಳಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 30 ಗ್ರಾಂ ಚಿನ್ನದ ಸರ, ಹತ್ತು ಸಾವಿರ ನಗದು, ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಇನ್ಸ್ ಪೆಕ್ಟರ್ ಉಮಾಮಹೇಶ್ ನೇತೃತ್ವದ ತಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಾದ ಸುರೇಶ್ ಹಾಗೂ ಗುರು ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಆನೇಕಲ್ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ