ಬೆಂಗಳೂರು: ದೊಡ್ಡೇನಕುಂದಿ ಬಳಿಯ ಫರ್ನ್ ಸಿಟಿಯಲ್ಲಿ(Ferns City) ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ನಿರ್ಮಿಸಿದ್ದ ತಡೆಗೋಡೆ, ವಾಕಿಂಗ್ ಪಾಥ್, ಹೈಟೆಕ್ ಸ್ವಿಮ್ಮಿಂಗ್ ಪೂಲ್ ಹಾಗೂ ಐಶಾರಾಮಿ ಕ್ಲಬ್ಗಳನ್ನು ನಿನ್ನೆ(ಜೂನ್ 19) ಬಿಬಿಎಂಪಿ(BBMP) ಅಧಿಕಾರಿಗಳು ಸಂಪೂರ್ಣ ಪುಡಿ ಪುಡಿ ಮಾಡಿ ಹಾಕಿದ್ದರು. ಇಂದು(ಜೂನ್ 20) ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಜೆಸಿಬಿ ಘರ್ಜನೆ ಮುಂದುವರೆಯಲಿದೆ(Anti-encroachment Drive). ದೊಡ್ಡನಕುಂದಿ ಹಾಗೂ ಪಣತ್ತೂರು ಎರಡು ಕಡೆ ಇಂದು ಒತ್ತುವರಿ ಕಾರ್ಯಾಚರಣೆ ನಡೆಯಲಿದೆ.
ಪಾಲಿಕೆಯ ಟಾರ್ಗೆಟ್ನಲ್ಲಿ 600 ಅಕ್ರಮ ಸ್ಥಳಗಳಿದ್ದು ಪಾಲಿಕೆಗೆ ರಾಜ್ಯ ಸರ್ಕಾರದಿಂದ ಹದಿನೈದು ದಿನಗಳ ಡೆಡ್ ಲೈನ್ ಸಿಕ್ಕಿದೆ. ಮುಂದಿನ ಹದಿನೈದು ದಿನಗಳಲ್ಲಿ ಕೋರ್ಟ್ ತಡೆ ಇಲ್ಲದ ಅಕ್ರಮ ಒತ್ತುವರಿ ತೆರವು ಮಾಡಲು ಸರ್ಕಾರ ಡೆಡ್ ಲೈನ್ ನೀಡಿದೆ. ಹೀಗಾಗಿ ಅಕ್ರಮವಾಗಿ ಒತ್ತುವರಿಯಾಗಿರುವ ಕನಿಷ್ಠ 100 ಸ್ಥಳಗಳ ತೆರವಿಗೆ ಪಾಲಿಕೆ ಚಿಂತನೆ ನಡೆಸಿದೆ. ಈಗಾಗಲೆ ಹದಿನೈದು ದಿನಗಳ ಅಕ್ರಮ ಒತ್ತುವರಿ ಟಾರ್ಗೆಟ್ ಹಾಕಿಕೊಳ್ಳಲಾಗಿದೆ. ಸದ್ಯ 600 ಸ್ಥಳಗಳ ತೆರವು ಕಾರ್ಯಾಚರಣೆಗೆ ಪ್ಲಾನ್ ಮಾಡಿಕೊಂಡಿದ್ದು 600 ಪೈಕಿ 110 ಕಡೆ ಕೋರ್ಟ್ ನಿಂದ ತಡೆ ಆದೇಶ ಇದೆ. ಕಂದಾಯ ಇಲಾಖೆ ಎಲ್ಲೆಲ್ಲಿ ಸರ್ವೆ ರಿಪೋರ್ಟ್ ನೀಡಿದ್ದಾರೆ ಅಲ್ಲಿ ತೆರವಿಗೆ ಪಾಲಿಕೆ ಮುಂದಾಗಿದೆ.
ಇದನ್ನೂ ಓದಿ: Anti-encroachment drive: ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಾಗ ಸರ್ಕಾರಕ್ಕೆ ಕೇವಲ ಬಡವರ ಮನೆ ಮಾತ್ರ ಕಾಣಿಸುತ್ತವೆಯೇ?
ಕಳೆದ ಶನಿವಾರ ಮಹಾದೇಪುರದ ಸ್ಪೈಸ್ ಗಾರ್ಡನ್ ನಲ್ಲಿ ಬಿಬಿಎಂಪಿಗೆ ಆಗಿದ್ದು ಅಕ್ಷರಶಃ ಮುಖಭಂಗ. ತಡೆಯಾಜ್ಞೆ ಪ್ರತಿ ಎತ್ತಿ ಹಿಡಿದಾಗ ಬಿಬಿಎಂಪಿ ಅಧಿಕಾರಿಗಳು ನಗೆಪಾಟಲಿಗೆ ಈಡಾಗಿದ್ದರು. ಆದರೆ ನಿನ್ನೆ ಒತ್ತುವರಿ ತೆರವು ಕಾರ್ಯಾಚರಣೆಗೆಂದು ಬಂದಿದ್ದ ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವು ಮಾಡಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ದೊಡ್ಡೇನಕುಂದಿ ಕೆರೆಗೆ ಸಂಪರ್ಕ ಕಲ್ಪಿಸಿರುವ 60 ಅಡಿ ಅಗಲದ ರಾಜಕಾಲುವೆ ಸಂಪೂರ್ಣ ಒತ್ತುವರಿಯಾಗಿದೆ. ಇದರ ಮೇಲೆ ದೊಡ್ಡ ವಿಲ್ಲಾಗಳು, ಕ್ಲಬ್ ಗಳು, ಅಪಾರ್ಟ್ಮೆಂಟ್ ಗಳು, ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಉಳ್ಳವರು ತಮ್ಮ ಕೋಟೆ ಕಟ್ಟಿಕೊಂಡಿದ್ದರು. ಇದರ ತೆರವಿಗೆ ಬಿಬಿಎಂಪಿ ಮುಂದಾಗಿದ್ದು. ಈ ವೇಳೆ ಫರ್ನ್ಸ್ ಸಿಟಿ ಎಂಬ ಪ್ರೈವೇಟ್ ಲೇಔಟ್ ನ ನಿವಾಸಿಗಳು ಜೆಸಿಬಿಗೆ ಅಡ್ಡ ನಿಂತು ಹೈಡ್ರಾಮಾ ಮಾಡಿದರು. ಆಗ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ನಂದೀಶ್ ರೆಡ್ಡಿ ನಿವಾಸಿಗಳ ಜೊತೆಗೂಡಿ ತೆರವು ಕಾರ್ಯಾಚರಣೆಗೆ ತಡೆಯೊಡ್ಡಿದರು. ಈ ವೇಳೆ ಪಾಲಿಕೆ ಅಧಿಕಾರಿಗಳು ಹಾಗೂ ನಂದೀಶ್ ರೆಡ್ಡಿ ನಡುವೆ ವಾಗ್ವಾದವಾಯಿತು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಸಂಪೂರ್ಣ ಬಿಗಿಗೊಂಡಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಹಾದೇವಪುರ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಿವಾಸಿಗಳ ಜೊತೆ ಸೇರಿ ಪಾಲಿಕೆ ಅಧಿಕಾರಿಗಳ ಜೊತೆ ಮಾತಿನ ಯುದ್ದಕ್ಕೆ ಬಿದ್ದಿದ್ದ ನಂದೀಶ್ ರೆಡ್ಡಿ ಬಿಬಿಎಂಪಿ ಬುಲ್ಡೋಜರ್ ನ ಕೀ ಕಿತ್ತುಕೊಂಡು ಬಿಬಿಎಂಪಿ ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ಇದು ವಾತಾವರಣವನ್ನು ಮತ್ತಷ್ಟು ಹದಗೆಡಿಸಿತು.
ಬಳಿಕ ಪೊಲೀಸರ ಸಹಾಯದೊಂದಿಗೆ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದರು. ಈ ವೇಳೆ ಫರ್ನ್ಸ್ ಸಿಟಿ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ನಿರ್ಮಿಸಿದ್ದ ತಡೆಗೋಡೆ, ವಾಕಿಂಗ್ ಪಾಥ್, ಹೈಟೆಕ್ ಸ್ವಿಮ್ಮಿಂಗ್ ಪೂಲ್ ಹಾಗೂ ಐಶಾರಾಮಿ ಕ್ಲಬ್ ಗಳನ್ನು ಬಿಬಿಎಂಪಿ ಅಧಿಕಾರಿಗಳು ಸಂಪೂರ್ಣ ಪುಡಿ ಪುಡಿ ಮಾಡಿ ಹಾಕಿದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ