ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲು

ಬಡವರ ಹೊಟ್ಟೆ ತುಂಬಲಿ ಎಂದು ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಸುಮಾರು ಕಡೆಗಳಲ್ಲಿ ದಾರಿ ತಪ್ಪುತ್ತಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಅನ್ನಭಾಗ್ಯ ಅಕ್ಕಿಯನ್ನು ಫಲಾನುಭವಿಗಳಿಂದ ಅಕ್ಕಿ ಖರೀದಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಸದ್ಯ ಈ ವಿಚಾರವಾಗಿ ಪ್ರಕರಣ ಕೂಡ ದಾಖಲಾಗಿದೆ.

ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲು
ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡ ಅಲೀಮ್ ವಿರುದ್ಧ ಪ್ರಕರಣ ದಾಖಲು

Updated on: Dec 20, 2025 | 6:43 AM

ಬೆಂಗಳೂರು, ಡಿಸೆಂಬರ್ 20: ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನಭಾಗ್ಯ ಅಕ್ಕಿ (Anna Bhagya Rice) ದಂಧೆಕೋರರ ಬುಟ್ಟಿ ಸೇರುತ್ತಿದೆ. ಯಲಚೇನಹಳ್ಳಿ ಕಾಂಗ್ರೆಸ್ (Congress) ಮುಖಂಡ ಅಲೀಮ್ ಬಿಪಿಎಲ್ ಕಾರ್ಡ್ ದಾರರಿಂದ ಕಡಿಮೆ ಬೆಲೆಗೆ ಅಕ್ಕಿ ಕೊಂಡು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ಕೆಆರ್​​ಎಸ್ ಪಾರ್ಟಿ ಆರೋಪ ಮಾಡಿದೆ. ಅಕ್ಕಿ ಸಾಗಾಟ ಮಾಡುವ ವೇಳೆಯಲ್ಲೇ ಕಾರ್ಯಾಚರಣೆ ನಡೆಸಿದ್ದ ಕೆಆರ್​​ಎಸ್ ಮುಖಂಡರು ಅಕ್ಕಿ ಸಮೇತ ಗಾಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ದಂಧೆ ಹಿಂದೆ ಕಾಂಗ್ರೆಸ್ ಮುಖಂಡ ಅಲೀಮ್ ಇದ್ದಾರೆ, ಇದನ್ನು ಬಯಲಿಗೆ ಎಳೆದ ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಕೆಆರ್​​ಎಸ್ ಪಕ್ಷದ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಅಲೀಮ್ ಸೇರಿ ನಾಲ್ವರ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೀಜ್ ಮಾಡಿದ ಟೆಂಪೋದಲ್ಲಿ 45 ಚೀಲ ಅಕ್ಕಿ ಮೂಟೆ ಪತ್ತೆ

ಸೀಜ್ ಮಾಡಲಾದ ಟೆಂಪೋದಲ್ಲಿ 45 ಚೀಲ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಇನ್ನು ಕೆಆರ್​​ಎಸ್ ಪಕ್ಷದ ಮುಖಂಡನ ಮನೆ ಸುತ್ತಮುತ್ತ ಅಲೀಮ್ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಲು ಯತ್ನಿಸುತ್ತಿದ್ದರು ಅಂತಲೂ ಆರೋಪ ಕೇಳಿಬಂದಿದೆ. ಬಿಡಿಎ ಕಚೇರಿಗಳಲ್ಲಿ ದಲ್ಲಾಳಿಯಾಗಿಯೂ ಅಲೀಮ್ ಕರಾಮತ್ತು ತೋರಿಸುತ್ತಿದ್ದರು ಎನ್ನಲಾಗಿದೆ.

ಯಲಚೆನಹಳ್ಳಿ, ಇಲಿಯಾಸ್ ನಗರ ಸುತ್ತಮುತ್ತ ಅಲೀಮ್ ಹಾಗೂ ಕೆಆರ್​​ಎಸ್ ಪಕ್ಷದ ಮುಖಂಡರ ನಡುವೆ ಹಲವು ದಿನಗಳಿಂದಲೂ ತಕರಾರು ಇದ್ದು, ಅನ್ನಭಾಗ್ಯ ಅಕ್ಕಿ ಮಾರಾಟದ ಜಾಲವನ್ನು ಕೆಆರ್​​ಎಸ್ ಪತ್ತೆ ಮಾಡಿದ ಬಳಿಕ ಜಟಾಪಟಿ ತೀವ್ರಗೊಂಡಿದೆ. ಒಟ್ಟಾರೆ ಈ ದಂಧೆಯ ಸಾರಾಂಶವನ್ನು ಪೊಲೀಸರು ಬಯಲಿಗೆ ಎಳೆಯಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ