ಅದೇನ್ ಧೈರ್ಯ ಗುರು! ಜಡ್ಜ್​​​ ಸಹಿ ನಕಲು ಮಾಡಿ ಕೋಟ್ಯಂತರ ರೂ ಜಮೀನು ಗುಳುಂ

ನ್ಯಾಯಾಧೀಶರ ಸಹಿ ನಕಲು ಮಾಡಿ ಕೋಟ್ಯಂತರ ರೂ ಮೌಲ್ಯದ ಜಮೀನು ಕಬಳಿಕೆ ಮಾಡಿದ ಘಟನೆ ಆನೇಕಲ್‌ನಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಅಮಾಯಕತನ ದುರುಪಯೋಗಪಡಿಸಿಕೊಂಡು ಸಂಬಂಧಿ ಮತ್ತು ಆತನ ಸಹಚರರು ಜಮೀನಿನ ಮಾಲೀಕರು ಮತ್ತು ನ್ಯಾಯಾಧೀಶರ ನಕಲಿ ಸಹಿ ಬಳಸಿ ವಂಚನೆ ಮಾಡಿದ್ದಾರೆ.

ಅದೇನ್ ಧೈರ್ಯ ಗುರು! ಜಡ್ಜ್​​​ ಸಹಿ ನಕಲು ಮಾಡಿ ಕೋಟ್ಯಂತರ ರೂ ಜಮೀನು ಗುಳುಂ
ವಂಚನೆಗೊಳಗಾದ ಮಹಿಳೆ
Edited By:

Updated on: Dec 22, 2025 | 9:26 PM

ಆನೇಕಲ್​, ಡಿಸೆಂಬರ್​ 22: ನಕಲಿ ದಾಖಲೆ ಸೃಷ್ಟಿಸಿ ಜಮೀನು (land) ಕಬಳಿಕೆ ಮಾಡುವವರನ್ನು ನೋಡಿದ್ದೇವೆ. ಆದರೆ ಇಲ್ಲಿ ಒಂದು ಹೆಜ್ಜೆ ಮುಂದೆ ಹೋದ ಆಸಾಮಿಗಳು ನ್ಯಾಯಾಧೀಶರ ಸಹಿಯನ್ನೇ ನಕಲು (Forged) ಮಾಡಿ ವಂಚನೆ ಮಾಡಿದ್ದಾರೆ. ಪತಿಯನ್ನ ಕಳೆದುಕೊಂಡಿದ್ದ ಮಹಿಳೆಯ ಅಮಾಯಕತನವನ್ನೇ ದುರಪಯೋಗ ಪಡಿಸಿಕೊಂಡ ಭೂಗಳ್ಳರು ಕೋಟ್ಯಂತರ ರೂ ಬೆಲೆಬಾಳುವ ಜಾಗವನ್ನ ಗುಳುಂ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ನಕಲಿ ಸಹಿ ಸೃಷ್ಟಿಸಿ ಜಾಗ ಕಬಳಿಕೆ 

ಸಿಲಿಕಾನ್ ಸಿಟಿ ಬೆಂಗಳೂರು ನಗರ ಬೆಳೆಯುತ್ತ ಹೋದಂತೆ ಒಂದೊಂದು ಅಡಿಗೂ ಕೂಡ ಚಿನ್ನದ ಬೆಲೆ ಬಂದಿದೆ‌. ಇದನ್ನೇ ಬಂಡವಾಳ ಮಾಡಿಕೊಂಡ ಭೂಗಳ್ಳರು ಜಮೀನು ಕಬಳಿಸುವುದಕ್ಕೆ ಮುಂದಾಗ್ತಾರೆ. ಅದೇ ರೀತಿ ಆನೇಕಲ್ ತಾಲ್ಲೂಕಿನ ಚಿಂತಲಮಡಿವಾಳ ಗ್ರಾಮದ ಸರ್ವೆ ನಂಬರ್ 43/2 ರ 28.8 ಗುಂಟೆ ಜಮೀನಿನ ಪೈಕಿ 14 ಗುಂಟೆ ಜಾಗವನ್ನ ನಕಲಿ ಸಹಿ ಮತ್ತು ನಕಲಿ ದಾಖಲೆಗಳನ್ನ ಸೃಷ್ಟಿಸಿ ಕಬಳಿಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 150 ಕೋಟಿ ರೂ ಮೌಲ್ಯದ ಸರ್ಕಾರಿ ಭೂಮಿ ದಾಖಲೆ ಫೋರ್ಜರಿ: ಅಧಿಕಾರಿಗಳ ವಿರುದ್ಧ FIR ದಾಖಲಾದ್ರೂ ಕ್ರಮವಿಲ್ಲ

ಮೃತ ವೆಂಕಟಸ್ವಾಮಿ ಎಂಬುವವವರ ಹೆಸರಿನಲ್ಲಿದ್ದ ಜಮೀನನ್ನ ಪತ್ನಿ ಜ್ಯೋತಮ್ಮರ ಹೆಸರಿಗೆ ಮಾಡಿಸಿ ಕೊಡುತ್ತೇವೆಂದು ನಂಬಿಸಿದ ಸಂಬಂಧಿ ಮುನಿರಾಜರಾಘವ ಅಲಿಯಾಸ್​ ಮುರಾರಿ ಮುನೇಶ್ವರ್ ರಾವ್ ಅ್ಯಂಡ್​ ಗ್ಯಾಂಗ್ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನ್ಯಾಯಾಧೀಶರ 3 ಸೈನ್, ಜೊತೆಗೆ ಜಮೀನು ಮಾಲೀಕ ಜ್ಯೋತಮ್ಮ, ಆಕೆಯ ಮಕ್ಕಳ ಒಟ್ಟು 16 ಸೈನ್​ಗಳನ್ನ ನಕಲು ಮಾಡಿ ಕೋರ್ಟ್ ಡಿಕ್ರಿ ಬಳಸಿ ಅತ್ತಿಬೆಲೆಯಲ್ಲಿ ರಿಜಿಸ್ಟರ್ ಮಾಡಿ ತದನಂತರ ಜಮೀಮಿನಿನ ಖಾತೆ ಮಾಡಿಸಿಕೊಂಡಿದ್ದಾರೆ. ಬಳಿಕ ಪಡುಗೋಲಸ ಶಿವಪ್ರಸಾದ್ ಎಂಬಾತನಿಕೆ ಜಮೀನು ಮಾರಾಟ ಮಾಡಲಾಗಿದೆ. ಈ ವಿಚಾರ ಜ್ಯೋತಮ್ಮ ಕುಟುಂಬಕ್ಕೆ ತಿಳಿದ ಕೂಡಲೇ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮುನಿರಾಜ್ ರಾಘವ, ಆಂಜಿನಪ್ಪ, ಅರುಣಾಕ್ಷಿ, ಪವಿತ್ರ, ಪೂಜಶ್ರೀ, ಸುಶ್ಮಿತ ಈ ಆರು ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಜ್ಯೋತಮ್ಮ ಸಂಬಂಧಿಯೇ ಆದ ಮುನಿರಾಜರಾಘವ ತಾನು ಮಂಗಳೂರಿನ ಇಸ್ಕಾನ್ ಟೆಂಪಲ್​ನಲ್ಲಿ ದೀಕ್ಷೆ ಪಡೆದಿದ್ದೇನೆ. ನಾನೊಬ್ಬ ದೇವ ಮಾನವ ಎಂದೆಲ್ಲಾ ಹೇಳಿ ನಿಮ್ಮ ಪತಿಯ ಹೆಸರಿನಲ್ಲಿರುವ  ಜಮೀನನ್ನ ನಿಮ್ಮ ಹೆಸರಿಗೆ ಮಾಡಿಕೊಡುತ್ತೇನೆಂದು ವಂಚಿಸಿದ್ದಾರೆ.

ಕಣ್ಣೀರು ಹಾಕಿ ಗೋಳಾಡಿದ ಮಹಿಳೆ

ಜಮೀನಿನಲ್ಲಿದ್ದ ಜ್ಯೋತಮ್ಮ ಪತಿ ವೆಂಕಟಸ್ವಾಮಿ ಸೇರಿದಂತೆ ಪೂರ್ವಿಕರ ಸಮಾಧಿಗಳನ್ನ ಜೆಸಿಬಿಗಳ ಮೂಲಕ ಧ್ವಂಸ ಮಾಡಲಾಗಿದೆ. ಜಮೀನು ಕಬಳಿಸಲು ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ನ್ಯಾಯಾಂಗ ವಂಚನೆ ಎಸಗಲಾಗಿದೆ. ನಮ್ಮ ಜಮೀನು ನಮಗೆ ಕೊಡಿಸಿ, ಆ ಜಮೀನಿನಲ್ಲಿ ನನ್ನ ಪತಿಯ ಸಮಾಧಿ ಇದೆ ಎಂದು ಜ್ಯೋತಮ್ಮ ಕಣ್ಣೀರು ಹಾಕಿ ಗೋಳಾಡಿದ್ದಾರೆ. ವಂಚನೆ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲು

ಇನ್ನು ನಕಲಿ ದಾಖಲೆ ಸೃಷ್ಟಿಸಿ ಬೆಲೆ ಬಾಳುವ ಜಮೀನನ್ನ ಲಪಟಾಯಿಸುವ ಭೂಗಳ್ಳರು ಹೆಚ್ಚಾಗುತ್ತಿದ್ದಾರೆ. ಅದೇ ರೀತಿ ಆನೇಕಲ್ ತಾಲೂಕಿನಲ್ಲಿ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ‌. ಜಮೀನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ವಂಚನೆ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.