
ಆನೇಕಲ್, ಮಾರ್ಚ್ 09: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಕರ್ಪೂರು ಗೇಟ್ ಬಳಿ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಕಿಡ್ನ್ಯಾಪ್ (Kidnap) ಆಗಿದ್ದು, ಪ್ರಕರಣ ಸಂಬಂಧ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್ ಅಲಿಯಾಸ್ ಗೋಪಿ ಎಂಬ ರಿಯಲ್ ಎಸ್ಟೇಟ್ ಏಜೆಂಟ್ ಅವರನ್ನು ಮಾರ್ಚ್ 8ರಂದು ಸಂಜೆ 7.30ರ ಸುಮಾರಿಗೆ ಕಿಡ್ನ್ಯಾಪ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗೋಪಾಲ್ ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಕರ್ಪೂರು ಗೇಟ್ ಬಳಿ ಗೋಪಾಲ್ ಹಾಗೂ ಸತೀಶ್ ಇದ್ದ ಕಾರಿಗೆ ವಾಹನದಿಂದ ಡಿಕ್ಕಿ ಹೊಡೆದ ಕಿಡಿಗೇಡಿಗಳು ಸ್ಪ್ರೇ ಹಾಕಿ ದಾಳಿ ನಡೆಸಿ ಅವರನ್ನು ಅಪಹರಿಸಿರುವುದಾಗಿ ಕುಟುಂಬಸ್ಥರು ಆರೋಪಿಸದ್ದಾರೆ.
ಕುಟುಂಬಸ್ಥರ ಶಂಕೆ ಅನ್ವಯ ಜಿಗಣಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೋಹನ್ ಬಾಬು, ಹರೀಶ್ ಹಾಗೂ ಕಿರಣ್ ಎಂಬುವರನ್ನು ಗೋಪಾಲ್ ಪತ್ನಿಯ ಆರೋಪದ ಮೇರೆಗೆ ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಅಪಹರಣಗೊಂಡ ಗೋಪಾಲ್ ಪತ್ತೆಗಾಗಿ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಇಂದು (ಮಾ.09) ಬೆಳಗಿನ ಜಾವ 9 ಇನ್ಸ್‌ಪೆಕ್ಟರ್‌ಗಳ ಸಹಭಾಗಿತ್ವದಲ್ಲಿ 7 ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡಗಳು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎನ್ನಲಾಗಿದೆ.
ಇದನ್ನೂ ಓದಿ ರಾಜ್ಯದಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು; ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ಘಟನೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್‌ಪಿ ಚಂದ್ರಕಾಂತ್ ಅವರು ಆನೇಕಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅಪಹರಣಗೊಂಡ ಗೋಪಾಲರನ್ನು ಶೀಘ್ರ ಪತ್ತೆಹಚ್ಚಲು ಪೊಲೀಸರು ಎಲ್ಲಾ ದಿಕ್ಕುಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.